ರಾಜ್ಯ

10ನೇ ಗ್ಯಾರಂಟಿ ಬಗ್ಗೆ ಡಿಸಿಎಂ ಡಿ.ಕೆ ಶಿವಕುಮಾರ್ ಮಹತ್ವದ ಘೋಷಣೆ

ಗಂಗಾವಳಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆ ಹಾಗೂ ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಆವರಣದಲ್ಲಿ ನಿರ್ಮಿಸಲಾಗಿರುವ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು.

10ನೇ ಗ್ಯಾರಂಟಿ ಬಗ್ಗೆ ಡಿಸಿಎಂ ಡಿ.ಕೆ ಶಿವಕುಮಾರ್ ಮಹತ್ವದ ಘೋಷಣೆ
ಡಿಕೆ ಶಿವಕುಮಾರ್ — online desk
Published On :

ಕಾರವಾರ: "ಪಂಚ ಗ್ಯಾರಂಟಿ ಜೊತೆಗೆ ಭೂಮಿ ಆರನೇ ಗ್ಯಾರಂಟಿ, ನೀರು 7ನೇ ಗ್ಯಾರಂಟಿ, ಮನೆಗಳನ್ನು ನೀಡುವುದು 8ನೇ ಗ್ಯಾರಂಟಿ, ಇ ಖಾತಾ ನೀಡುವುದು 9ನೇ ಗ್ಯಾರಂಟಿ, 10ನೇ ಗ್ಯಾರಂಟಿಯಾಗಿ ಉಚಿತವಾಗಿ ಆರೋಗ್ಯ ನೀಡುವುದು ನಮ್ಮ ಸರ್ಕಾರದ ಸಂಕಲ್ಪ. ಇದನ್ನು ನಮ್ಮ ಸರ್ಕಾರ ಕಾರ್ಯರೂಪಕ್ಕೆ ತರಲಿದೆ" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಭರವಸೆ ನೀಡಿದರು.

ಗಂಗಾವಳಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆ ಹಾಗೂ ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಆವರಣದಲ್ಲಿ ನಿರ್ಮಿಸಲಾಗಿರುವ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಭಾನುವಾರ ಮಾತನಾಡಿದರು.

"ನೀವೆಲ್ಲರೂ ಸೇರಿ ರಾಜ್ಯದಲ್ಲಿ ನಮಗೆ ಶಕ್ತಿ ನೀಡಿದ್ದೀರಿ. ನಿಮ್ಮ ಋಣ ತೀರಿಸಲು ನಾವು ಬಂದಿದ್ದೇವೆ. ಇದು ಕಟ್ಟಡ ನಿರ್ಮಾಣ ವಿಚಾರ ಮಾತ್ರವಲ್ಲ, ಇಲ್ಲಿ ನಿಮಗೆ ನಮ್ಮ ಮೇಲಿರುವ ನಂಬಿಕೆ ಮತ್ತಷ್ಟು ಗಟ್ಟಿಯಾಗಬೇಕು. ನಾವು ಮಾಡುವ ಕೆಲಸ ನಮ್ಮ ಸಾಕ್ಷಿಗುಡ್ಡೆಗಳಾಗಿ ಉಳಿದುಕೊಳ್ಳುತ್ತದೆ. ಜನರ ಸಹಕಾರಕ್ಕೆ ಈ ಕೆಲಸ ಶಕ್ತಿಯಾಗಿ ಉಳಿದುಕೊಳ್ಳುತ್ತದೆ" ಎಂದು ತಿಳಿಸಿದರು.

