ಹಸಿರು ಸಮುದ್ರದಲ್ಲಿ ಕೇಸರಿ ಹಾವು! ಮಲೆನಾಡ ಹಸಿರಿನ ನಡುವೆ ವಂದೇ ಭಾರತ್ ನಯನಮನೋಹರ ಪಯಣ; ಬೆಂಗಳೂರು-ಮಂಗಳೂರು ಪ್ರಾಯೋಗಿಕ ಸಂಚಾರ ಯಶಸ್ವಿ
ಪಶ್ಚಿಮ ಘಟ್ಟದ ದಟ್ಟ ಕಾಡು ಹಾಗೂ ಹಚ್ಚ ಹಸಿರಿನ ರಮಣೀಯ ಕಣಿವೆಗಳ ನಡುವೆ ಹೈಸ್ಪೀಡ್ ರೈಲು ಮಿಂಚಿನಂತೆ ಸಾಗಿದರೆ ಹೇಗಿರಬಹುದು? ಕಲ್ಪನೆಗೂ ಮೀರಿದ ಇಂತಹದ್ದೊಂದು ಅದ್ಭುತ ದೃಶ್ಯಕ್ಕೆ ಇದೀಗ ಕರ್ನಾಟಕದ ಪ್ರಕೃತಿ ಸಾಕ್ಷಿಯಾಗಿದೆ. ಕರಾವಳಿ ಮತ್ತು ರಾಜಧಾನಿ ನಡುವಿನ ವಂದೇ ಭಾರತ್ ಪ್ರಾಯೋಗಿಕ ಓಟದ ಝಲಕ್ ಇಲ್ಲಿದೆ:

ಒಂದು ಕಡೆ ಜಗತ್ತಿನ ಕಣ್ಣು ಸೆಳೆದಿರುವ ಮಾಹಿತಿ ತಂತ್ರಜ್ಞಾನದ ಹೆಬ್ಬಾಗಿಲು ಬೆಂಗಳೂರು, ಮತ್ತೊಂದು ಕಡೆ ಜಾಗತಿಕ ವ್ಯಾಪಾರಕ್ಕೆ ಹೆದ್ದಾರಿಯಾಗಿರುವ ಕರಾವಳಿಯ ಹೆಮ್ಮೆ ಮಂಗಳೂರು. ಈ ಎರಡು ಮಹಾನಗರಗಳು ಕೇವಲ ನಗರಗಳಷ್ಟೇ ಅಲ್ಲ, ಕರ್ನಾಟಕದ ಅರ್ಥವ್ಯವಸ್ಥೆಯ ಕೊಂಡಿ; ಆದರೆ, ಈ ಕೊಂಡಿಯನ್ನು ಬೆಸಯುವ ರೈಲನ ಪ್ರಯಾಣಕ್ಕೆ ಸುಮಾರು 9 ರಿಂದ 12 ಗಂಟೆಗಳು ಬೇಕಾಗುತ್ತದೆ. ಆದರೆ, ಇದೇ ವೇಗವನ್ನ ಕಡಿಮೆ ಮಾಡಲು ಎರಡು ನಗರಗಳ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಶೀಘ್ರದಲ್ಲೇ ಅಧಿಕೃತವಾಗಿ ಸಂಚಾರ ಆರಂಭಿಸಲಿದೆ. ಈ ಮೂಲಕ ಕರಾವಳಿ ಮತ್ತು ರಾಜಧಾನಿ ನಡುವಿನ ಪ್ರಯಾಣದ ಸಮಯವನ್ನು ಈ ಪ್ರೀಮಿಯಂ ಹೈ-ಸ್ಪೀಡ್ ರೈಲು ಗಮನಾರ್ಹವಾಗಿ ಕಡಿಮೆ ಮಾಡಲಿದೆ. ಹಾಗಾಗಿ, ಇತ್ತೀಚೆಗಷ್ಟೇ ಶಿರಾಡಿ ಘಾಟ್ ಮಾರ್ಗದಲ್ಲಿ (ಸಕಲೇಶಪುರ - ಸುಬ್ರಹ್ಮಣ್ಯ ರೋಡ್) ನಲ್ಲಿ ಪ್ರಾಯೋಗಿಕ ಓಟ ನಡೆಸಿದೆ. ಅದರ ಒಂದು ಝಲಕ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆ ಕುರಿತ ವರದಿ ಇಲ್ಲಿದೆ:
