"ನಾಗೇಂದ್ರ ಅಪರಾಧಿ": ಪ್ರತಿಭಟನೆ ವೇಳೆ ಹೇಳಿಕೆ ನೀಡಿ ಪೇಚಿಗೆ ಸಿಲುಕಿದ ಸಚಿವ ಶಿವಲಿಂಗೇಗೌಡ
ವಿಧಾನಸೌಧದ ಗಾಂಧಿ ಪ್ರತಿಮೆ ಎದುರು ಕಾಂಗ್ರೆಸ್ ಪ್ರತಿಭಟನೆ ವೇಳೆ, ಅಬಕಾರಿ ಸಚಿವ ಶಿವಲಿಂಗೇಗೌಡ ತಮ್ಮ ಹೇಳಿಕೆಯಿಂದ ಪೇಚಿಗೆ ಸಿಲುಕಿದ ಘಟನೆ ನಡೆಯಿತು.

ಬೆಂಗಳೂರು: ವಾಲ್ಮೀಕಿ ಹಗರಣದಲ್ಲಿ ಆರೋಪಿಯಾಗಿರುವ ಸಚಿವ ನಾಗೇಂದ್ರ ಅವರನ್ನು ಸಂಪುಟದಿಂದ ವಜಾಗೊಳಿಸಬೇಕೆಂದು ಪ್ರತಿಪಕ್ಷ ಬಿಜೆಪಿ ಆಗ್ರಹಿಸುತ್ತಿದೆ.
ಸದನದಲ್ಲಿ ಬಿಜೆಪಿ ಸದಸ್ಯರು ಪ್ರತಿಭಟನೆ ನಡೆಸುತ್ತಿದ್ದು, ಕಲಾಪಕ್ಕೆ ಅಡ್ಡಿಪಡಿಸುತ್ತಿರುವ ಬಿಜೆಪಿ ವಿರುದ್ಧ ವಿಧಾನಸೌಧದ ಗಾಂಧಿ ಪ್ರತಿಮೆ ಎದುರು ಕಾಂಗ್ರೆಸ್ ಪ್ರತಿಭಟನೆ ವೇಳೆ, ಅಬಕಾರಿ ಸಚಿವ ಶಿವಲಿಂಗೇಗೌಡ ತಮ್ಮ ಹೇಳಿಕೆಯಿಂದ ಪೇಚಿಗೆ ಸಿಲುಕಿದ ಘಟನೆ ನಡೆಯಿತು.
ಪ್ರತಿಭಟನೆ ವೇಳೆ ಘೋಷಣೆ ಕೂಗುತ್ತಿದ್ದ ಅಬಕಾರಿ ಸಚಿವರನ್ನು ಖಾಸಗಿ ದೃಶ್ಯ ಮಾಧ್ಯಮದ ಪ್ರತಿನಿಧಿಯೊಬ್ಬರು ಮಾತನಾಡಿಸಿದ್ದು, ಈ ವೇಳೆ ಸಿದ್ದರಾಮಯ್ಯ ಅವಧಿಯಲ್ಲಿ ಸಚಿವ ನಾಗೇಂದ್ರ ಅವರ ರಾಜೀನಾಮೆಯನ್ನು ಏಕೆ ಪಡೆದುಕೊಳ್ಳಲಾಯಿತು ಎಂದು ಪ್ರಶ್ನಿಸಿದ್ದಾರೆ. ಈ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಶಿವಲಿಂಗೇಗೌಡ, ಸಚಿವ ನಾಗೇಂದ್ರ ಅವರ ವಿರುದ್ಧ ಆಪಾದನೆ ಬಂದಾಗ ಸದನದಲ್ಲಿ ಚರ್ಚೆಯಾಗಿತ್ತು. ಸತ್ಯಾಸತ್ಯತೆಗಳು ತಿಳಿದಿರಲಿಲ್ಲ ಎಂದು ಹೇಳಿದರು.
ಮರು ಪ್ರಶ್ನೆ ಮಾಡಿದ ವರದಿಗಾರ, ಸತ್ಯಾಸತ್ಯತೆ ತಿಳಿಯದೇ ರಾಜೀನಾಮೆ ಕೊಡಿಸಿ ನಾಗೇಂದ್ರ ಅವರನ್ನು ಬಲಿಪಶು ಮಾಡಲಾಯ್ತಾ? ಎಂದು ಕೇಳಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಶಿವಲಿಂಗೇಗೌಡ, ನಾಗೇಂದ್ರ ಮೇಲ್ನೋಟಕ್ಕೆ ಅಪರಾಧಿ ಎಂಬ ಶಂಕೆ ಇದ್ದಿದ್ದರಿಂದ ರಾಜೀನಾಮೆ ಪಡೆದುಕೊಳ್ಳಲಾಯಿತು ಎಂದು ಹೇಳಿ ಪೇಚಿಗೆ ಸಿಲುಕಿದರು.
ಆರೋಪಿ ಎಂಬ ಶಂಕೆ ಇದ್ದ ಹಿನ್ನೆಲೆಯಲ್ಲಿ ರಾಜೀನಾಮೆ ಪಡೆಯಲಾಯಿತು ಎಂದು ಹೇಳುವ ಭರದಲ್ಲಿ ನಾಗೇಂದ್ರ ಅಪರಾಧಿ ಎಂದು ಸಚಿವರು ಹೇಳಿದ್ದು ಈಗ ಎಲ್ಲೆಡೆ ವೈರಲ್ ಆಗತೊಡಗಿದೆ. ಸಚಿವರ ಪಕ್ಕದಲ್ಲಿದ್ದ ಶಾಸಕರು ಸಚಿವರಿಗೆ ತಪ್ಪು ಸರಿಪಡಿಸಿಕೊಳ್ಳುವಂತೆ ಸೂಚಿಸಿದ ಬಳಿಕ ಸಚಿವರು, ನಾಗೇಂದ್ರ ಆರೋಪಿ ಇರಬಹುದೆಂಬ ಶಂಕೆಯಿಂದ ರಾಜೀನಾಮೆ ಪಡೆಯಲಾಗಿತ್ತು ಎಂದು ಹೇಳಿಕೆಯನ್ನು ಸರಿಪಡಿಸಿಕೊಂಡರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