ಕರಾವಳಿಗೆ ವಿಶೇಷ ಪ್ರವಾಸೋದ್ಯಮ ನೀತಿ:

"ನಾನು ಕೆಲವು ವರ್ಷಗಳ ಹಿಂದೆ ಮೀನುಗಾರರ ಜತೆ ಸಂವಾದ ಕಾರ್ಯಕ್ರಮಕ್ಕೆ ಕರಾವಳಿ ಪ್ರವಾಸ ಮಾಡಿದ್ದೆ. ಆಗ 300 ಕಿ.ಮೀ. ಹೆಚ್ಚು ಉದ್ದದ ಕರಾವಳಿ ಭಾಗದ ಅಭಿವೃದ್ಧಿಗೆ ಪ್ರತ್ಯೇಕ ಪ್ರವಾಸೋದ್ಯಮ ನೀತಿ ತರಲು ನಿರ್ಧರಿಸಿದ್ದೇವೆ. ಇಲ್ಲಿನ ಪ್ರಕೃತಿ, ಧಾರ್ಮಿಕ ಕ್ಷೇತ್ರಗಳನ್ನು ಇಟ್ಟುಕೊಂಡು ಈ ಭಾಗದ ಅಭಿವೃದ್ಧಿ ಮಾಡಬೇಕು. ಈ ಬಗ್ಗೆ ಬಂಡವಾಳ ಹೂಡಿಕೆದಾರರ ಜತೆ ಚರ್ಚೆ ಮಾಡುತ್ತಿದ್ದೇವೆ. ಆಮೂಲಕ ನಮ್ಮ ಈ ಭಾಗದ ಜನ ಉದ್ಯೋಗಕ್ಕಾಗಿ ಬೆಂಗಳೂರು, ಹೊರ ರಾಜ್ಯ, ದೇಶಗಳಿಗೆ ಹೋಗುವುದನ್ನು ತಡೆಯಬೇಕಾಗಿದೆ" ಎಂದು ಭರವಸೆ ನೀಡಿದರು.

ಒಂದು ಕೋಮು ಗಲಭೆಗೆ ಅವಕಾಶ ಕೊಟ್ಟಿಲ್ಲ:

"ಈ ಸರ್ಕಾರ ಇರೋದು ನಿಮಗಾಗಿ. ನಾವು ಎಲ್ಲಾ ಕ್ಷೇತ್ರದಲ್ಲಿ ಮಾಡುತ್ತಿರುವ ಸೇವೆ ಜನರಿಗೆ ತಲುಪಿದೆ. ನೀವು ಉದ್ಯೋಗಸ್ಥರಾಗಿ ನೆಮ್ಮದಿ ಬದುಕು ಸಾಗಿಸಬೇಕು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಈ ಭಾಗದಲ್ಲಿ ಒಂದು ಕೋಮುಗಲಭೆ ನಡೆಯದಂತೆ ನೋಡಿಕೊಂಡಿದ್ದೇವೆ. ಇದೇ ಈ ಸರ್ಕಾರದ ಶಕ್ತಿ. ಈ ಹಿಂದೆ ಕೋಮು ಗಲಭೆ ಹೆಚ್ಚಾಗಿ ಇಲ್ಲಿ ಯಾರೂ ಬಂಡವಾಳ ಹೂಡಿಕೆ ಮಾಡಲು ಮುಂದೆ ಬರುತ್ತಿಲ್ಲ" ಎಂದು ವಿವರಿಸಿದರು.

"ಮರಕ್ಕೆ ಬೇರು ಎಷ್ಟು ಮುಖ್ಯವೋ, ಮನುಷ್ಯನಿಗೆ ನಂಬಿಕೆ ಅಷ್ಟೇ ಮುಖ್ಯ. ದೇವರು ವರ ಹಾಗೂ ಶಾಪ ನೀಡುವುದಿಲ್ಲ. ಕೇವಲ ಅವಕಾಶ ನೀಡುತ್ತಾನೆ. ಸಿಕ್ಕ ಅವಕಾಶದಲ್ಲಿ ನಾವು ಏನು ಮಾಡುತ್ತೇವೆ ಎಂಬುದು ಮುಖ್ಯ. ನಮಗೆ ಸಿಕ್ಕ ಅವಕಾಶದಲ್ಲಿ ನಿಮ್ಮ ಸೇವೆಯನ್ನು ಪ್ರಾಮಾಣಿಕವಾಗಿ ಮಾಡುತ್ತಿದ್ದೇವೆ" ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.