ಬೆಂಗಳೂರಿನಲ್ಲಿ ಸೈಬರ್ ಖದೀಮರ ಅಟ್ಟಹಾಸ! ದಿನಕ್ಕೆ 22 ಆನ್‌ಲೈನ್ ವಂಚನೆ ಕೇಸ್; 7 ತಿಂಗಳಲ್ಲಿ ₹558 ಕೋಟಿ ಲೂಟಿ; ಗೋಲ್ಡನ್ ಅವರ್‌ನಿಂದ ₹191 ಕೋಟಿ ವಾಪಸ್!
Cyber Fraud In Bengaluru: ರಾಜಧಾನಿ ಬೆಂಗಳೂರಿನಲ್ಲಿ ಕೇಳದ 7 ತಿಂಗಳಲ್ಲಿ ಅಂದರೆ 2026ರ ಜುಲೈ ಅಂತ್ಯದವರೆಗೆ ನಗರದಲ್ಲಿ ಒಟ್ಟು 4,712 ಸೈಬರ್ ವಂಚನೆ ಪ್ರಕರಣಗಳು ದಾಖಲಾಗಿದ್ದು, ಜನರು ಬರೋಬ್ಬರಿ ₹558 ಕೋಟಿ ಕಳೆದುಕೊಂಡಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

ಬೆಂಗಳೂರು: ಒಂದು ಸಣ್ಣ ಕ್ಲಿಕ್, ಅನಾಮಧೇಯ ಕರೆಯ ಮಾತು ಅಥವಾ ಎರಡು ಪಟ್ಟು ಲಾಭದ ಆಮಿಷ ಸಾಕು, ಕಷ್ಟಪಟ್ಟು ದುಡಿದ ಲಕ್ಷಾಂತರ ರೂಪಾಯಿ ಬ್ಯಾಂಕ್ ಖಾತೆಯಿಂದ ಮಾಯವಾಗಲು. ಹಿಗೆಯೇ, ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸೈಬರ್ ಅಪರಾಧಿಗಳು ನಿರಂತರವಾಗಿ ಬಲೆ ಬೀಸುತ್ತಿದ್ದು, ಜನರನ್ನು ಕ್ಷಣಮಾತ್ರದಲ್ಲಿ ಕಂಗಾಲಾಗಿಸುತ್ತಿದ್ದಾರೆ. ಅದರಂತೆ, ರಾಜಧಾನಿ ಬೆಂಗಳೂರಿನಲ್ಲಿ ಕೇಳದ 7 ತಿಂಗಳಲ್ಲಿ ಅಂದರೆ 2026ರ ಜುಲೈ ಅಂತ್ಯದವರೆಗೆ ನಗರದಲ್ಲಿ ಒಟ್ಟು 4,712 ಸೈಬರ್ ವಂಚನೆ ಪ್ರಕರಣಗಳು ದಾಖಲಾಗಿದ್ದು, ಜನರು ಬರೋಬ್ಬರಿ ₹558 ಕೋಟಿ ಕಳೆದುಕೊಂಡಿದ್ದಾರೆ. ಆ ಕುರಿತ ವರದಿ ಇಲ್ಲಿದೆ:
ರಾಜಧಾನಿಯಲ್ಲಿ ಇಂಜಿನಿಯರ್‌ಗಳು, ವೈದ್ಯರು, ಶಿಕ್ಷಕರು, ಬ್ಯಾಂಕ್ ಸಿಬ್ಬಂದಿ, ಹಿರಿಯ ನಾಗರಿಕರು ಹಾಗೂ ಗೃಹಿಣಿಯರು ಸೇರಿದಂತೆ ಹಲವರನ್ನು ಗುರಿಯಾಗಿಸಿ ಸೈಬರ್ ವಂಚನೆಯ ಜಾಲ ಹೆಚ್ಚುತ್ತಿದೆ. ಅದರಂತೆ, ಕೇವಲ ಕಳೆದ 7 ತಿಂಗಳ ಅವಧಿಯಲ್ಲಿ ಸಾರ್ವಜನಿಕರು ಬರೋಬ್ಬರಿ 558 ಕೋಟಿ ರೂಪಾಯಿಗೂ ಅಧಿಕ ಹಣವನ್ನು ಸೈಬರ್ ಚೋರರ ಕೈಯಲ್ಲಿ ಕಳೆದುಕೊಂಡಿದ್ದಾರೆ. ಅದರಂತೆ, ಪ್ರತಿದಿನ ಸರಾಸರಿ 22 ಸೈಬರ್ ವಂಚನೆ ಪ್ರಕರಣಗಳು ದಾಖಲಾಗುತ್ತಿದ್ದು, ಪ್ರತಿನಿತ್ಯ ಸುಮಾರು 2.63 ಕೋಟಿ ರೂಪಾಯಿ ವಂಚನೆಯಾಗುತ್ತಿದೆ ಎಂದು ಗೃಹ ಇಲಾಖೆಯ ಅಧಿಕೃತ ಅಂಕಿಅಂಶಗಳಿಂದ ಬೆಳಕಿಗೆ ಬಂದಿದೆ.
30ಕ್ಕೂ ಹೆಚ್ಚು ಬಗೆಯ ವಂಚನೆ ತಂತ್ರಗಳು!
