ಶೌಚಾಲಯ ಬಳಸುವ ನೆಪದಲ್ಲಿ ಮನೆಗೆ ನುಗ್ಗಿದ ಡೆಲಿವರಿ ಬಾಯ್: ಮಹಿಳೆಗೆ ಕಿರುಕುಳ; Flipkart ಸ್ಪಷ್ಟನೆ, Video ವೈರಲ್
ಮಹಿಳೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅಲ್ಲದೆ ಬೆಂಗಳೂರಿನಲ್ಲಿ ಮಹಿಳೆಯರ ಸುರಕ್ಷತೆ ಬಗ್ಗೆ ಸಾಕಷ್ಟು ಪ್ರಶ್ನೆ ಮೂಡಿಸಿದೆ.

ಬೆಂಗಳೂರು: ಬೆಂಗಳೂರಿನಲ್ಲಿ ಪಾರ್ಸೆಲ್ ನೀಡಲು ಬಂದ ಡೆಲಿವರಿ ಏಜೆಂಟ್ ಓರ್ವ ಶೌಚಾಲಯ ಬಳಸುವ ನೆಪದಲ್ಲಿ ಮಹಿಳೆಯೊಬ್ಬರ ಮನೆಗೆ ಬಲವಂತವಾಗಿ ನುಗ್ಗಿ ಅಸಭ್ಯವಾಗಿ ವರ್ತಿಸಿ ಕಿರುಕುಳ ನೀಡಿರುವ ಆಘಾತಕಾರಿ ಘಟನೆ ನಡೆದಿದೆ.
ಪಾರ್ಸೆಲ್ ನೀಡಲು ಬಂದ ಇ-ಕಾಮರ್ಸ್ ಸಂಸ್ಥೆಯೊಂದರ ಡೆಲಿವರಿ ಏಜೆಂಟ್, ಶೌಚಾಲಯ ಬಳಸುವ ನೆಪದಲ್ಲಿ ಮಹಿಳೆಯೊಬ್ಬರ ಮನೆಗೆ ಬಲವಂತವಾಗಿ ನುಗ್ಗಿ ಅಸಭ್ಯವಾಗಿ ವರ್ತಿಸಿ ಕಿರುಕುಳ ನೀಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಸಂತ್ರಸ್ತ ಮಹಿಳೆ ಸಾಮಾಜಿಕ ಜಾಲತಾಣದ ಮೂಲಕ ತಮಗಾದ ಭೀಕರ ಅನುಭವವನ್ನು ಹಂಚಿಕೊಂಡಿದ್ದಾರೆ.
ಮಹಿಳೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅಲ್ಲದೆ ಬೆಂಗಳೂರಿನಲ್ಲಿ ಮಹಿಳೆಯರ ಸುರಕ್ಷತೆ ಬಗ್ಗೆ ಸಾಕಷ್ಟು ಪ್ರಶ್ನೆ ಮೂಡಿಸಿದೆ.
ಆಗಿದ್ದೇನು?
ಸಂತ್ರಸ್ತ ಮಹಿಳೆ ಹೇಳುವಂತೆ ಪಾರ್ಸೆಲ್ ತಲುಪಿಸಲು ಬಂದ ಡೆಲಿವರಿ ಬಾಯ್ ತುರ್ತಾಗಿ ಶೌಚಾಲಯ ಬಳಸಬೇಕೆಂದು ಅನುಮತಿ ಕೇಳಿದ್ದಾನೆ. ಅಪರಿಚಿತರನ್ನು ಮನೆಗೆ ಬಿಟ್ಟುಕೊಳ್ಳಲು ಸಾಧ್ಯವಿಲ್ಲ ಎಂದು ಮಹಿಳೆ ಸ್ಪಷ್ಟವಾಗಿ ನಿರಾಕರಿಸಿದ್ದಾರೆ.
ತುರ್ತು ಪರಿಸ್ಥಿತಿ ಇದ್ದರೆ ಪಕ್ಕದ ಮನೆಯ ಪುರುಷರ ಸಹಾಯ ಕೇಳುವಂತೆ ಮಹಿಳೆ ಸಲಹೆ ನೀಡಿದ್ದಾರೆ. ಆದರೆ, ಮಹಿಳೆಯ ಮಾತನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ ಆತ, ಬಲವಂತವಾಗಿ ತನ್ನ ಪಾದರಕ್ಷೆಗಳನ್ನು ಬಿಚ್ಚಿ ಅನುಮತಿಯಿಲ್ಲದೆ ಫ್ಲಾಟ್ ಒಳಗೆ ನುಗ್ಗಿ ಶೌಚಾಲಯಕ್ಕೆ ತೆರಳಿದ್ದಾನೆ.
