ಕೇಂದ್ರ ಬಜೆಟ್ ಕರ್ನಾಟಕಕ್ಕೆ ಬಹಳಷ್ಟು ಕೊಡುಗೆ ನೀಡಿದೆ: ಸಿಎಂ ಸಿದ್ದರಾಮಯ್ಯಗೆ ಅಶ್ವಿನಿ ವೈಷ್ಣವ್ ತಿರುಗೇಟು
2014ರಿಂದ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ಅವಧಿಯಲ್ಲಿ ಕರ್ನಾಟಕಕ್ಕೆ ಯುಪಿಎ ಸರ್ಕಾರದ ಅವಧಿಗಳಿಗಿಂತಲೂ 9 ಪಟ್ಟು ಹೆಚ್ಚು ಅನುದಾನ ದೊರೆತಿದೆ.

ಬೆಂಗಳೂರು: ಕೇಂದ್ರ ಬಜೆಟ್‌ನಲ್ಲಿ ಕರ್ನಾಟಕಕ್ಕೆ ನ್ಯಾಯ ಸಿಕ್ಕಿಲ್ಲ ಎಂಬ ರಾಜ್ಯ ಸರ್ಕಾರದ ಆರೋಪವನ್ನು ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ತೀವ್ರವಾಗಿ ಖಂಡಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರದ ಬಜೆಟ್‌ನ್ನು “ಕಾರ್ಪೊರೇಷನ್ ಬಜೆಟ್” ಎಂದು ಟೀಕಿಸಿದ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಒಂದು ವರ್ಷಕ್ಕಿಂತ ಮುಂದೆ ಯೋಚಿಸದವರು ಮಾತ್ರ ಈ ಬಜೆಟ್‌ನ್ನು ಕಾರ್ಪೊರೇಷನ್ ಬಜೆಟ್ ಎಂದು ನೋಡುತ್ತಾರೆ ಎಂದು ತಿರುಗೇಟು ನೀಡಿದರು.
2014ರಿಂದ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ಅವಧಿಯಲ್ಲಿ ಕರ್ನಾಟಕಕ್ಕೆ ಯುಪಿಎ ಸರ್ಕಾರದ ಅವಧಿಗಳಿಗಿಂತಲೂ 9 ಪಟ್ಟು ಹೆಚ್ಚು ಅನುದಾನ ದೊರೆತಿದೆ ಎಂದು ಹೇಳಿದರು.
ಕರ್ನಾಟಕದ ರೈಲ್ವೇ ಯೋಜನೆಗಳಿಗೆ ಈ ಬಾರಿಯ ಬಜೆಟ್‌ನಲ್ಲಿ ರೂ.7,748 ಕೋಟಿ ದಾಖಲೆ ಅನುದಾನ ನೀಡಲಾಗಿದೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ರೈಲ್ವೇ ಬಜೆಟ್ ಕೇವಲ ರೂ.800 ಕೋಟಿ ಇತ್ತು ಎಂದು ಅವರು ಹೋಲಿಕೆ ಮಾಡಿದರು.
ಒಟ್ಟಾರೆ ರೂ.52,950 ಕೋಟಿ ಹೂಡಿಕೆ ಮೂಲಕ ಹೊಸ ಮಾರ್ಗಗಳು, ನಿಲ್ದಾಣ ಪುನರ್ ಅಭಿವೃದ್ಧಿ, ಸುರಕ್ಷತಾ ಯೋಜನೆಗಳು, ಬೆಂಗಳೂರು ಉಪನಗರ ರೈಲು ಯೋಜನೆ ಸೇರಿದಂತೆ ಹಲವು ಹೊಸ ಯೋಜನೆಗಳು ಕೈಗೆತ್ತಿಕೊಳ್ಳಲಾಗುತ್ತದೆ ಎಂದು ಹೇಳಿದರು.
