'ವಂದೇ ಮಾತರಂ'ಗೆ ಬುನಾದಿ ಹಾಕಿದ್ದು ನಮ್ಮ ಪಕ್ಷ; ಭಾರತ ಜನನಿಯ ತನುಜಾತೆ ಹಾಡು ರಾಜ್ಯಗೀತೆಯಾಗಿ ಕಡ್ಡಾಯ ಮಾಡಿದ್ದು SM ಕೃಷ್ಣ ಸರ್ಕಾರ'
“ನಮ್ಮ ಕಾರ್ಯಕ್ರಮಗಳನ್ನು ಪ್ರಾರಂಭ ಮಾಡುವಾಗ ಪ್ರತಿಹಂತದಲ್ಲೂ ವಂದೇ ಮಾತರಂ ಗೀತೆ ಹಾಡುತ್ತೇವೆ. ನಾವು ವಂದೇ ಮಾತರಂ ಗೀತೆಗೆ ಗೌರವ ನೀಡುತ್ತೇವೆ. ಅದನ್ನು ಅನುಸರಿಸುತ್ತೇವೆ” ಎಂದು ಹೇಳಿದರು.

ದೆಹಲಿ: ವಂದೇ ಮಾತರಂಗೆ ಬುನಾದಿ ಹಾಕಿದ ಪಕ್ಷ ನಮ್ಮದು. ಈ ದೇಶಕ್ಕೆ ರಾಷ್ಟ್ರಧ್ವಜ, ರಾಷ್ಟ್ರಗೀತೆ, ಸಂವಿಧಾನ, ಸ್ವಾತಂತ್ರ್ಯ ತಂದುಕೊಟ್ಟ ಪಕ್ಷ ನಮ್ಮದು. ಈ ದೇಶದ ಸೇವೆ ಮಾಡಿದ ಪಕ್ಷ ನಮ್ಮದು. ಈಗ ಬಿಜೆಪಿ, ಬೇರೆಯವರು ನಮ್ಮನ್ನು ಅನುಸರಿಸುತ್ತಿದ್ದಾರೆ. ಅದೇ ಸಂತೋಷ ನಮಗೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದರು.
ದೆಹಲಿಯ ಕರ್ನಾಟಕ ಭವನದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಬುಧವಾರ ಪ್ರತಿಕ್ರಿಯೆ ನೀಡಿದರು. ರಾಷ್ಟ್ರಗೀತೆಗೆ ನೀಡುವ ಗೌರವವನ್ನು ವಂದೇ ಮಾತರಂಗೂ ನೀಡಬೇಕು ಹಾಗೂ ಇದನ್ನು ಕಡ್ಡಾಯಗೊಳಿಸಿರುವ ಬಗ್ಗೆ ಕೇಳಿದಾಗ, “ನಮ್ಮ ಕಾರ್ಯಕ್ರಮಗಳನ್ನು ಪ್ರಾರಂಭ ಮಾಡುವಾಗ ಪ್ರತಿಹಂತದಲ್ಲೂ ವಂದೇ ಮಾತರಂ ಗೀತೆ ಹಾಡುತ್ತೇವೆ. ನಾವು ವಂದೇ ಮಾತರಂ ಗೀತೆಗೆ ಗೌರವ ನೀಡುತ್ತೇವೆ. ಅದನ್ನು ಅನುಸರಿಸುತ್ತೇವೆ” ಎಂದು ಹೇಳಿದರು.
ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಗಳಾಗಿದ್ದಾಗ ಕುವೆಂಪು ವಿರಚಿತ ಜಯ ಭಾರತ ಜನನಿಯ ತನುಜಾತೆ ಹಾಡನ್ನು ರಾಜ್ಯಗೀತೆಯಾಗಿ ಕಡ್ಡಾಯ ಮಾಡಿದ್ದೇವೆ. ಅದರಲ್ಲಿ ಸರ್ವಜನಾಂಗದ ಶಾಂತಿಯ ತೋಟ ಎಂದು ಇದೆಯಲ್ಲ. ನಮ್ಮದು ಸರ್ವಜನಾಂಗದ ಶಾಂತಿಯ ತೋಟ. ಏನೇನು ಹೇಳಬೇಕು, ಯಾವ ಧರ್ಮ ಹೇಳಬೇಕು ಎಂಬುದೆಲ್ಲ ಹೇಳಿದ್ದೇವಲ್ಲ. ಹಿಂದೂ, ಕ್ರೈಸ್ತ, ಮುಸಲ್ಮಾನ ಎಂದು ಹಾಡಿನಲ್ಲಿಯೇ ಇದೆ. ಅಂತಹ ರಾಜ್ಯ, ಭೂಮಿಯಲ್ಲಿ ಬೆಳೆದವರು ನಾವು ಎಂದರು.
ಈಗ ಎರಡು ರಾಷ್ಟ್ರಗೀತೆಗಳಾಗುತ್ತವೆ ಎಂದು ಕೇಳಿದಾಗ, “ಅದರ ಬಗ್ಗೆ ಆನಂತರ ಮಾತನಾಡೋಣ” ಎಂದರು.
ಸ್ವಲ್ಪ ನಿಧಾನವಾದರೂ ಸಿದ್ದರಾಮಯ್ಯ ಅವರು ಕೊಟ್ಟ ಮಾತನ್ನು ಉಳಿಸಿಕೊಳ್ಳಲಿದ್ದಾರೆ ಎಂಬ ಡಿ.ಕೆ.ಸುರೇಶ್ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಕಾಲವೇ ಉತ್ತರ ನೀಡುತ್ತದೆ ಎಂದು ಹೇಳಿದ್ದೇನೆ. ನಾವುಗಳು ಏನು ಮಾತನಾಡಿದ್ದೇವೆ ಎಂಬುದು ನಮಗೆ ಮಾತ್ರ ಗೊತ್ತು ಎಂದು ಹೇಳಿದ್ದೇನೆ” ಎಂದರು.
ಕಾಲ ಯಾವಾಗ ಬರಲಿದೆ ಎಂದು ಕೇಳಿದಾಗ, “ಇದಕ್ಕೂ ಸಮಯ ನೋಡಿ ಹೇಳುತ್ತೇನೆ” ಎಂದು ಮಾರ್ಮಿಕವಾಗಿ ಉತ್ತರಿಸಿದರು.
ಪ್ರಿಯಾಂಕ ಗಾಂಧಿ ಅವರನ್ನು ಭೇಟಿ ಮಾಡಿದ್ದೀರಿ ಎಂದು ಕೇಳಿದಾಗ, “ಕಾಂಗ್ರೆಸ್ ಕಚೇರಿಗೆ ಹೋಗಿ ಬಂದಿದ್ದೇನೆ ಅಷ್ಟೇ. ಇನ್ನು ಅಸ್ಸಾಂ ಚುನಾವಣೆ ಜಂಜಾಟದಲ್ಲಿ ಇದ್ದೇನೆ. ವಿಭಿನ್ನ ರೀತಿಯಲ್ಲಿ ಬೇರೆ, ಬೇರೆ ವಿಚಾರ ಚರ್ಚೆ ಯಾಕೆ. ಇದರ ಬಗ್ಗೆ ನಾನು ಮುಂದೆ ಮಾತನಾಡುತ್ತೇನೆ. ಇದಕ್ಕೆ ಸಮಯ ಉತ್ತರ ನೀಡಲಿದೆ” ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