ಶೌಚಾಲಯದಿಂದ ಹೊರಬಂದು ಅಸಭ್ಯ ವರ್ತನೆ
ಮಹಿಳೆ ವಿರೋಧಿಸಿದರೂ ಶೌಚಾಲಯಕ್ಕೆ ಹೋದ ಆತ, ಅಲ್ಲಿಂದ ಹೊರಬಂದ ಬಳಿಕ ಮಹಿಳೆಯ ಎದುರು ಅತ್ಯಂತ ಅಸಭ್ಯವಾಗಿ ನಡೆದುಕೊಂಡಿದ್ದಾನೆ ಹಾಗೂ ವಿಕೃತವಾಗಿ ವರ್ತಿಸಿದ್ದಾನೆ. ಡೆಲಿವರಿ ಬಾಯ್ ನ ಈ ದೂರ್ತ ವರ್ತನೆಯಿಂದ ಆಘಾತಕ್ಕೊಳಗಾದ ಮಹಿಳೆ ತನಗೆದುರಾದ ಭಯಾನಕ ಕ್ಷಣವನ್ನು ತನ್ನ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಅಲ್ಲದೆ ಆತನನ್ನು ಪ್ರಶ್ನಿಸಿ ಪೊಲೀಸ್ ದೂರು ನೀಡುವುದಾಗಿ ಹೇಳಿದ್ದಾಳೆ. ಈ ವೇಳೆ ಡೆಲಿವರಿ ಬಾಯ್ ಅಲ್ಲಿಂದ ಕಾಲ್ಕಿತ್ತಿದ್ದಾನೆ.
ಪೊಲೀಸ್ ಕ್ರಮ, ಆರೋಪಿ ಬಂಧನ
ಸಾಮಾಜಿಕ ಜಾಲತಾಣದಲ್ಲಿ ಮಹಿಳೆಯ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಬೆಂಗಳೂರು ನಗರ ಪೊಲೀಸರು ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಮಹಿಳೆಯಿಂದ ಅಗತ್ಯ ವಿವರಗಳನ್ನು ಪಡೆದುಕೊಂಡು, ಆರೋಪಿ ಡೆಲಿವರಿ ಏಜೆಂಟ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. ಈಗಾಗಲೇ ಮಾರತ್ತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ.
ಈ ಕುರಿತು ಮಾಹಿತಿ ನೀಡಿದ ಬೆಂಗಳೂರು ವೈಟ್‌ಫೀಲ್ಡ್ ವಿಭಾಗದ ಡಿಸಿಪಿ, ದೂರುದಾರೆ ನಿಲೂಫರ್ ಫಾತಿಮಾ ನೀಡಿದ ದೂರಿನ ಆಧಾರದ ಮೇಲೆ ಫ್ಲಿಪ್‌ಕಾರ್ಟ್ ಡೆಲಿವರಿ ಏಜೆಂಟ್ ವಿಜಯ್ ಮಲ್ಲಿಕಾರ್ಜುನ ಕಾಮತ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.
ದೂರಿನ ಆಧಾರದ ಮೇಲೆ ಮಾರತ್ತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಂಖ್ಯೆ 345/2026 ದಾಖಲಿಸಲಾಗಿದ್ದು, ಭಾರತೀಯ ನ್ಯಾಯ ಸಂಹಿತೆ (BNS)ಯ ಸೆಕ್ಷನ್ 75, 79 ಹಾಗೂ 329(2) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಯನ್ನು ಬಂಧಿಸಲಾಗಿದ್ದು, ಅವರ ವಿರುದ್ಧ ಕಾನೂನು ಕ್ರಮ ಆರಂಭಿಸಲಾಗಿದೆ ಎಂದು ಡಿಸಿಪಿ ತಿಳಿಸಿದ್ದಾರೆ.