ಸೈಬರ್ ಖದೀಮರು 30ಕ್ಕೂ ಹೆಚ್ಚು ಬಗೆಯ ಮಾರ್ಗಗಳಲ್ಲಿ ವಂಚನೆ ನಡೆಸುತ್ತಿದ್ದಾರೆ. ಇದರಲ್ಲಿ ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಅತಿ ಹೆಚ್ಚು ಅಂದರೆ 903 ಪ್ರಕರಣಗಳೊಂದಿಗೆ ಮೊದಲ ಸ್ಥಾನದಲ್ಲಿದೆ. ಉಳಿದಂತೆ ಆನ್‌ಲೈನ್ ಹಣ ವರ್ಗಾವಣೆ ವಂಚನೆ 656, ಒಟಿಪಿ ವಂಚನೆ 392, ಪಾರ್ಟ್‌ಟೈಂ ಉದ್ಯೋಗ ಮತ್ತು ರಿವ್ಯೂ ಹೆಸರಿನಲ್ಲಿ 385 ಹಾಗೂ ಕ್ರೆಡಿಟ್ ಕಾರ್ಡ್ ವಂಚನೆಗೆ ಸಂಬಂಧಿಸಿದ 234 ಪ್ರಕರಣಗಳು ದಾಖಲಾಗಿವೆ. ಆರಂಭದಲ್ಲಿ ಕಡಿಮೆ ಹೂಡಿಕೆಗೆ ಹೆಚ್ಚಿನ ಲಾಭ ತೋರಿಸಿ ನಂಬಿಕೆ ಗಳಿಸುವ ಕಿಲಾಡಿಗಳು, ನಂತರ ದೊಡ್ಡ ಮೊತ್ತವನ್ನು ಪಡೆದು ವಂಚಿಸುತ್ತಿದ್ದಾರೆ ಎನ್ನಲಾಗಿದೆ.
ಪೊಲೀಸರ ಗೋಲ್ಡನ್ ಅವರ್ ಕಾರ್ಯಾಚರಣೆ
ಹಣ ಕಳೆದುಕೊಂಡ ತಕ್ಷಣ ಹಲವು ಸಂತ್ರಸ್ತರು ಪೊಲೀಸರನ್ನು ಸಂಪರ್ಕಿಸಿದ ಕಾರಣ, ಬೆಂಗಳೂರು ಸೈಬರ್ ಕ್ರೈಂ ಪೊಲೀಸರು ತಕ್ಷಣವೇ ಬ್ಯಾಂಕುಗಳೊಂದಿಗೆ ಸಮನ್ವಯ ಸಾಧಿಸಿ ವಂಚಕರ ಖಾತೆಗಳಲ್ಲಿದ್ದ ₹191 ಕೋಟಿ ರೂಪಾಯಿಗಳನ್ನು ಫ್ರೀಜ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಈ ಹಣವನ್ನು ಕಾನೂನು ಪ್ರಕ್ರಿಯೆಯ ನಂತರ ಸಂತ್ರಸ್ತರಿಗೆ ವಾಪಸ್ ಕೊಡಿಸಲಾಗುತ್ತಿದೆ. ಅದರಂತೆ, ಕಳೆದ ಏಳು ತಿಂಗಳಲ್ಲಿ ಶೇ. 34 ರಷ್ಟು ಹಣದ ರಿಕವರಿ ಆಗಿದೆ.
ಸಾರ್ವಜನಿಕರಿಗೆ ಪೊಲೀಸರ ಪ್ರಮುಖ ಎಚ್ಚರಿಕೆ
ಸೈಬರ್ ವಂಚನೆಗೆ ಒಳಗಾದ ತಕ್ಷಣದ ಮೊದಲ 1 ರಿಂದ 2 ಗಂಟೆಗಳು ಅತ್ಯಂತ ಪ್ರಮುಖವಾಗಿವೆ. ಹಾಗಾಗಿಯೇ, ಇದನ್ನು, ಗೋಲ್ಡನ್ ಅವರ್ ಎಂದು ಕರೆಯಲಾಗಿತ್ತದೆ. ಈ ಅವಧಿಯಲ್ಲಿ ಕೇಂದ್ರ ಸರ್ಕಾರದ ರಾಷ್ಟ್ರೀಯ ಸೈಬರ್ ಕ್ರೈಂ ಸಹಾಯವಾಣಿ ಸಂಖ್ಯೆ 1930 ಗೆ ಕರೆ ಮಾಡಿ ದೂರು ದಾಖಲಿಸಿದರೆ ಹಣವನ್ನು ವಾಪಸ್ ಪಡೆಯುವ ಸಾಧ್ಯತೆ ಶೇ. 90 ರಷ್ಟು ಇರುತ್ತದೆ. ಇದಕ್ಕೂ ಮುಖ್ಯವಾಗಿ, ಸಾಮಾಜಿಕ ಜಾಲತಾಣಗಳಲ್ಲಿ ಬರುವ ಅತಿಯಾದ ಲಾಭದ ಆಮಿಷ ಒಡ್ಡುವ ಜಾಹೀರಾತುಗಳು ಮತ್ತು ಅಪರಿಚಿತ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ ಎಂದು ಪೊಲೀಸರು ಮನವಿ ಮಾಡಿದ್ದಾರೆ.

ಹೋರಾಟಕ್ಕೂ ಕೊಡಬೇಕು ಬಾಡಿಗೆ! Freedom Parkನಲ್ಲಿ ಪ್ರತಿಭಟನೆಗೆ ₹1 ಲಕ್ಷ ಬಾಡಿಗೆ, ₹10,000 ಅಡ್ವಾನ್ಸ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