ಹೌದು, ಕರಾವಳಿ ನಗರಿ ಹಾಗೂ ಸಿಲಿಕಾನ್ ಸಿಟಿ ನಡುವಿನ ವಂದೇ ಭಾರತ್ ಪ್ರಾಯೋಗಿಕ ಸಂಚಾರದ ವಿಡಿಯೋ ಸಾಮಾಜಿಕ ಜಲತಾಣದಲ್ಲಿ ವೈರಲ್ ಆಗಿದೆ. ಪಶ್ಚಿಮ ಘಟ್ಟಗಳ ಹಸಿರು ಕಣಿವೆ ಹಾಗೂ ಮಂಜಿನ ನಡುವೆ ಕೇಸರಿ ಬಣ್ಣದ ವಂದೇ ಭಾರತ್ ರೈಲು ಹಾವಿನಂತೆ ಬಳುಕಿ ಸಾಗುತ್ತಿರುವ ಡ್ರೋನ್ ವಿಡಿಯೋ ಇಂಟರ್ನೆಟ್‌ನಲ್ಲಿ ಸಖತ್ ಧೂಳೆಬ್ಬಿಸುತ್ತಿದೆ. ನೋಡುಗರು ಈ ವಿಡಿಯೋ ನೋಡಿ "ಹಸಿರು ಸಮುದ್ರದ ಮಧ್ಯೆ ಸಾಗುತ್ತಿರುವ ಕೇಸರಿ ಹಾವು" ಎಂದು ಬಣ್ಣಿಸುತ್ತಿದ್ದಾರೆ.
ಹಚ್ಚ ಹಸಿರಿನ ನಡುವೆ ನಯನಮನೋಹರ ನೋಟ
ಕರ್ನಾಟಕದ ಅತ್ಯಂತ ಸುಂದರ ರೈಲ್ವೆ ಮಾರ್ಗವಾದ ಸಕಲೇಶಪುರ - ಸುಬ್ರಹ್ಮಣ್ಯ ರೋಡ್ ಘಾಟ್ ಸೆಕ್ಷನ್, ಪಶ್ಚಿಮ ಘಟ್ಟದ ಈ ಭಾಗವು ತನ್ನ ನಿತ್ಯಹರಿದ್ವರ್ಣ ಕಾಡುಗಳು, ಎತ್ತರದ ಬೆಟ್ಟಗಳು ಮತ್ತು ಪ್ರಕೃತಿ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ. ಅದರಲ್ಲೂ ಮಳೆಗಾಲದ ಋತುವಿನಲ್ಲಿ ಇಲ್ಲಿನ ಸೌಂದರ್ಯ ಇಮ್ಮಡಿಯಾಗುತ್ತದೆ. ಇಂತಹ ರಮಣೀಯ ಪರಿಸರದ ನಡುವೆ ಹಳಿಯ ಮೇಲೆ ವೇಗವಾಗಿ ಚಲಿಸುತ್ತಿರುವ ವಂದೇ ಭಾರತ್ ರೈಲಿನ ವೈಮಾನಿಕ ಮತ್ತು ರಮಣೀಯ ದೃಶ್ಯಗಳು ನೋಡುಗರ ಕಣ್ಮನ ಸೆಳೆಯುತ್ತಿವೆ.
ಬೆಂಗಳೂರು – ಮಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನಿಂದ ಪ್ರಯಾಣಿಕರಿಗೆ ಲಾಭವೇನು?
