1 ದಿನಕ್ಕೆ ನೀವೂ ಆಗಿ ಪೊಲೀಸ್! ಬೆಂಗಳೂರು ಟ್ರಾಫಿಕ್ ಪೊಲೀಸರಿಂದ ಹೊಸ ಅಭಿಯಾನ
ವಾಹನ ಚಲಾಯಿಸುವಾಗ ಸಿಗ್ನಲ್/ಟ್ರಾಫಿಕ್ ಕಂಡು ಗೊಣಗುವುದು ಸಾಮಾನ್ಯ! ಆದರೆ ಅದೇ ರಸ್ತೆಯಲ್ಲಿ ನಿಂತು ವಾಹನಗಳನ್ನು ನಿಯಂತ್ರಿಸುವ ಪೊಲೀಸರ ಸವಾಲುಗಳನ್ನು ಎಂದಾದರೂ ನೋಡಿದ್ದೀರಾ? ಆ ನೈಜ ಅನುಭವವನ್ನು ಕಲ್ಪಿಸಿಕೊಡಲು ನಮ್ಮ ಬೆಂಗಳೂರು ಪೊಲೀಸ್ ಇಲಾಖೆ ಅಪರೂಪದ ಅವಕಾಶವನ್ನು ನಿಮ್ಮ ಮುಂದಿಟ್ಟಿದೆ.

ಬೆಂಗಳೂರು: ಖಾಕಿ ಸಮವಸ್ತ್ರ ಧರಿಸಿ ಸಿಗ್ನಲ್‌ನಲ್ಲಿ ನಿಂತು ವಾಹನಗಳನ್ನು ನಿಯಂತ್ರಿಸಬೇಕು ಎಂಬ ಆಸೆ ನಿಮಗೂ ಇದೆಯೇ? ಆದರೆ ಯಾವುದೋ ಕಾರಣಕ್ಕೆ ಪೊಲೀಸ್ ಆಗುವ ಆ ಕನಸು ನನಸಾಗಲಿಲ್ಲವೇ? ಚಿಂತೆ ಬೇಡ, ಸಿಲಿಕಾನ್ ಸಿಟಿಯ ಜನರಿಗೆ ಈಗ ಒಂದು ದಿನದ ಮಟ್ಟಿಗೆ ಅಧಿಕೃತವಾಗಿ ಟ್ರಾಫಿಕ್ ಪೊಲೀಸ್ ಆಗುವ ಅದ್ಭುತ ಅವಕಾಶ ಒದಗಿಬಂದಿದೆ. ಹೌದು, ಬೆಂಗಳೂರಿನ ರಸ್ತೆಗಳಲ್ಲಿ ಸಂಚಾರ ಪೊಲೀಸರು ಅನುಭವಿಸುವ ಬಿಸಿಲು, ಧೂಳು ಮತ್ತು ದೈನಂದಿನ ಸವಾಲುಗಳನ್ನು ಸಾರ್ವಜನಿಕರು ಪ್ರತ್ಯಕ್ಷವಾಗಿ ಅರ್ಥಮಾಡಿಕೊಳ್ಳಲು ಬೆಂಗಳೂರು ನಗರ ಸಂಚಾರ ಪೊಲೀಸ್ ಇಲಾಖೆ ‘ಒಂದು ದಿನದ ಮಟ್ಟಿಗೆ ಪೊಲೀಸ್ ಆಗಿ’ (Cop for the Day) ಎಂಬ ವಿನೂತನ ಅಭಿಯಾನವನ್ನು ಮರುಪ್ರಾರಂಭಿಸಿದೆ. ಆ ಕುರಿತ ವರದಿ ಇಲ್ಲಿದೆ:
ಅಭಿಯಾನದ ಉದ್ದೇಶವೇನು?
