ರಾಜ್ಯ

ಸಾರ್ವಜನಿಕರ ದೂರುಗಳಿಗೆ ಪ್ರತ್ಯೇಕ 'ಪ್ರಜಾ ಸೇವಾ ಇಲಾಖೆ'; CM ಡಿ.ಕೆ ಶಿವಕುಮಾರ್ ಮಹತ್ವದ ಘೋಷಣೆ

ಜನರು ದೇವಾಲಯಕ್ಕೆ ಹೋಗುವ ಭರವಸೆಯೊಂದಿಗೆ ಸರ್ಕಾರಿ ಕಚೇರಿಗಳಿಗೂ ಬರುತ್ತಾರೆ. ಆದ್ದರಿಂದ ಅವರ ಸಮಸ್ಯೆಗಳನ್ನು ಕೇಳಿ, ಸಾಧ್ಯವಾದಷ್ಟು ಶೀಘ್ರದಲ್ಲಿ ಪರಿಹಾರ ಒದಗಿಸುವುದು ಸರ್ಕಾರಿ ಅಧಿಕಾರಿಗಳ ಕರ್ತವ್ಯ.

ಸಾರ್ವಜನಿಕರ ದೂರುಗಳಿಗೆ ಪ್ರತ್ಯೇಕ 'ಪ್ರಜಾ ಸೇವಾ ಇಲಾಖೆ'; CM ಡಿ.ಕೆ ಶಿವಕುಮಾರ್ ಮಹತ್ವದ ಘೋಷಣೆ
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವು ಶನಿವಾರ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಸನ್ಮಾನ ಸಮಾರಂಭ'ದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್.
Published On :

ಬೆಂಗಳೂರು: ಸಾರ್ವಜನಿಕರ ಅಹವಾಲುಗಳಿಗೆ ತ್ವರಿತ ಪರಿಹಾರ ಕಲ್ಪಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಪ್ರತ್ಯೇಕ 'ಪ್ರಜಾ ಸೇವಾ ಇಲಾಖೆ' ಸ್ಥಾಪಿಸಲಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಶನಿವಾರ ಘೋಷಿಸಿದ್ದಾರೆ.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು, ಸರ್ಕಾರಿ ನೌಕರರು ಜನರ ಸಮಸ್ಯೆಗಳನ್ನು ಸಹಾನುಭೂತಿಯಿಂದ ಆಲಿಸಿ, ಕಾನೂನಿನ ಚೌಕಟ್ಟಿನೊಳಗೆ ಪರಿಹರಿಸಬೇಕು ಎಂದು ಅವರು ಕರೆ ನೀಡಿದರು.

ಜನರು ದೇವಾಲಯಕ್ಕೆ ಹೋಗುವ ಭರವಸೆಯೊಂದಿಗೆ ಸರ್ಕಾರಿ ಕಚೇರಿಗಳಿಗೂ ಬರುತ್ತಾರೆ. ಆದ್ದರಿಂದ ಅವರ ಸಮಸ್ಯೆಗಳನ್ನು ಕೇಳಿ, ಸಾಧ್ಯವಾದಷ್ಟು ಶೀಘ್ರದಲ್ಲಿ ಪರಿಹಾರ ಒದಗಿಸುವುದು ಸರ್ಕಾರಿ ಅಧಿಕಾರಿಗಳ ಕರ್ತವ್ಯ ಎಂದು ಹೇಳಿದರು.

ಜನರು ತಮ್ಮ ಸಮಸ್ಯೆಗಳನ್ನು ಹೊತ್ತು ಸರ್ಕಾರಿ ಕಚೇರಿಗೆ ಬಂದಾಗ ಅವರನ್ನು ಹಿಂದಕ್ಕೆ ಕಳುಹಿಸದೇ, ಕಾನೂನಿನ ವ್ಯಾಪ್ತಿಯಲ್ಲಿ ಪರಿಹಾರ ಕಂಡುಕೊಡಲು ಪ್ರಯತ್ನಿಸಬೇಕು. ಸಹಾನುಭೂತಿಯೊಂದಿಗೆ ಜನಸೇವೆ ಮಾಡುವುದು ಪ್ರತಿಯೊಬ್ಬ ಸರ್ಕಾರಿ ನೌಕರನ ಜವಾಬ್ದಾರಿ ಎಂದು ತಿಳಿಸಿದರು.

ಪ್ರಸ್ತಾವಿತ 'ಪ್ರಜಾ ಸೇವಾ ಇಲಾಖೆ' ಅಡಿಯಲ್ಲಿ ಪ್ರತಿ ತಿಂಗಳ ಮೊದಲ ಮತ್ತು ಮೂರನೇ ಶನಿವಾರ ಎಲ್ಲ ಸಚಿವರು ತಾಲೂಕು ಕಚೇರಿಗಳಿಗೆ ಭೇಟಿ ನೀಡಿ, ಸಾರ್ವಜನಿಕರಿಂದ ನೇರವಾಗಿ ಅಹವಾಲುಗಳನ್ನು ಸ್ವೀಕರಿಸಿ, ಪರಿಹಾರಕ್ಕೆ ಕ್ರಮ ಕೈಗೊಳ್ಳಲಿದ್ದಾರೆ ಎಂದು ಹೇಳಿದರು.

ಇದೇ ವೇಳೆ ಸರ್ಕಾರಿ ನೌಕರರನ್ನು "ಕರ್ನಾಟಕದ ರಾಯಭಾರಿಗಳು" ಹಾಗೂ ಆಡಳಿತ ವ್ಯವಸ್ಥೆಯ ಬೆನ್ನೆಲುಬು ಎಂದು ಬಣ್ಣಿಸಿದ ಮುಖ್ಯಮಂತ್ರಿಗಳು, ಹುದ್ದೆಯಿಂದ ಮಾತ್ರ ಗೌರವ ಸಿಗುವುದಿಲ್ಲ; ಪ್ರಾಮಾಣಿಕತೆ ಮತ್ತು ಸೇವಾ ಮನೋಭಾವದಿಂದ ಗೌರವ ದೊರೆಯುತ್ತದೆ ಎಂದು ಹೇಳಿದರು.

ಬಡವರು, ವಂಚಿತರು ಹಾಗೂ ಅಗತ್ಯವಿರುವ ನಾಗರಿಕರಿಗೆ ಕಾನೂನಿನ ವ್ಯಾಪ್ತಿಯಲ್ಲೇ ಸಮಯಕ್ಕೆ ಸರಿಯಾಗಿ ನೆರವು ದೊರಕುವಂತೆ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು ಎಂದು ಸೂಚನೆ ನೀಡಿದರು.

ಇದೇ ವೇಳೆ, ಸರ್ಕಾರಿ ನೌಕರರ ಸಂಘವು ಸಲ್ಲಿಸಿರುವ ಹಳೆಯ ಪಿಂಚಣಿ ಯೋಜನೆ (OPS) ಮರುಜಾರಿಗೆ ಸಂಬಂಧಿಸಿದ ಬೇಡಿಕೆ ಕುರಿತು ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, ಈ ಸಂಬಂಧ ಸಮಿತಿ ಸಲ್ಲಿಸಿರುವ ವರದಿಯನ್ನು ಸರ್ಕಾರ ಪರಿಶೀಲಿಸಲಿದೆ ಎಂದರು.

ವರದಿ ಅಧ್ಯಯನದ ಬಳಿಕ ಸಚಿವ ಸಂಪುಟ ಹಾಗೂ ಸರ್ಕಾರಿ ನೌಕರರ ಪ್ರತಿನಿಧಿಗಳೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.