'SM ಕೃಷ್ಣಗೆ ಕಾಟ ಕೊಟ್ಟಂತೆ ಡಿಕೆಶಿಗೂ ಕಾಟ ಕೊಡಲು ಮುಂದಾಗಿರುವುದು ಎಷ್ಟು ಸರಿ? ಒಕ್ಕಲಿಗರ ಶಾಪ ನಿಮಗೆ ತಟ್ಟದೆ ಬಿಡೋದಿಲ್ಲ'; Video
ಹಳೇ ಮೈಸೂರು ಭಾಗವನ್ನು ಮತ ಗಳಿಕೆ ಯಂತ್ರವಾಗಿ ದುರ್ಬಳಕೆ ಮಾಡಿಕೊಂಡಿರುವ ನೀವು, ಎಸ್.ಎಂ. ಕೃಷ್ಣ ಅವರಿಗೆ ಕಾಟ ಕೊಟ್ಟಂತೆ ಡಿ.ಕೆ. ಶಿವಕುಮಾರ್‌ಗೂ ಕಾಟ ಕೊಡಲು ಮುಂದಾಗಿರುವುದು ಎಷ್ಟು ಸರಿ? ಒಕ್ಕಲಿಗರು ಸಿಎಂ ಆಗುವುದು ನಿಮಗಿಷ್ಟವಿಲ್ಲವೇ ಎಂದರು

ಮಂಡ್ಯ: ಬಿಡದಿ ವ್ಯಾಪ್ತಿಗೆ ಬರಬೇಕಿದ್ದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ದೇವನಹಳ್ಳಿ ಪಾಲಾಯಿತು. ಸಾಫ್ಟ್‌ವೇರ್ ಉದ್ಯಮಗಳು ಎಲೆಕ್ಟ್ರಾನಿಕ್ ಸಿಟಿಯ ವಶವಾದವು. ಪ್ರಸ್ತುತ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬಿಡದಿ ಬಳಿ ಸ್ಥಾಪಿಸಲು ಉದ್ದೇಶಿಸಿದ್ದ ಡೇಟಾ ಸೆಂಟರ್‌ಗೆ ವಿರೋಧಿಸುವ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಹಳೇ ಮೈಸೂರು ಭಾಗದ ಒಕ್ಕಲಿಗರ ಶಾಪ ತಟ್ಟದೇ ಇರುವುದಿಲ್ಲ ಎಂದು ಶಾಸಕ ಗಣಿಗ ರವಿಕುಮಾರ್ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಳೇ ಮೈಸೂರು ಭಾಗವನ್ನು ಮತ ಗಳಿಕೆ ಯಂತ್ರವಾಗಿ ದುರ್ಬಳಕೆ ಮಾಡಿಕೊಂಡಿರುವ ನೀವು, ಎಸ್.ಎಂ. ಕೃಷ್ಣ ಅವರಿಗೆ ಕಾಟ ಕೊಟ್ಟಂತೆ ಡಿ.ಕೆ. ಶಿವಕುಮಾರ್‌ಗೂ ಕಾಟ ಕೊಡಲು ಮುಂದಾಗಿರುವುದು ಎಷ್ಟು ಸರಿ? ಒಕ್ಕಲಿಗರು ಸಿಎಂ ಆಗುವುದು ನಿಮಗಿಷ್ಟವಿಲ್ಲವೇ ಎಂದರು.
ವಿಮಾನ ನಿಲ್ದಾಣ ಮತ್ತು ಸಾಫ್ಟ್‌ವೇರ್ ಕಂಪನಿ ಯೋಜನೆಗಳು ಬಿಡದಿ ಭಾಗದಲ್ಲಿ ಆಗಿದ್ದರೆ ಮಂಡ್ಯ ಮತ್ತು ಬಿಡದಿ ವ್ಯಾಪ್ತಿಯ ರೈತರ ಭೂಮಿಯ ಬೆಲೆ ಬಂಗಾರವಾಗುತ್ತಿತ್ತು. ಅದನ್ನು ತಪ್ಪಿಸಿ ನಿಮ್ಮ ಆಸ್ತಿ ರಕ್ಷಿಸಿಕೊಂಡಿದ್ದೀರಿ ಎಂದು ಆರೋಪಿಸಿದರು.
ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗಿರುವುದನ್ನು ಸಹಿಸಲು ನಿಮ್ಮಿಂದ ಸಾಧ್ಯವಾಗುತ್ತಿಲ್ಲ. ಬಿಡದಿ ಬಳಿ ಡೇಟಾ ಸೆಂಟರ್ ಸೇರಿದಂತೆ ಟೌನ್‌ಶಿಪ್ ನಿರ್ಮಾಣ ಮಾಡಲು ಹೊರಟರೆ ಪ್ರತಿಭಟನೆಯ ಮೂಲಕ ವಿರೋಧ ವ್ಯಕ್ತ ಮಾಡುತ್ತೀರಿ. ಇದರಿಂದ ನಿಮಗೇನು ಪ್ರಯೋಜನ ಎಂದು ಪ್ರಶ್ನಿಸಿದರು.
ಎಚ್.ಡಿ. ದೇವೇಗೌಡ ಮತ್ತು ರೇವಣ್ಣ ಅವರಿಂದ ಹಾಸನ ಸಾಕಷ್ಟು ಅಭಿವೃದ್ದಿ ಕಂಡಿದೆ. ನಿಮ್ಮನ್ನು ನಂಬಿ ಅಧಿಕಾರ ನೀಡಿರುವ ಮಂಡ್ಯ, ಮೈಸೂರು, ಬೆಂಗಳೂರು ದಕ್ಷಿಣ ಜಿಲ್ಲೆಗೆ ನಿಮ್ಮ ಕೊಡುಗೆ ಏನು? ಇದನ್ನು ಪ್ರಶ್ನಿಸಿದರೆ ಮರು ಪ್ರಶ್ನೆ ಹಾಕಿ ಬಾಯಿ ಮುಚ್ಚಿಸುತ್ತೀರಿ. ಬೆಂಗಳೂರಿನಿಂದ ಮೈಸೂರು ವ್ಯಾಪ್ತಿಯ ಜಿಲ್ಲೆಗಳ ಜನರ ಮತ ಪಡೆದು ಏನು ಮಾಡಿದ್ದೀರಿ ತಿಳಿಸಿ ಎಂದು ಪ್ರಶ್ನಿಸಿದರು.
ಸಿಎಂ ಡಿ.ಕೆ. ಶಿವಕುಮಾರ್ ಅವರ ವಿರುದ್ಧ ಪ್ರತಿದಿನವೂ ಸಂಚು ನಡೆಯುತ್ತಿದೆ. ಅಮಿತ್ ಶಾ ಅವರೊಂದಿಗೆ ಕೈಜೋಡಿಸಿರುವ ಕುಮಾರಸ್ವಾಮಿ ಅವರು, ಕೇಂದ್ರ ತನಿಖಾ ಸಂಸ್ಥೆಗಳಾದ ಇಡಿ (ED) ಮತ್ತು ಸಿಬಿಐ (CBI) ಅನ್ನು ಬಳಸಿಕೊಂಡು ಸಿಎಂ ಅವರನ್ನ ಜೈಲಿಗಾಕಲು ಷಡ್ಯಂತ್ರ ನಡೆಸುತ್ತಿದ್ದಾರೆ. ಕುಮಾರಸ್ವಾಮಿ ಅವರಿಗೆ ಅಭಿವೃದ್ಧಿ ಮಾಡಲೂ ಆಗುವುದಿಲ್ಲ, ಅಭಿವೃದ್ಧಿ ಮಾಡುವವರಿಗೂ ಅವರು ಬಿಡುವುದಿಲ್ಲ' ಎಂದು ಕಿಡಿಕಾರಿದರು.
ಕೇಂದ್ರ ಕೈಗಾರಿಕಾ ಸಚಿವರಾಗಿರುವ ಕುಮಾರಸ್ವಾಮಿ ಅವರ ಕಾರ್ಯವೈಖರಿಯನ್ನು ಟೀಕಿಸಿದ ಅವರು, 'ಕೈಗಾರಿಕೆ ತನ್ನಿ ಎಂದರೆ ನನ್ನನ್ನ ಯಾಕೆ ಕೇಳ್ತೀರಾ ಎನ್ನುತ್ತಾರೆ. ನೀವು ಕೈಗಾರಿಕಾ ಸಚಿವರಾದ ಮೇಲೆ ನಾವು ಕೈಗಾರಿಕೆಯನ್ನೇ ಕೇಳಬೇಕು. ಹಾಸನದ ಅಭಿವೃದ್ಧಿಯಲ್ಲಿ ನಿಮ್ಮ ಪಾತ್ರ ಶೂನ್ಯ. ರೇವಣ್ಣ ಮತ್ತು ದೇವೇಗೌಡರ ಕಾರಣದಿಂದ ಹಾಸನ ಅಭಿವೃದ್ಧಿಯಾಗಿದೆ' ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



