ಬಾಡಿಗೆ ಮನೆ ಹುಡುಕಲು ಹೋದಾಗ ದರೋಡೆ: ಫೋಟೋಗ್ರಾಫರ್ ಬಂಧನ
ವೈಟ್ ಫೀಲ್ಡ್ ಪೊಲೀಸ್ ಠಾಣೆ ವ್ಯಾಪ್ತಿಯ ನಾಗೊಂಡನಹಳ್ಳಿಯಲ್ಲಿ ಬಾಡಿಗೆ ಮನೆ ಹುಡುಕುತ್ತಿದ್ದ ಕಿರಣ್, ಸಾಫ್ಟ್ ವೇರ್ ಎಂಜಿನಿಯರ್ ಜಗದೀಶ್ ಎಂಬವರ ಮನೆ ಬಳಿ ಮನೆ ಬಾಡಿಗೆಗೆ ಇದೆ ಎಂಬ ಬೋರ್ಡ್ ನೋಡಿದ್ದಾನೆ.

ಬೆಂಗಳೂರು: ಬಾಡಿಗೆ ಮನೆ ಹುಡುಕಲು ಹೋದ ವ್ಯಕ್ತಿಯೊಬ್ಬ 55 ಲಕ್ಷ ಮೌಲ್ಯದ 348 ಗ್ರಾಂ ಚಿನ್ನಾಭರಣ ಕಳ್ಳತನ ನಡೆಸಿ ಸಿಕ್ಕಿಬಿದ್ದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ವೃತ್ತಿಯಲ್ಲಿ ಫೋಟೋಗ್ರಾಫರ್ ಆಗಿರುವ ವೈಟ್ ಫೀಲ್ಡ್ ನಿವಾಸಿ ಕಿರಣ್ ಬಂಧಿತ ಆರೋಪಿಯಾಗಿದ್ದು, ಮಲೆಮಹದೇಶ್ವರನ ದರ್ಶನ ಮಾಡಿ ಹಿಂದಿರುಗಿದ್ದ ಆರೋಪಿಯನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.
ಫೋಟೋ ಸ್ಟುಡಿಯೋ ನಡೆಸುತ್ತಿದ್ದ ಕಿರಣ್, ಕೋವಿಡ್ ವೇಳೆ ನಷ್ಟ ಉಂಟಾದ ಕಾರಣ ಅದನ್ನು ಮುಚ್ಚಿದ್ದ. ಕ್ಯಾಮರಾ ಇದ್ದ ಕಾರಣ ಸಣ್ಣ ಪುಟ್ಟ ಕಾರ್ಯಕ್ರಮಗಳನ್ನು ನಂಬಿ ಜೀವನ ನಡೆಸುತ್ತಿದ್ದ ಎನ್ನಲಾಗಿದೆ.
ಈ ನಡುವೆ ವೈಟ್ ಫೀಲ್ಡ್ ಪೊಲೀಸ್ ಠಾಣೆ ವ್ಯಾಪ್ತಿಯ ನಾಗೊಂಡನಹಳ್ಳಿಯಲ್ಲಿ ಬಾಡಿಗೆ ಮನೆ ಹುಡುಕುತ್ತಿದ್ದ ಕಿರಣ್, ಸಾಫ್ಟ್ ವೇರ್ ಎಂಜಿನಿಯರ್ ಜಗದೀಶ್ ಎಂಬವರ ಮನೆ ಬಳಿ ಮನೆ ಬಾಡಿಗೆಗೆ ಇದೆ ಎಂಬ ಬೋರ್ಡ್ ನೋಡಿದ್ದಾನೆ.
ಈ ಹಿನ್ನೆಲೆ ವಿಚಾರಿಸಲೆಂದು ಮನೆ ಬಳಿ ಹೋದಾಗ ಶೂ ರ್ಯಾಕ್ನಲ್ಲಿ ಮನೆಯ ಬೀಗ ಆತನಿಗೆ ಕಂಡಿದೆ. ಅದನ್ನು ಬಳಸಿ ಮನೆಯ ಬಾಗಿಲು ಓಪನ್ ಮಾಡಿ ಒಳಗೆ ಹೋಗಿದ್ದ ಆರೋಪಿ, ಮನೆಯಲ್ಲಿದ್ದ ಚಿನ್ನಾಭರಣ ಕದ್ದಿದ್ದ.
ಘಟನೆ ಬೆಳಕಿಗೆ ಬರುತ್ತಿದ್ದಂತೆ ಕಳ್ಳತನ ನಡೆದಿರುವ ಬಗ್ಗೆ ಮನೆ ಮಾಲೀಕ ಜಗದೀಶ್ ಪೊಲೀಸರಿಗೆ ದೂರು ನೀಡಿದ್ದರು. ಈ ನಡುವೆ ತಾನು ಮಾಡಿದ ಕೆಲಸದ ಬಗ್ಗೆ ಬಳಿಕ ಪಾಪಪ್ರಜ್ಞೆ ಕಾಡಿತ್ತು. ಹೀಗಾಗಿ ಆ ಬಳಿಕ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳಿ ಮಾದಪ್ಪನ ದರ್ಶನವನ್ನು ಈತ ಮಾಡಿದ್ದ.
ಏತನ್ಮಧ್ಯೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆ ನಡೆಸಿ ಆರೋಪಿಯನ್ನ ಪತ್ತೆ ಮಾಡಿದೆ. ಇದರಂತೆ ಆರೋಪಿ ಮಲೆಮಹದೇಶ್ವರ ಬೆಟ್ಟದಿಂದ ಬರುತ್ತಿದ್ದಂತೆ ಬಂಧನಕ್ಕೊಳಪಡಿಸಿದ್ದಾರೆ.
ವಿಚಾರಣೆ ವೇಳೆ ಆರೋಪಿ ಅಪರಾಧ ಕೃತ್ಯ ಎಸಗಿರುವುದಾಗಿ ತಿಳಿಸಿದ್ದು, ಆತನ ಹೇಳಿಕೆಯ ಆಧಾರದ ಮೇಲೆ ಕದ್ದಿದ್ದ 348 ಗ್ರಾಂ ಚಿನ್ನದ ಆಭರಣಗಳನ್ನು (ಸುಮಾರು ರೂ.55 ಲಕ್ಷ ಮೌಲ್ಯದ) ವಶಪಡಿಸಿಕೊಂಡಿದ್ದಾರೆ.
ಈ ನಡುವೆ ನಾಗರಿಕರು ಮನೆಯ ಬಾಗಿಲಿನ ಕೀ ಗಳನ್ನ ಸುಲಭವಾಗಿ ಗೊತ್ತಾಗುವ ಸ್ಥಳಗಳಲ್ಲಿ ಬಿಡಬಾರದು, ಮನೆಯನ್ನು ಸುರಕ್ಷಿತವಾಗಿಡಬೇಕು, ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು ಮತ್ತು ಸಂಶಯಾಸ್ಪದ ವ್ಯಕ್ತಿಗಳು ಅಥವಾ ಚಟುವಟಿಕೆಗಳನ್ನು ತಕ್ಷಣ 112ಗೆ ವರದಿ ಮಾಡಿ ತಕ್ಷಣದ ಪೊಲೀಸ್ ಸಹಾಯ ಪಡೆಯಬೇಕು ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



