ರಾಜ್ಯಪಾಲರ ಸಹಿ ನಕಲು ಮಾಡಿ ವಂಚನೆ: ಪ್ರಕರಣ ದಾಖಲು
ರಾಜ್ಯಪಾಲರ ಹೆಸರಿನ ಲೆಟರ್‌ಹೆಡ್ ಬಳಸಿರುವ ಸುಜಯೇಂದ್ರ, ರಾಜ್ಯಪಾಲರ ಸಹಿ ನಕಲು ಮಾಡಿ ವೆಲ್ಲೂರ್ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿ ವಿಶ್ವವಿದ್ಯಾಲಯದ ಕುಲಪತಿಗಳ ನೇಮಕಾತಿ ಆದೇಶ ಹೊರಡಿಸಿದ್ದಾನೆ.

ಬೆಂಗಳೂರು: ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರ ಸಹಿಯನ್ನು ನಕಲು ಮಾಡಿ, ವಂಚಿಸುತ್ತಿದ್ದ ನಕಲಿ ಐಪಿಎಸ್, ಐಎಎಸ್ ಅಧಿಕಾರಿ ಎಚ್.ಎನ್. ಸುಜಯೇಂದ್ರ (45) ಎಂಬಾತನ ವಿರುದ್ಧ ವಿಜಯನಗರ ಠಾಣೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಪ್ರದೀಪ್ ನೀಡಿದ ದೂರಿನನ್ವಯ ಸುಜಯೇಂದ್ರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೆತ್ತಿಕೊಂಡಿದ್ದಾರೆ.
ರಾಜ್ಯಪಾಲರ ಹೆಸರಿನ ಲೆಟರ್‌ಹೆಡ್ ಬಳಸಿರುವ ಸುಜಯೇಂದ್ರ, ರಾಜ್ಯಪಾಲರ ಸಹಿ ನಕಲು ಮಾಡಿ ವೆಲ್ಲೂರ್ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿ ವಿಶ್ವವಿದ್ಯಾಲಯದ ಕುಲಪತಿಗಳ ನೇಮಕಾತಿ ಆದೇಶ ಹೊರಡಿಸಿದ್ದಾನೆ. ಈ ನಿಟ್ಟಿನಲ್ಲಿ ಸುಜಯೇಂದ್ರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಪ್ರದೀಪ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ 2026ರ ಜನವರಿ 5ರಂದು ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿ ವಿಜಯನಗರ ಠಾಣಾ ವ್ಯಾಪ್ತಿಯಲ್ಲಿ ವಾಸಿಸುತ್ತಿರುವುದರಿಂದ, ಜನವರಿ 21ರಂದು ಪ್ರಕರಣವನ್ನು ವಿಜಯನಗರ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ.
ಆರೋಪಿ ವಿರುದ್ಧ ಈಗಾಗಲೇ ಹಲವು ಪ್ರಕರಣಗಳು ದಾಖಲಾಗಿವೆ. ಜಮ್ಮು ಮತ್ತು ಕಾಶ್ಮೀರದ ವೈದ್ಯರೊಬ್ಬರಿಂದ 2.7 ಕೋಟಿ ರೂ. ಹಣ ಸಂಗ್ರಹಿಸಿ, ದೇವನಹಳ್ಳಿಯಲ್ಲಿ ಆಯುರ್ವೇದ ಆಸ್ಪತ್ರೆ ಸ್ಥಾಪಿಸುವುದಾಗಿ ವಂಚಿಸಿದ ಪ್ರಕರಣದಲ್ಲಿ ಈತ 2025ರ ನವೆಂಬರ್‌ನಲ್ಲಿ ಬಂಧಿತನಾಗಿದ್ದ. ಇದಲ್ಲದೆ, ಚೆಕ್ ಬೌನ್ಸ್ ಪ್ರಕರಣಗಳೂ ಈತನ ವಿರುದ್ಧವಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇದೀಗ ರಾಜ್ಯಪಾಲರ ಸಹಿ ನಕಲು ಮಾಡಿರುವುದು ರಾಷ್ಟ್ರದ ಸಂವಿಧಾನಾತ್ಮಕ ಹುದ್ದೆಯ ಗೌರವಕ್ಕೆ ಧಕ್ಕೆ ತರುವ ಗಂಭೀರ ಅಪರಾಧವಾಗಿದ್ದು, ಈ ಪ್ರಕರಣದಲ್ಲಿ ಇನ್ನಾರಾದರೂ ಸಹಕರಿಸಿದ್ದಾರೆಯೇ? ಎಷ್ಟು ನಕಲಿ ಪತ್ರಗಳನ್ನು ಹೊರಡಿಸಲಾಗಿದೆ? ಹಣಕಾಸು ವ್ಯವಹಾರ ನಡೆದಿದೆಯೇ? ಎಂಬ ಅಂಶಗಳ ಕುರಿತು ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