ನೈಜ ಸವಾಲುಗಳ ಮುಖಾಮುಖಿ: ಬೆಳಗಿನ ಹಾಗೂ ಸಂಜೆಯ ಪೀಕ್ ಅವರ್‌ಗಳಲ್ಲಿ (Peak Hours) ಧೂಳು, ಹವಾಮಾನದ ಏರುಪೇರು ಮತ್ತು ವಾಹನಗಳ ಹಾರ್ನ್‌ಗಳ ಮಧ್ಯೆ ಕೆಲಸ ಮಾಡುವ ಸಂಚಾರ ಸಿಬ್ಬಂದಿಯ ನೈಜ ಒತ್ತಡವನ್ನು ಸಾರ್ವಜನಿಕರು ಸ್ವತಃ ಅನುಭವಿಸಬಹುದು.
ಸುಧಾರಣೆಗೆ ಸಲಹೆ: ರಸ್ತೆಗಿಳಿದು ಕಾರ್ಯನಿರ್ವಹಿಸಿದ ನಂತರ, ಸುಗಮ ಸಂಚಾರಕ್ಕಾಗಿ ಮತ್ತು ರಸ್ತೆ ಸುರಕ್ಷತೆಗಾಗಿ ಸಾರ್ವಜನಿಕರು ತಮ್ಮದೇ ಆದ ಅಮೂಲ್ಯ ಸಲಹೆ ಹಾಗೂ ಕಲ್ಪನೆಗಳನ್ನು ಇಲಾಖೆಗೆ ನೀಡಬಹುದು.
ಪರಸ್ಪರ ಸಹಕಾರ: ಸಾರ್ವಜನಿಕರು ಮತ್ತು ಸಂಚಾರ ಇಲಾಖೆಯ ನಡುವೆ ನೇರ ಸಂವಾದವನ್ನು ಸೃಷ್ಟಿಸಿ, ರಸ್ತೆ ನಿಯಮಗಳ ಪಾಲನೆಯ ಬಗ್ಗೆ ಜಾಗೃತಿ ಮೂಡಿಸುವುದು.
ಯಾರೆಲ್ಲಾ ಭಾಗವಹಿಸಬಹುದು?
ಕಾಲೇಜು ಶಿಕ್ಷಣ ಮುಗಿಸಿರುವ ಅಥವಾ 18 ವರ್ಷ ಮೇಲ್ಪಟ್ಟ ಯಾವುದೇ ಆಸಕ್ತ ನಾಗರಿಕರು ಈ ಕಾರ್ಯಕ್ರಮದಲ್ಲಿ ಸ್ವಯಂಸೇವಕರಾಗಿ ಭಾಗವಹಿಸಬಹುದು. ಏತನ್ಮಧ್ಯೆ, ಸ್ವಯಂಸೇವಕರಿಗೆ ವಾಹನ ಸಂಚಾರ ನಿಯಂತ್ರಿಸಲು ಮತ್ತು ಪಾದಚಾರಿಗಳಿಗೆ ಸಹಾಯ ಮಾಡಲು ಮಾತ್ರ ಅವಕಾಶವಿರುತ್ತದೆ. ಆದರೆ, ತಪ್ಪು ಮಾಡಿದ ವಾಹನ ಸವಾರರಿಗೆ ದಂಡ ವಿಧಿಸುವ ಅಥವಾ ಯಾವುದೇ ಕಾನೂನು ಕ್ರಮ ಜರುಗಿಸುವ ಶಿಕ್ಷಾರ್ಹ ಅಧಿಕಾರ ಇರುವುದಿಲ್ಲ.
ನೋಂದಣಿ ಮಾಡಿಕೊಳ್ಳುವ ವಿಧಾನ
ಈ ಅಭಿಯಾನದಲ್ಲಿ ಭಾಗವಹಿಸಲು ಆಸಕ್ತಿ ಇರುವ ಸಾರ್ವಜನಿಕರು ಬೆಂಗಳೂರು ಸಂಚಾರ ಪೊಲೀಸ್ ಇಲಾಖೆಯ ಬಿಟಿಪಿ ಅಸ್ತ್ರಂ ಆ್ಯಪ್ ಮೂಲಕ ಸುಲಭವಾಗಿ ತಮ್ಮ ಹೆಸರು ನೋಂದಾಯಿಸಿಕೊಳ್ಳಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


