ರಾಜ್ಯ

ಹೊಸೂರು ರಸ್ತೆಯಲ್ಲಿ ಕಾರೊಂದರಲ್ಲಿ 9 ಕೋಟಿ ರೂ ವಶಪಡಿಸಿಕೊಂಡ ಐಟಿ ಅಧಿಕಾರಿಗಳು!

ಹೊಸೂರು ರಸ್ತೆಯ ಸಿಗ್ನಲ್ ಒಂದರ ಬಳಿ ಪೊಲೀಸರು KL 20 T 8629 ನೋಂದಣಿ ಸಂಖ್ಯೆಯ ಕಾರನ್ನು ತಡೆದು ನಿಲ್ಲಿಸಿದ್ದಾರೆ. ಬೆಂಗಳೂರಿನಿಂದ ಹೊಸೂರಿನ ಕಡೆಗೆ ತೆರಳುತ್ತಿದ್ದ ಈ ಕಾರನ್ನು ಅದರಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ವ್ಯಕ್ತಿಗಳೊಂದಿಗೆ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು.

ಹೊಸೂರು ರಸ್ತೆಯಲ್ಲಿ ಕಾರೊಂದರಲ್ಲಿ 9 ಕೋಟಿ ರೂ ವಶಪಡಿಸಿಕೊಂಡ ಐಟಿ ಅಧಿಕಾರಿಗಳು!
ಕಾರಿನಲ್ಲಿ ಪತ್ತೆಯಾದ ಹಣ
Published On :

ಬೆಂಗಳೂರು: ಹೊಸೂರು ರಸ್ತೆಯಲ್ಲಿ ತಮಿಳುನಾಡಿನ ಆಭರಣ ವ್ಯಾಪಾರಿಯೊಬ್ಬರ ಕಾರನ್ನು (SUV) ತಡೆದು ನಿಲ್ಲಿಸಿದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು, ಅದರಲ್ಲಿ ಸಾಗಿಸುತ್ತಿದ್ದ 9 ಕೋಟಿ ರೂ.ಗಳ ಲೆಕ್ಕಕ್ಕೆ ಸಿಗದ ಹಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಮಂಗಳವಾರ ರಾತ್ರಿ ಈ ಘಟನೆ ನಡೆದಿದೆ.

ಅಧಿಕಾರಿಗಳ ಪ್ರಕಾರ, ತಮಿಳುನಾಡಿನ ಕಡೆಗೆ ಹಣವನ್ನು ಅಕ್ರಮವಾಗಿ ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ದೊರೆತ ಹಿನ್ನೆಲೆಯಲ್ಲಿ, ಬೆಂಗಳೂರಿನ ಆದಾಯ ತೆರಿಗೆ ಇಲಾಖೆಯ ಘಟಕ-22ರ ಉಪ ನಿರ್ದೇಶಕ ಜಗದೀಶ್ ಅವರು ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯ ರಾತ್ರಿ ಗಸ್ತು ಸಿಬ್ಬಂದಿಯ ನೆರವು ಕೋರಿದ್ದಾರೆ.

ರಾತ್ರಿ ಸುಮಾರು 10.30ರ ಸುಮಾರಿಗೆ, ಬಿಇಟಿಎಲ್ (BETL) ಟೋಲ್ ದಾಟಿದ ನಂತರ ಹೊಸೂರು ರಸ್ತೆಯ ಸಿಗ್ನಲ್ ಒಂದರ ಬಳಿ ಪೊಲೀಸರು KL 20 T 8629 ನೋಂದಣಿ ಸಂಖ್ಯೆಯ ಕಾರನ್ನು ತಡೆದು ನಿಲ್ಲಿಸಿದ್ದಾರೆ. ಬೆಂಗಳೂರಿನಿಂದ ಹೊಸೂರಿನ ಕಡೆಗೆ ತೆರಳುತ್ತಿದ್ದ ಈ ಕಾರನ್ನು ಅದರಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ವ್ಯಕ್ತಿಗಳೊಂದಿಗೆ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು.

ನಂತರ ಅವರನ್ನು ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳಿಗೆ ಹಸ್ತಾಂತರಿಸಲಾಯಿತು. ಕಾರನ್ನು ಪರಿಶೀಲಿಸಿದಾಗ ಅಧಿಕಾರಿಗಳಿಗೆ 9 ಕೋಟಿ ರೂ. ಹಣ ಪತ್ತೆಯಾಯಿತು. ಕಾರಿನಲ್ಲಿದ್ದವರ ಪೈಕಿ ಒಬ್ಬರನ್ನು ತಮಿಳುನಾಡಿನ ತೂತುಕುಡಿಯ 'ಸಿಂಧು ಜ್ಯುವೆಲರ್ಸ್'ನ ಸಚಿನ್ (42) ಎಂದು ಗುರುತಿಸಲಾಗಿದೆ.

ಅವರನ್ನು ಮುಂದಿನ ವಿಚಾರಣೆಗಾಗಿ ಆದಾಯ ತೆರಿಗೆ ಅಧಿಕಾರಿಗಳು ವಶಕ್ಕೆ ಪಡೆದ್ದಾರೆ. ಇದೇ ವೇಳೆ, ತಮಿಳುನಾಡಿನಲ್ಲಿರುವ ಸಚಿನ್ ಅವರ ನಿವಾಸದ ಮೇಲೂ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿ, ಹೆಚ್ಚುವರಿಯಾಗಿ 1.3 ಕೋಟಿ ರೂ. ಹಣವನ್ನು ವಶಪಡಿಸಿಕೊಂಡರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.