ಅಮೃತ್ ಭಾರತ್ ನಿಲ್ದಾಣ ಯೋಜನೆ ಅಡಿಯಲ್ಲಿ ರಾಜ್ಯದ 61 ರೈಲು ನಿಲ್ದಾಣಗಳನ್ನು ಪುನರ್ ನಿರ್ಮಿಸಲಾಗುತ್ತಿದ್ದು, 2,110 ಕೋಟಿ ರೂ.ವೆಚ್ಚದಲ್ಲಿ ಈ ಯೋಜನೆ ನಡೆಯುತ್ತಿದೆ. ಈಗಾಗಲೇ 9 ನಿಲ್ದಾಣಗಳ ಕಾಮಗಾರಿ ಪೂರ್ಣಗೊಂಡಿದೆ ಎಂದು ಮಾಹಿತಿ ನೀಡಿದರು.
ಐಟಿ ಮತ್ತು ಸೆಮಿಕಂಡಕ್ಟರ್ ಕ್ಷೇತ್ರದ ಸುಧಾರಣೆಗಳಿಂದ ಕರ್ನಾಟಕ ಪ್ರಮುಖ ಲಾಭ ಪಡೆಯಲಿದೆ. ಹಲವು ಕಂಪನಿಗಳು ಕಾರ್ಖಾನೆ ಸ್ಥಾಪಿಸಲು ಮುಂದೆ ಬಂದಿದ್ದು, 40,000ಕ್ಕೂ ಹೆಚ್ಚು ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಎಂದರು.
"ನಮ್ಮ ದೇಶಕ್ಕೆ ಸೆಮಿಕಂಡಕ್ಟರ್ ಉದ್ಯಮ ಏಕೆ ಬರಲಿಲ್ಲ? ಹಿಂದೆ, ಯುಪಿಎ ಸರ್ಕಾರಗಳು ಸಮಯ ವ್ಯರ್ಥ ಮಾಡಿದ್ದವು, ಆದರೆ, ನಾವು ಈ ನಿಟ್ಟಿನಲ್ಲಿ ಕ್ರಮ ಕೈಗೊಂಡಿದ್ದೇವೆ. ಈ ಕ್ರಮಕ್ಕೆ ನಮಗೆ ದೂರದೃಷ್ಟಿಯ ಪ್ರಧಾನಿ ಬೇಕಾಗಿತ್ತು. ದೂರದೃಷ್ಟಿಯ ಪ್ರಧಾನಮಂತ್ರಿ ಇದ್ದಾಗ ಮಾತ್ರ ಇಂತಹ ಉದ್ಯಮಗಳ ಸ್ಥಾಪನೆ ಸಾಧ್ಯ ಎಂದು ಹೇಳಿದರು.
200 ಕ್ಕೂ ಹೆಚ್ಚು ಕಾಲೇಜುಗಳು AI ಉದ್ಯಮದ ಅಗತ್ಯಗಳನ್ನು ಪೂರೈಸಲು ತಮ್ಮ ಪಠ್ಯಕ್ರಮವನ್ನು ಬದಲಾಯಿಸಿವೆ ಮತ್ತು AICTE ಬಿಟೆಕ್ ಪದವಿಗಳಿಗೆ ಸಾಮಾನ್ಯ ಪಠ್ಯಕ್ರಮವನ್ನು ರೂಪಿಸುವುದನ್ನು ಪರಿಗಣಿಸುತ್ತಿದೆ ಎಂದು ಅವರು ಹೇಳಿದರು.
ಇದೇ ವೇಳೆ ಕೇಂದ್ರದ VB-G RAM G ಯೋಜನೆಯನ್ನು ಸಮರ್ಥಿಸಿಕೊಂಡಅವರು, ಇದು ಮನ್ರೇಗಾ ಯೋಜನೆಗಿಂತ ಉತ್ತಮವಾಗಿದೆ ಎಂದು ತಿಳಿಸಿದರು.
ವಾರ್ಷಿಕವಾಗಿ 100 ದಿನಗಳ ಕೆಲಸವನ್ನು 125 ದಿನಗಳಿಗೆ ಬದಲಾಯಿಸುತ್ತಿದ್ದೇವೆ. ಹೊಸ ಯೋಜನೆಯು ಪಾರದರ್ಶಕತೆಯನ್ನು ತರುತ್ತದೆ, 1 ಲಕ್ಷ ಕೋಟಿ ರೂ.ಗಳಿಗೂ ಹೆಚ್ಚು ಅನುದಾನವನ್ನು ಹಂಚಿಕೆ ಮಾಡುತ್ತದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



