ಬೆಂಗಳೂರು-ಮಡಗಾಂವ್ ವಂದೇ ಭಾರತ್ ಎಕ್ಸ್ ಪ್ರೆಸ್: ಮಂಗಳೂರಿಗರಿಗೆ ನಿರಾಸೆ! ಯಾಕೆ ಗೊತ್ತಾ?
ತಾತ್ಕಾಲಿಕ ವೇಳಾಪಟ್ಟಿಯ ಪ್ರಕಾರ, ಬೆಂಗಳೂರಿನ ಯಶವಂತಪುರ ಮತ್ತು ಮಡಗಾಂವ್ ನಡುವೆ ಓಡಾಡುವ ರೈಲು, ಮಂಗಳೂರಿನ ಯಾವುದೇ ಪ್ರಮುಖ ರೈಲು ನಿಲ್ದಾಣಗಳಲ್ಲಿ ನಿಲ್ಲದೆ ಪಡೀಲ್ ಮೂಲಕ ಸಂಚರಿಸುತ್ತದೆ.

ಮಂಗಳೂರು: ಬೆಂಗಳೂರು ಮತ್ತು ಮಡಗಾಂವ್ ನಡುವಿನ ಉದ್ದೇಶಿತ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಕರಾವಳಿ ಪ್ರದೇಶದಾದ್ಯಂತ ನಿರಾಶೆಯನ್ನು ಉಂಟುಮಾಡಿದ. ಏಕೆಂದರೆ ಈ ರೈಲು ಮಂಗಳೂರು ಸೆಂಟ್ರಲ್ ಮತ್ತು ಮಂಗಳೂರು ಜಂಕ್ಷನ್ ಎರಡೂ ನಿಲ್ದಾಣಗಳಲ್ಲಿ ನಿಲುಗಡೆ ಮಾಡದಿರುವುದು ತಾತ್ಕಾಲಿಕ ವೇಳಾಪಟ್ಟಿಯಿಂದ ಗೊತ್ತಾಗಿದೆ.
ತಾತ್ಕಾಲಿಕ ವೇಳಾಪಟ್ಟಿಯ ಪ್ರಕಾರ, ಬೆಂಗಳೂರಿನ ಯಶವಂತಪುರ ಮತ್ತು ಮಡಗಾಂವ್ ನಡುವೆ ಓಡಾಡುವ ರೈಲು, ಮಂಗಳೂರಿನ ಯಾವುದೇ ಪ್ರಮುಖ ರೈಲು ನಿಲ್ದಾಣಗಳಲ್ಲಿ ನಿಲ್ಲದೆ ಪಡೀಲ್ ಮೂಲಕ ಸಂಚರಿಸುತ್ತದೆ.
ಇದು ಬೆಂಗಳೂರು ಮತ್ತು ಮಂಗಳೂರು ನಡುವಣ ವಂದೇ ಭಾರತ್ ರೈಲು ಬೇಕೆಂದು ಧೀರ್ಘಕಾಲದಿಂದ ನಡೆಸಿದ ಹೋರಾಟಕ್ಕೆ ಆದ ಹಿನ್ನಡೆ ಎಂದು ಸ್ಥಳೀಯ ನಿವಾಸಿಗಳು ಹಾಗೂ ಹೋರಾಟಗಾರರು ನಿರಾಸೆ ವ್ಯಕ್ತಪಡಿಸಿದ್ದಾರೆ.
ತಾತ್ಕಾಲಿಕ ವೇಳಾಪಟ್ಟಿಯ ಪ್ರಕಾರ, ಬೆಳಗ್ಗೆ 6.05ಕ್ಕೆ ಯಶವಂತಪುರದಿಂದ ಹೊರಡಲು ಪ್ರಸ್ತಾಪಿಸಿರುವ ರೈಲು ಸಂಜೆ 7.15ಕ್ಕೆ ಮಡಗಾಂವ್ ತಲುಪಲಿದೆ. ಬೆಳಗ್ಗೆ 5.30ಕ್ಕೆ ಮಡಗಾಂವ್‌ನಿಂದ ಹೊರಡುವ ರೈಲು ಸಂಜೆ 6.40ಕ್ಕೆ ಯಶವಂತಪುರ ತಲುಪಲಿದೆ.
ಯಶವಂತಪುರದಿಂದ ಬೆಳಗ್ಗೆ 6.05ಕ್ಕೆ ಹೊರಡಲು ಪ್ರಸ್ತಾಪಿಸಿರುವ ರೈಲು ಹಾಸನದಿಂದ 9.10ಕ್ಕೆ, ಸಕಲೇಶಪುರದಿಂದ 9.55ಕ್ಕೆ, ಸುಬ್ರಹ್ಮಣ್ಯ ರೋಡ್‌ನಿಂದ 12.30ಕ್ಕೆ ಹೊರಟು ಮಧ್ಯಾಹ್ನ 2 ಗಂಟೆಗೆ ಪಡೀಲ್ ಮೂಲಕ ಸಾಗಲಿದೆ. 2.40ಕ್ಕೆ ತೋಕೂರು ದಾಟಲಿದ್ದು, ಸಂಜೆ 7.15ಕ್ಕೆ ಮಡಗಾಂವ್ ತಲುಪಲಿದೆ. ಮಡಗಾಂವ್‌ನಿಂದ ಬೆಳಗ್ಗೆ 5.30ಕ್ಕೆ ಹೊರಡುವ ರೈಲು ತೋಕೂರು ಮೂಲಕ 10.05ಕ್ಕೆ ದಾಟಿ, ಪಡೀಲ್ ಮೂಲಕ 11 ಗಂಟೆಗೆ ಸಾಗಲಿದೆ.
