ರಾಜ್ಯ

ದಾವಣಗೆರೆಯಲ್ಲಿ 4 ಜನರ ನಿಗೂಢ ನಾಪತ್ತೆ ಕೇಸ್‌ಗೆ ಬಿಗ್ ಟ್ವಿಸ್ಟ್: ಕೋಟಿ ಕೋಟಿ ವಂಚಿಸಿ ದಂಪತಿ ಎಸ್ಕೇಪ್?

ದಾವಣಗೆರೆ ನಾಪತ್ತೆ ಪ್ರಕರಣಕ್ಕೆ ಮಹಾ ಟ್ವಿಸ್ಟ್: ಷೇರು ಮಾರುಕಟ್ಟೆ ಹೆಸರಲ್ಲಿ ನೂರಾರು ಜನರಿಗೆ ಕೋಟ್ಯಂತರ ರೂಪಾಯಿ ವಂಚನೆ! 30 ಕೋಟಿ ರೂಪಾಯಿ ದೋಚಿ, ಡೆತ್‌ನೋಟ್ ಬರೆದಿಟ್ಟು ಕುಟುಂಬ ಸಮೇತ ಎಸ್ಕೇಪ್ ಆದ ದಂಪತಿ? ಇಲ್ಲಿದೆ ಆ ಕುರಿತ ವರದಿ:

ದಾವಣಗೆರೆಯಲ್ಲಿ 4 ಜನರ ನಿಗೂಢ ನಾಪತ್ತೆ ಕೇಸ್‌ಗೆ ಬಿಗ್ ಟ್ವಿಸ್ಟ್: ಕೋಟಿ ಕೋಟಿ ವಂಚಿಸಿ ದಂಪತಿ ಎಸ್ಕೇಪ್?
ಕೋಟಿ ಕೋಟಿ ವಂಚಿಸಿ ಎಸ್ಕೇಪ್ ಆದ ದಂಪತಿ? — Online Desk
Published On :

ದಾವಣಗೆರೆ: ದಾವಣಗೆರೆಯಲ್ಲಿ ಇತ್ತೀಚೆಗೆ ನಡೆದ ಒಂದೇ ಕುಟುಂಬದ ನಾಲ್ವರ ನಿಗೂಢ ನಾಪತ್ತೆ ಪ್ರಕರಣ ಈಗ ಇಡೀ ಜಿಲ್ಲೆಯನ್ನೇ ಬೆಚ್ಚಿಬೀಳಿಸಿದೆ. ಆರಂಭದಲ್ಲಿ ಇದೊಂದು ಸಾಮಾನ್ಯ ನಾಪತ್ತೆ ಕೇಸ್ ಎಂದು ಭಾವಿಸಲಾಗಿತ್ತು. ಆದರೆ ಪೊಲೀಸ್ ತನಿಖೆ ಮತ್ತು ಜನರ ಆಕ್ರೋಶದ ನಡುವೆ ಇದರ ಹಿಂದೆ ಬೆಳಗಾವಿಯ ಶಿವಂ ಅಸೋಸಿಯೇಟ್ಸ್ ಮಾದರಿಯ ಭಾರೀ ವಂಚನಾ ಜಾಲ ಅಡಗಿರುವುದು ಬಯಲಾಗಿದೆ. ಹೌದು, ಬನಶಂಕರಿ ಬಡಾವಣೆಯ ನಿವಾಸಿ ರಮೇಶ್ ಕುಮಾರ್ ಅವರು,  ಷೇರು ಮಾರುಕಟ್ಟೆಯಲ್ಲಿ ಕೋಟಿ ಕೋಟಿ ಹಣ ಕಳೆದುಕೊಂಡ ನಂತರದ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ನಿಗೂಢವಾಗಿ ನಾಪತ್ತೆಯಾಗಿದ್ದಾರೆ. ಇದರೊಂದಿಗೆ, ಪ್ರಕರಣವು ಆರ್ಥಿಕ ವಂಚನೆಯ ಅಘಾತಕಾರಿ ಸತ್ಯವನ್ನು ಅನಾವರಣಗೊಳಿಸಿದೆ. ಆ ಕುರಿತ ವರದಿ ಇಲ್ಲಿದೆ:

ಏನಿದು ಘಟನೆ?

ದಾವಣಗೆರೆ ನಗರದ ಬನಶಂಕರಿ ಬಡಾವಣೆಯ ನಿವಾಸಿ, ಮೂಲತಃ ಶ್ಯಾಗಲೆ ಗ್ರಾಮದವರಾದ ರಮೇಶ್ ಕುಮಾರ್ (38) ಅವರು ಪತ್ನಿ ಜಯಶೀಲ (36), 9 ವರ್ಷದ ಮಗ ಹಿತೇಶ್ ಮತ್ತು 3 ವರ್ಷದ ಮಗಳು ಪ್ರೇರಣಾ ಅವರೊಂದಿಗೆ, ತಮ್ಮ ಕಾರು ಮತ್ತು ಬೈಕ್‌ಗಳನ್ನು ಮನೆಯಲ್ಲೇ ಬಿಟ್ಟು ಆಗಸ್ಟ್ 13 ರಂದು ಆಟೋದಲ್ಲಿ ಹೋಗಿದ್ದಾರೆ. ಇದಕ್ಕೂ ಮುನ್ನ ತಮ್ಮ ತಾಯಿಗೆ "ವ್ಯವಹಾರದ ಕೆಲಸದ ಮೇಲೆ ಬೆಂಗಳೂರಿಗೆ ಹೋಗಿ ಬರುತ್ತೇವೆ" ಎಂದು ಹೇಳಿ ಹೊರಟಿದ್ದಾರೆ. ಆದರೆ, 3 ದಿನಗಳಾದರೂ ವಾಪಸ್ ಬಾರದಿದ್ದಾಗ ರಮೇಶ್ ಅವರ ತಾಯಿ ಲಲಿತಮ್ಮ ಮತ್ತೊಂದು ಕೀಯಿಂದ ಮನೆ ತೆರೆದು ನೋಡಿದ್ದಾರೆ. ಆಗ ಮನೆಯಲ್ಲಿ ದಂಪತಿಯ ಮೊಬೈಲ್ ಫೋನ್‌ಗಳು ಮತ್ತು ಒಂದು ಡೆತ್‌ನೋಟ್ (ಪತ್ರ) ಸಿಕ್ಕಿದೆ. ಅದರಲ್ಲಿ "ನಮಗೆ 1 ಕೋಟಿ ರೂ.ಗೂ ಅಧಿಕ ಸಾಲದ ಹೊರೆ ಇದೆ, ಇದನ್ನು ತೀರಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ನಾವು ದೂರ ಹೋಗುತ್ತಿದ್ದೇವೆ, ನಮ್ಮನ್ನು ಹುಡುಕಬೇಡಿ" ಎಂದು ಬರೆಯಲಾಗಿತ್ತು. ಈ ಹಿನ್ನೆಲೆಯಲ್ಲಿ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು.