ಪ್ರಸ್ತುತ ಬೆಂಗಳೂರಿನಿಂದ ಮಂಗಳೂರಿಗೆ ರೈಲಿನಲ್ಲಿ ಹೋಗಲು ಅಂದಾಜು 10 ರಿಂದ 12 ಗಂಟೆಗಳು ಬೇಕಾಗುತ್ತವೆ. ಈ ವಂದೇ ಭಾರತ್ ರೈಲು ಪೂರ್ಣ ಪ್ರಮಾಣದಲ್ಲಿ ಆರಂಭವಾದರೆ, ಪ್ರಯಾಣದ ಸಮಯ 8 ಗಂಟೆಗಳಿಗೆ ಇಳಿಕೆಯಾಗುವ ನಿರೀಕ್ಷೆಯಿದೆ. ಈ ಮೂಲಕ ಕರಾವಳಿ ಕರ್ನಾಟಕ ಮತ್ತು ರಾಜಧಾನಿ ಬೆಂಗಳೂರು ನಡುವಿನ ಸಂಪರ್ಕ ಇನ್ನು ಸುಲಭವಾಗಲಿದೆ.
ಈ ಮಾರ್ಗದ ಸವಾಲುಗಳೇನು?
ಪ್ರಸ್ತಾವಿತ ಬೆಂಗಳೂರು-ಮಂಗಳೂರು ವಂದೇ ಭಾರತ್ ರೈಲು ಚಲಿಸುವ ಒಟ್ಟು ದೂರ ಸುಮಾರು 380 ಕಿಲೋಮೀಟರ್ ಆಗಿದೆ. ಇದರಲ್ಲಿ ಅತಿ ಕಠಿಣವಾದ 55 ಕಿಲೋಮೀಟರ್ ಮಾರ್ಗವು ಸಕಲೇಶಪುರ ಮತ್ತು ಸುಬ್ರಹ್ಮಣ್ಯ ರೋಡ್ ನಡುವಿನ ಪಶ್ಚಿಮ ಘಟ್ಟಗಳ ಕಣಿವೆಯಲ್ಲಿ ಹಾದುಹೋಗುತ್ತದೆ. ಅದರಂತೆ, ಈ ರೈಲ್ವೆ ಮಾರ್ಗವು ಭಾರತದಲ್ಲೇ ಅತ್ಯಂತ ಕಠಿಣ ಮತ್ತು ಸವಾಲಿನದ್ದಾಗಿದೆ. ಇನ್ನು, ಈ ಮಾರ್ಗದಲ್ಲಿ ಬರೋಬ್ಬರಿ 57 ಸುರಂಗಗಳು, 226 ಕ್ಕೂ ಹೆಚ್ಚು ಸೇತುವೆಗಳು ಮತ್ತು 108 ತೀಕ್ಷ್ಣವಾದ ತಿರುವುಗಳು ಇವೆ. ಜೊತೆಗೆ, ಇಲ್ಲಿನ ಹಾದಿಯು 1:50 ರಷ್ಟು ಕಡಿದಾದ ಇಳಿಜಾರು ಹೊಂದಿದೆ. ಅಂದರೆ ಪ್ರತಿ 50 ಮೀಟರ್‌ಗೆ ರೈಲು 1 ಮೀಟರ್‌ನಷ್ಟು ಎತ್ತರ ಏರಬೇಕು ಅಥವಾ ಇಳಿಯಬೇಕು. ಅದರಂತೆ, ಸಾಮಾನ್ಯ ರೈಲುಗಳಿಗೆ ಇಲ್ಲಿ ಹೆಚ್ಚುವರಿ ಎಂಜಿನ್ ಬೇಕಾಗುತ್ತದೆ. ಆದರೆ ವಂದೇ ಭಾರತ್ ರೈಲನ್ನು ಸ್ವಯಂಚಾಲಿತ ತುರ್ತು ಬ್ರೇಕಿಂಗ್ ವ್ಯವಸ್ಥೆ ಯೊಂದಿಗೆ ಈ ಘಾಟ್‌ನಲ್ಲಿ ಪರೀಕ್ಷಿಸಲಾಗುತ್ತಿದೆ.

ಬೆಂಗಳೂರು-ಮುಂಬೈ ಹೊಸ ಎಕ್ಸ್ ಪ್ರೆಸ್ ರೈಲಿಗೆ ಚಾಲನೆ: ಶೀಘ್ರದಲ್ಲೇ ವಂದೇ ಭಾರತ್ ರೈಲು ಸೇವೆ ಆರಂಭ- ಅಶ್ವಿನಿ ವೈಷ್ಣವ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