ಸುಬ್ರಹ್ಮಣ್ಯ ರೋಡ್‌ನಿಂದ 12.30ಕ್ಕೆ, ಸಕಲೇಶಪುರದಿಂದ 14.50ಕ್ಕೆ ಹೊರಟು ಸಂಜೆ 6.40ಕ್ಕೆ ಯಶವಂತಪುರ ತಲುಪಲಿದೆ ಎಂದು ಪ್ರಸ್ತಾಪಿಸಲಾಗಿದೆ. ಆದರೆ, ಮಂಗಳೂರು ಜಂಕ್ಷನ್ ಅಥವಾ ಮಂಗಳೂರು ಸೆಂಟ್ರಲ್‌ನಲ್ಲಿ ಯಾವುದೇ ನಿಗದಿತ ನಿಲುಗಡೆಗಳಿಲ್ಲ. ಉಡುಪಿ ಮತ್ತು ಕಾರವಾರದಂತಹ ಪ್ರಮುಖ ಕರಾವಳಿ ಪ್ರದೇಶದಲ್ಲಿ ನಿಲುಗಡೆ ಮಾಡುತ್ತಿಲ್ಲ. ಈ ಉದ್ದೇಶಿತ ವೇಳಾಪಟ್ಟಿಗೆ ಬಗ್ಗೆ ಪಶ್ಚಿಮ ಕರಾವಳಿ ರೈಲ್ವೆ ಯಾತ್ರಿ ಅಭಿವೃದ್ಧಿ ಸಮಿತಿ ಅಧ್ಯಕ್ಷ ಜಿ.ಹನುಮಂತ ಕಾಮತ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಆರಂಭದಲ್ಲಿ ಬೆಂಗಳೂರು ಮತ್ತು ಮಂಗಳೂರು ನಡುವೆ ಎರಡು ವಂದೇ ಭಾರತ್ ಎಕ್ಸ್ ಪ್ರೆಸ್ ಕಾರ್ಯನಿರ್ವಹಿಸುತ್ತವೆ ಎಂದು ತಿಳಿಸಲಾಗಿತ್ತು. ವಂದೇ ಭಾರತ್ ರೈಲುಗಳು ಜಿಲ್ಲಾ ಕೇಂದ್ರದಲ್ಲಿ ನಿಲುಗಡೆಯಾಗುತ್ತವೆ ಎಂದು ಹೇಳಲಾಗಿತ್ತು. ಆದರೆ ಈಗ ಬಿಡುಗಡೆಯಾಗಿರುವ ವೇಳಾಪಟ್ಟಿ ಪ್ರಕಾರ ಮಂಗಳೂರಿನಲ್ಲಿ ನಿಲುಗಡೆ ಮಾಡದಿರುವುದು ಕರಾವಳಿ ಭಾಗದ ಜನರಿಗೆ ಈ ರೈಲಿನಿಂದ ಯಾವುದೇ ಪ್ರಯೋಜನವಾಗದಂತಾಗಿದೆ ಎಂದು ಹೇಳಿದರು.
ವಂದೇ ಭಾರತ್ ರೈಲು ಸುಬ್ರಹ್ಮಣ್ಯ ರಸ್ತೆಯಲ್ಲಿ ನಿಲುಗಡೆ ಹೊಂದಿದ್ದು, ಮಂಗಳೂರಿನಲ್ಲಿ ನಿಲುಗಡೆ ಮಾಡದೆ ನೇರವಾಗಿ ಮಡಗಾಂವ್‌ಗೆ ತೆರಳುತ್ತದೆ. ಇದರಿಂದ ಕರಾವಳಿ ಭಾಗದ ಪ್ರಯಾಣಿಕರಿಗೆ ಪ್ರಯೋಜನವಾಗುವುದಿಲ್ಲ. ಕೂಡಲೇ ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟಾ ಅವರು ಮಧ್ಯಪ್ರವೇಶಿಸಿ ರೈಲ್ವೇ ಅಧಿಕಾರಿಗಳೊಂದಿಗೆ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿದರು.
ಬೆಂಗಳೂರು-ಮಂಗಳೂರು ನಡುವೆ ಪ್ರತ್ಯೇಕ ವಂದೇ ಭಾರತ್ ರೈಲು ಬೇಕು. ಮಂಗಳೂರು ಜಂಕ್ಷನ್ ಅಥವಾ ಮಂಗಳೂರು ಸೆಂಟ್ರಲ್‌ನಲ್ಲಿ ನಿಲುಗಡೆ ಬೇಕು ಎಂದು ಅವರು ಹೇಳಿದರು.
ಬೆಂಗಳೂರಿಗೆ ನೇರ, ಹೈಸ್ಪೀಡ್ ರೈಲು ಸಂಪರ್ಕವು ದೀರ್ಘಾವಧಿಯ ಬೇಡಿಕೆಯಾಗಿದ್ದು, ಈ ಪ್ರದೇಶದ ಆರ್ಥಿಕ ಮತ್ತು ಸಾಮಾಜಿಕ ಸಂಪರ್ಕಕ್ಕೆ ತುಂಬಾ ಅಗತ್ಯವಾಗಿದೆ ಎಂದು ಕರಾವಳಿ ಜಿಲ್ಲೆಗಳಾದ್ಯಂತ ನಿವಾಸಿಗಳು ಮತ್ತು ರೈಲ್ವೆ ಬಳಕೆದಾರರು ಒತ್ತಾಯಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



