ಲೋಕ ಅದಾಲತ್ ಮೆಗಾ ದಾಖಲೆ: ಶೇ.50 ಟ್ರಾಫಿಕ್ ದಂಡದ ರಿಯಾಯತಿಯ 19 ಲಕ್ಷ ಕೇಸ್ ಕ್ಲೋಸ್; 55 ಕೋಟಿ ರೂ ಆದಾಯ!
ಜುಲೈ 11 ರಂದು ರಾಜ್ಯಾದ್ಯಂತ ನಡೆದ ಲೋಕ ಅದಾಲತ್‌ನಲ್ಲಿ ಒಟ್ಟು 78.79 ಲಕ್ಷ ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದ್ದು, ಇದರಲ್ಲಿ 2.54 ಲಕ್ಷ ಬಾಕಿ ಇದ್ದ ಪ್ರಕರಣಗಳು ಹಾಗೂ 76.25 ಲಕ್ಷ ಪೂರ್ವ ವ್ಯಾಜ್ಯ ಪ್ರಕರಣಗಳು ಸೇರಿವೆ.

ಬೆಂಗಳೂರು: ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ವಿಶೇಷ ಪ್ರಯತ್ನದ ಫಲವಾಗಿ, ರಾಜ್ಯ ಸರ್ಕಾರವು ಸಂಚಾರ ನಿಯಮ ಉಲ್ಲಂಘನೆಯ ಬಾಕಿ ದಂಡದ ಪಾವತಿಗೆ ಘೋಷಿಸಿದ್ದ ಶೇಕಡಾ 50 ರಷ್ಟು ರಿಯಾಯಿತಿ ಯೋಜನೆಗೆ ಸಾರ್ವಜನಿಕರಿಂದ ಅಭೂತಪೂರ್ವ ಸ್ಪಂದನೆ ಸಿಕ್ಕಿದೆ.
ಈ ರಿಯಾಯಿತಿ ಯೋಜನೆಯಡಿ ಒಟ್ಟು 19,13,659 ಸಂಚಾರ ಚಲನ್ ಪ್ರಕರಣಗಳು ಇತ್ಯರ್ಥಗೊಂಡಿದ್ದು, ಸರ್ಕಾರದ ಬೊಕ್ಕಸಕ್ಕೆ ಬರೋಬ್ಬರಿ 55 ಕೋಟಿ ರೂಪಾಯಿ ದಂಡದ ಆದಾಯ ಹರಿದುಬಂದಿದೆ.
ಜುಲೈ 11 ರಂದು ರಾಜ್ಯಾದ್ಯಂತ ನಡೆದ ಲೋಕ ಅದಾಲತ್‌ನಲ್ಲಿ ಒಟ್ಟು 78.79 ಲಕ್ಷ ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದ್ದು, ಇದರಲ್ಲಿ 2.54 ಲಕ್ಷ ಬಾಕಿ ಇದ್ದ ಪ್ರಕರಣಗಳು ಹಾಗೂ 76.25 ಲಕ್ಷ ಪೂರ್ವ ವ್ಯಾಜ್ಯ ಪ್ರಕರಣಗಳು ಸೇರಿವೆ. ಇಡೀ ಪ್ರಕ್ರಿಯೆಯಲ್ಲಿ ಒಟ್ಟು 3,017 ಕೋಟಿ ರೂಪಾಯಿಗಳಷ್ಟು ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ.
ಜೂನ್ 21 ರಿಂದ ಜುಲೈ 10 ರವರೆಗೆ 20 ದಿನಗಳವರೆಗೆ ಸಂಚಾರ ಚಲನ್‌ಗೆ ರಿಯಾಯಿತಿಯನ್ನು ನೀಡಲಾಯಿತು. ಲೋಕ ಅದಾಲತ್‌ನಲ್ಲಿ ಇತ್ಯರ್ಥವಾದ ಪ್ರಕರಣಗಳ ಅಂಕಿಅಂಶಗಳ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಹೈಕೋರ್ಟ್‌ನ ಹಿರಿಯ ನ್ಯಾಯಾಧೀಶೆ ಮತ್ತು ಕೆಎಸ್‌ಎಲ್‌ಎಸ್‌ಎ ಕಾರ್ಯನಿರ್ವಾಹಕ ಅಧ್ಯಕ್ಷೆ ಅನು ಶಿವರಾಮನ್, ಸಾರಿಗೆ ಇಲಾಖೆಗೆ ಸಂಬಂಧಿಸಿದ 1,212 ಪ್ರಕರಣಗಳನ್ನು ವಿಲೇವಾರಿ ಮಾಡುವ ಮೂಲಕ 61.99 ಲಕ್ಷ ರೂ.ಗಳನ್ನು ವಸೂಲಿ ಮಾಡಲಾಗಿದೆ ಎಂದು ಹೇಳಿದರು.
ಲೋಕ ಅದಾಲತ್‌ನ ಯಶಸ್ಸಿನ ಕಥೆಯನ್ನು ವಿವರಿಸುತ್ತಾ, ರಾಜ್ಯಾದ್ಯಂತ ಹಿರಿಯ ನಾಗರಿಕರಿಗೆ ಸಂಬಂಧಿಸಿದ 1,948 ಪ್ರಕರಣಗಳ ಇತ್ಯರ್ಥಕ್ಕೆ ಇದು ಸಹಾಯ ಮಾಡಿದೆ ಎಂದು ಹೇಳಿದರು. ಇದಲ್ಲದೆ, ಧಾರವಾಡ ಜಿಲ್ಲೆಯಲ್ಲಿ 2.45 ಕೋಟಿ ರೂ.ಗಳಿಗೆ ಮೋಟಾರು ವಾಹನ ಅಪಘಾತ ಪ್ರಕರಣವನ್ನು ಇತ್ಯರ್ಥಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.
ಒಟ್ಟಾರೆಯಾಗಿ, 2,776 ವೈವಾಹಿಕ ವಿವಾದಗಳು, 3,590 ಪಾರ್ಟಿಷನ್ ಮೊಕದ್ದಮೆಗಳು, 4,496 ಮೋಟಾರು ವಾಹನ ಅಪಘಾತ ಪ್ರಕರಣಗಳು, ನೆಗೋಷಿಯೇಬಲ್ ಇನ್ಸ್ಟ್ರುಮೆಂಟ್ಸ್ ಕಾಯ್ದೆಯಡಿ 10,817 ಪ್ರಕರಣಗಳು, 155 ಗ್ರಾಹಕ ಪ್ರಕರಣಗಳು ಮತ್ತು 18 ರೇರಾ ಪ್ರಕರಣಗಳನ್ನು ಲೋಕ ಅದಾಲತ್‌ನಲ್ಲಿ ಇತ್ಯರ್ಥಪಡಿಸಲಾಗಿದೆ ಎಂದರು.
ವಿಶೇಷ ಲೋಕ ಅದಾಲತ್
ನೆಗೋಷಿಯೇಬಲ್ ಇನ್ಸ್ಟ್ರುಮೆಂಟ್ಸ್ ಕಾಯ್ದೆಯಡಿ ಬಾಕಿ ಇರುವ ಪ್ರಕರಣಗಳ ಇತ್ಯರ್ಥಕ್ಕಾಗಿ ಜುಲೈ 18 ರಂದು ವಿಶೇಷ ಲೋಕ ಅದಾಲತ್ ನಡೆಯಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



