ತಿರುಮಲದಲ್ಲಿ ಕರ್ನಾಟಕದ ಹೆಸರಿನಲ್ಲಿ ಮೊದಲ ಆರತಿ; ಮುಖ್ಯಮಂತ್ರಿಗಳಿಗೆ ಮಾತ್ರ ಇದ್ದ ಹಕ್ಕು ಇನ್ಮುಂದೆ ಸಚಿವ, ಶಾಸಕರಿಗೂ ಲಭ್ಯ!
ಹೊಸ ಪ್ರೋಟೋಕಾಲ್ ಜಾರಿಯಾದರೆ, ರಾಜ್ಯದ ಪರವಾಗಿ ದೇವಸ್ಥಾನಕ್ಕೆ ಭೇಟಿ ನೀಡುವ ಅರ್ಹ ಗಣ್ಯರೂ ಶ್ರೀ ವೆಂಕಟೇಶ್ವರ ಸ್ವಾಮಿ ಸನ್ನಿಧಿಯಲ್ಲಿ ನಿಂತು ಮೊದಲ ಆರತಿಯನ್ನು ಸ್ವೀಕರಿಸಲು ಅವಕಾಶ ದೊರೆಯಲಿದೆ.

ಬೆಂಗಳೂರು: ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಕರ್ನಾಟಕದ ಹೆಸರಿನಲ್ಲಿ ಸಲ್ಲಿಸಲಾಗುವ ಮೊದಲ ನಿತ್ಯ ಆರತಿ (First Aarti) ಸ್ವೀಕರಿಸಲು ರಾಜ್ಯದ ಚುನಾಯಿತ ಪ್ರತಿನಿಧಿಗಳು, ಹಿರಿಯ ಅಧಿಕಾರಿಗಳು ಹಾಗೂ ಗಣ್ಯರಿಗೆ ಅವಕಾಶ ಕಲ್ಪಿಸುವ ಸಂಬಂಧ ರಾಜ್ಯ ಸರ್ಕಾರ ಶೀಘ್ರದಲ್ಲೇ ಹೊಸ ಪ್ರೋಟೋಕಾಲ್ ಆದೇಶ ಹೊರಡಿಸಲಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಭಾನುವಾರ ಬನಶಂಕರಿ 6ನೇ ಹಂತದ ಲಿಂಗಧೀರನಹಳ್ಳಿಯಲ್ಲಿ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಪ್ರಸ್ತುತ ಕರ್ನಾಟಕದ ಪರವಾಗಿ ತಿರುಮಲದಲ್ಲಿರುವ ಕರ್ನಾಟಕ ವಿಶೇಷಾಧಿಕಾರಿ ಮೊದಲ ಆರತಿಯನ್ನು ಸ್ವೀಕರಿಸುತ್ತಿದ್ದಾರೆ. ಹೊಸ ಪ್ರೋಟೋಕಾಲ್ ಜಾರಿಯಾದ ಬಳಿಕ ರಾಜ್ಯದ ಪರವಾಗಿ ತಿರುಮಲಕ್ಕೆ ಭೇಟಿ ನೀಡುವ ಸಚಿವರು, ಶಾಸಕರು, ಹಿರಿಯ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳು, ನ್ಯಾಯಮೂರ್ತಿಗಳು ಹಾಗೂ ಇತರ ಅರ್ಹ ಗಣ್ಯರೂ ಈ ಗೌರವವನ್ನು ಪಡೆಯಲು ಅವಕಾಶ ಸಿಗಲಿದೆ ಎಂದು ಹೇಳಿದರು.
ಪ್ರಸ್ತುತ ಮುಖ್ಯಮಂತ್ರಿಗೆ ಮಾತ್ರ ತಿರುಮಲ ದೇವಸ್ಥಾನದ ಒಳಗಿನ ಮುಖ್ಯ ಪ್ರವೇಶದ್ವಾರದ ಸಮೀಪ ನಿಂತು ವಿಶೇಷ ಪೂಜೆ ಸಲ್ಲಿಸಲು ಅವಕಾಶವಿದೆ. ಹೊಸ ಪ್ರೋಟೋಕಾಲ್ ಜಾರಿಯಾದರೆ, ರಾಜ್ಯದ ಪರವಾಗಿ ದೇವಸ್ಥಾನಕ್ಕೆ ಭೇಟಿ ನೀಡುವ ಅರ್ಹ ಗಣ್ಯರೂ ಶ್ರೀ ವೆಂಕಟೇಶ್ವರ ಸ್ವಾಮಿ ಸನ್ನಿಧಿಯಲ್ಲಿ ನಿಂತು ಮೊದಲ ಆರತಿಯನ್ನು ಸ್ವೀಕರಿಸಲು ಅವಕಾಶ ದೊರೆಯಲಿದೆ ಎಂದು ತಿಳಿಸಿದರು.
ರಾಜ್ಯದ ಸೇವೆ ಸಲ್ಲಿಸುತ್ತಿರುವ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ಶ್ರೀ ವೆಂಕಟೇಶ್ವರ ಸ್ವಾಮಿಯ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸುವ ಅವಕಾಶ ಕಲ್ಪಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಈ ವೇಳೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನ ನಿರ್ಮಾಣ ಕಾರ್ಯಕ್ಕೆ ಮಾರ್ಗದರ್ಶನ ನೀಡುತ್ತಿರುವ ಆಧ್ಯಾತ್ಮಿಕ ಗುರು ದ್ವಾರಕಾನಾಥ್ ಅವರನ್ನು ಸಿಎಂ ಶ್ಲಾಘಿಸಿದರು.
ತಮ್ಮ ಜೀವನದ ಮಾರ್ಗದರ್ಶಕರಾಗಿರುವ ದ್ವಾರಕಾನಾಥ್ ಅವರ ಸಲಹೆಗಳನ್ನು ಮಾಜಿ ಮುಖ್ಯಮಂತ್ರಿಗಳಾದ ಡಿ. ದೇವರಾಜ ಅರಸು, ಎಸ್.ಎಂ. ಕೃಷ್ಣ ಹಾಗೂ ಧರ್ಮಸಿಂಗ್ ಅವರೂ ಪಡೆದಿದ್ದರು ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