ಬಯಲಾದ ಬೃಹತ್ ವಂಚನೆ

ಪೊಲೀಸರು ಈ ಪತ್ರವನ್ನು ಆಧರಿಸಿ ತನಿಖೆ ತೀವ್ರಗೊಳಿಸಿದಾಗ ಈ ಸಾಮಾನ್ಯ ನಾಪತ್ತೆ ಪ್ರಕರಣದ ಹಿಂದೆ ದೊಡ್ಡ ಹೂಡಿಕೆ ವಂಚನೆ ಜಾಲ ಇರುವುದು ಬೆಳಕಿಗೆ ಬಂದಿದೆ. ಅದರಂತೆ, ರಮೇಶ್ ಕುಮಾರ್ ಕೇವಲ ಕಂಟ್ರಾಕ್ಟರ್ ಆಗಿರದೆ, ಸಾರ್ವಜನಿಕರಿಂದ ಹಣ ಪಡೆದು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ವ್ಯವಹಾರ ಮಾಡುತ್ತಿದ್ದ. ಇನ್ನು, ಬೆಳಗಾವಿಯ ಶಿವಂ ಅಸೋಸಿಯೇಟ್ಸ್ ವಂಚನೆ ಮಾದರಿಯಲ್ಲೇ ರಮೇಶ್ ಕುಮಾರ್, ಜನರಿಗೆ ವಂಚಿಸಲು ಇವನು "1 ಲಕ್ಷ ರೂಪಾಯಿ ಹೂಡಿಕೆ ಮಾಡಿದರೆ ತಿಂಗಳಿಗೆ ಭಾರಿ ಲಾಭ ಅಥವಾ ದೊಡ್ಡ ಮೊತ್ತದ ಬಡ್ಡಿ ಕೊಡುತ್ತೇನೆ" ಎಂದು ನಂಬಿಸಿದ್ದ. ಈ ಆಸೆಗೆ ಬಿದ್ದು ನೂರಾರು ಜನ ಇವನ ಬಳಿ ಕೋಟ್ಯಂತರ ರೂಪಾಯಿ ಹೂಡಿಕೆ ಮಾಡಿದ್ದರು. ಪ್ರಾಥಮಿಕ ಮಾಹಿತಿಯ ಪ್ರಕಾರ ಇವನು ಸಾರ್ವಜನಿಕರಿಂದ ಸುಮಾರು 25 ರಿಂದ 30 ಕೋಟಿ ರೂಪಾಯಿಗೂ ಅಧಿಕ ಹಣ ವಸೂಲಿ ಮಾಡಿದ್ದ ಎನ್ನಲಾಗಿದೆ.

ಹಾಗಾದರೆ, ಊರು ಬಿಟ್ಟಿದ್ದಕ್ಕೆ ಕಾರಣವೇನು?

ಇತ್ತೀಚೆಗೆ ಷೇರು ಮಾರುಕಟ್ಟೆಯಲ್ಲಿ ಭಾರಿ ನಷ್ಟ ಅನುಭವಿಸಿದ ರಮೇಶ್ ಕುಮಾರ್, ಜನರಿಗೆ ಹಣ ಹಾಗೂ ಲಾಭವನ್ನು ವಾಪಸ್ ನೀಡಲಾಗದೆ ಕಂಗಾಲಾಗಿದ್ದ. ಹಣ ಕೊಟ್ಟವರು ವಾಪಸ್ ಕೇಳಲು ಒತ್ತಡ ಹಾಕಲು ಶುರು ಮಾಡಿದಾಗ, ಸಾಲದ ಪತ್ರ ಬರೆದಿಟ್ಟು ಹೆಂಡತಿ ಮತ್ತು ಮಕ್ಕಳೊಂದಿಗೆ ಪ್ಲಾನ್ ಮಾಡಿ ಊರು ಬಿಟ್ಟು ಪರಾರಿಯಾಗಿದ್ದಾನೆ ಎನ್ನಲಾಗಿದೆ.

ಪ್ರಸ್ತುತ ದಾವಣಗೆರೆಯ ವಿದ್ಯಾನಗರ ಪೊಲೀಸರು ಈ ವಂಚನೆ ಮತ್ತು ನಾಪತ್ತೆ ಪ್ರಕರಣದ ಸಂಪೂರ್ಣ ತನಿಖೆ ನಡೆಸುತ್ತಿದ್ದು, ತಲೆಮರೆಸಿಕೊಂಡಿರುವ ಕುಟುಂಬದ ಪತ್ತೆಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.