ಕ್ರಮದ ಭರವಸೆ ಕೊಟ್ಟ ಫ್ಲಿಪ್ ಕಾರ್ಟ್
ಇತ್ತ ಇ-ಕಾಮರ್ಸ್ ಸಂಸ್ಥೆಯಾದ ಫ್ಲಿಪ್‌ಕಾರ್ಟ್ ಕೂಡ ಈ ಘಟನೆಗೆ ವಿಷಾದ ವ್ಯಕ್ತಪಡಿಸಿದ್ದು, ನಮ್ಮ ಸಿಬ್ಬಂದಿಯ ಇಂತಹ ನಡವಳಿಕೆಯನ್ನು ನಾವು ಗಂಭೀರವಾಗಿ ಪರಿಗಣಿಸುತ್ತೇವೆ. ಈ ಬಗ್ಗೆ ಆಂತರಿಕ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದೆ. ಈ ಘಟನೆಯು ಸ್ವಂತ ಮನೆಯಲ್ಲೇ ಮಹಿಳೆಯರ ಸುರಕ್ಷತೆಯ ಬಗ್ಗೆ ತೀವ್ರ ಕಳವಳ ಮೂಡಿಸಿದೆ.
ಫ್ಲಿಪ್ ಕಾರ್ಟ್ ವಕ್ತಾರರಿಂದ ಅಧಿಕೃತ ಹೇಳಿಕೆ
ಈ ಘಟನೆಯಿಂದ ನಮಗೆ ತೀವ್ರ ಆಘಾತವಾಗಿದ್ದು, ಬಾಧಿತ ಗ್ರಾಹಕರಿಗೆ ನಾವು ಸಂಪೂರ್ಣ ಬೆಂಬಲವನ್ನು ನೀಡುತ್ತಿದ್ದೇವೆ. ಗ್ರಾಹಕರ ಸುರಕ್ಷತೆಯ ವಿಷಯದಲ್ಲಿ ನಾವು ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ. ಆ ಕಾರಣದಿಂದ ಈ ವಿಷಯ ನಮ್ಮ ಗಮನಕ್ಕೆ ಬಂದ ತಕ್ಷಣ, ಘಟನೆಯಲ್ಲಿ ಭಾಗಿಯಾದ ಡೆಲಿವರಿ ಪಾರ್ಟ್ ನರ್ ಅವರ ಸೇವೆಯನ್ನು ರದ್ದುಗೊಳಿಸಿದ್ದೇವೆ. ಈ ಕುರಿತು ಈಗಾಗಲೇ ಎಫ್ಐಆರ್ ದಾಖಲಾಗಿದ್ದು, ತನಿಖಾಧಿಕಾರಿಗಳೊಂದಿಗೆ ಸಂಪೂರ್ಣವಾಗಿ ಸಹಕರಿಸಲು ನಾವು ಬದ್ಧರಾಗಿದ್ದೇವೆ.
ನಮ್ಮ ಎಲ್ಲಾ ಡೆಲಿವರಿ ಪಾರ್ಟ್ ನರ್ ಗಳನ್ನು ಕರ್ತವ್ಯಕ್ಕೆ ಸೇರಿಸಿಕೊಳ್ಳುವ ಮುನ್ನ ಕಡ್ಡಾಯವಾಗಿ ಹಿನ್ನೆಲೆ ಪರಿಶೀಲನೆ ಮತ್ತು ತರಬೇತಿಗೆ ಒಳಪಡಿಸಲಾಗುತ್ತದೆ. ಈ ರೀತಿಯ ಘಟನೆಗಳು ಅತ್ಯಂತ ಅಪರೂಪವಾಗಿದ್ದರೂ ಇಂತಹ ಯಾವುದೇ ಘಟನೆಯನ್ನೂ ನಾವು ಎಂದಿಗೂ ಸಹಿಸುವುದಿಲ್ಲ. ನಮ್ಮ ಗ್ರಾಹಕರ ಸುರಕ್ಷತಾ ಪ್ರಕ್ರಿಯೆಗಳನ್ನು ಮತ್ತಷ್ಟು ಬಲಪಡಿಸಲು ಕೈಗೊಳ್ಳಬೇಕಾದ ಹೆಚ್ಚುವರಿ ಕ್ರಮಗಳ ಕುರಿತು ನಾವು ಈ ಪ್ರಕರಣವನ್ನು ಕೂಲಂಕಷವಾಗಿ ಪರಿಶೀಲಿಸುತ್ತಿದ್ದೇವೆ ಎಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




