ಸಚಿವ ಸ್ಥಾನಕ್ಕೆ ನಾಗೇಂದ್ರ ರಾಜೀನಾಮೆ ಹೊರತಾಗಿಯೂ ಬಿಜೆಪಿ ಪಾದಯಾತ್ರೆ ಮುಂದುವರಿಕೆ: ಬಿ. ಶ್ರೀರಾಮುಲು; Video
89 ಕೋಟಿ ರೂ.ಗಳ ಹಗರಣದ ಆರೋಪದ ಹಿನ್ನೆಲೆಯಲ್ಲಿ ಯೋಜನೆ ಮತ್ತು ಸಾಂಖ್ಯಿಕ ಸಚಿವ ಬಿ. ನಾಗೇಂದ್ರ ಅವರು ಶುಕ್ರವಾರ ರಾಜೀನಾಮೆ ನೀಡಿದ್ದರೂ, ಬಿಜೆಪಿ ತನ್ನ ಪಾದಯಾತ್ರೆಯನ್ನು ಮುಂದುವರಿಸಲು ನಿರ್ಧರಿಸಿದೆ.

ಬೆಂಗಳೂರು: ಸೆಪ್ಟೆಂಬರ್ 1 ರಿಂದ ರಾಯಚೂರಿನಿಂದ ಬಳ್ಳಾರಿಯವರೆಗೆ ನಿಗದಿಯಾಗಿರುವ 10 ದಿನಗಳ ಪಾದಯಾತ್ರೆಯನ್ನು ಬಿಜೆಪಿ ಮುಂದುವರಿಸಲಿದೆ ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ಶನಿವಾರ ತಿಳಿಸಿದರು.
2024ರಲ್ಲಿ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ 89 ಕೋಟಿ ರೂ.ಗಳ ಹಗರಣದ ಆರೋಪದ ಹಿನ್ನೆಲೆಯಲ್ಲಿ ಯೋಜನೆ ಮತ್ತು ಸಾಂಖ್ಯಿಕ ಸಚಿವ ಬಿ. ನಾಗೇಂದ್ರ ಅವರು ಶುಕ್ರವಾರ ರಾಜೀನಾಮೆ ನೀಡಿದ್ದರೂ, ಬಿಜೆಪಿ ತನ್ನ ಪಾದಯಾತ್ರೆಯನ್ನು ಮುಂದುವರಿಸಲು ನಿರ್ಧರಿಸಿದೆ.
ಸೆಪ್ಟೆಂಬರ್ 1 ರಂದು ಲಿಂಗಸುಗೂರಿನಲ್ಲಿ ಆರಂಭವಾಗಲಿರುವ ಈ ಪಾದಯಾತ್ರೆ, ಸೆಪ್ಟೆಂಬರ್ 10 ರಂದು ಬಳ್ಳಾರಿಯಲ್ಲಿ ಮುಕ್ತಾಯಗೊಳ್ಳಲಿದ್ದು, ಒಂಬತ್ತು ವಿಧಾನಸಭಾ ಕ್ಷೇತ್ರಗಳಲ್ಲಿ ಕ್ರಮಿಸಲಿದೆ ಶ್ರೀರಾಮುಲು ಹೇಳಿದರು. ಬಳ್ಳಾರಿ ಗ್ರಾಮೀಣ ಕ್ಷೇತ್ರದ ಶಾಸಕ ನಾಗೇಂದ್ರ ಅವರ ರಾಜೀನಾಮೆಯನ್ನು ಒತ್ತಾಯಿಸುವ ಹಿನ್ನೆಲೆಯಲ್ಲಿ ಈ ಪಾದಯಾತ್ರೆಯನ್ನು ಆರಂಭದಲ್ಲಿ ಘೋಷಿಸಲಾಗಿತ್ತು.
ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ, ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಹಾಗೂ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮತ್ತು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಸೇರಿದಂತೆ ಹಲವು ನಾಯಕರು ಲಿಂಗಸುಗೂರಿನಲ್ಲಿ ಪಾದಯಾತ್ರೆಗೆ ಚಾಲನೆ ನೀಡಲಿದ್ದಾರೆ ಎಂದು ಅವರು ತಿಳಿಸಿದರು.
ಈ ಪಾದಯಾತ್ರೆಯು ಮಾಸ್ಕಿ, ಸಿಂಧನೂರು, ಹಂಚನಾಳ ಕ್ಯಾಂಪ್, ಕನಕಗಿರಿ, ಗಂಗಾವತಿ, ಕಂಪ್ಲಿ, ಸಂಡೂರು ಮತ್ತು ಬಳ್ಳಾರಿ ಗ್ರಾಮೀಣ ಪ್ರದೇಶಗಳ ಮೂಲಕ ಸಾಗಿ ಬಳ್ಳಾರಿ ನಗರದಲ್ಲಿ ಮುಕ್ತಾಯವಾಗಲಿದೆ ಎಂದು ಅವರು ಹೇಳಿದರು.
ನಾಗೇಂದ್ರ ಅವರ ರಾಜೀನಾಮೆಗೆ ಬಿಜೆಪಿ ಮತ್ತು ಜೆಡಿಎಸ್ ಶಾಸಕರು ವಿಧಾನಸಭೆಯಲ್ಲಿ ನಡೆಸಿದ ಪ್ರತಿಭಟನೆಗಳೇ ಕಾರಣ. ಕೇವಲ 25 ದಿನಗಳ ಅವಧಿಯಲ್ಲಿ ಸಚಿವರೊಬ್ಬರು ರಾಜೀನಾಮೆ ನೀಡುವಂತೆ ಮಾಡಲಾಗಿದೆ. 187 ಕೋಟಿ ರೂ.ಗಳ ಅವ್ಯವಹಾರವು ಪರಿಶಿಷ್ಟ ಪಂಗಡದ ಸಮುದಾಯಗಳ ಅಭಿವೃದ್ಧಿಗಾಗಿ ಮೀಸಲಾದ ಹಣಕ್ಕೆ ಸಂಬಂಧಿಸಿದ್ದಾಗಿದೆ ಮತ್ತು ಈ ಹಣವನ್ನು ಬಳ್ಳಾರಿ ಹಾಗೂ ಕೊಪ್ಪಳ ಲೋಕಸಭಾ ಚುನಾವಣೆಗಳ ಸಂದರ್ಭದಲ್ಲಿ ಬಳಸಿಕೊಳ್ಳಲಾಗಿದೆ. ಒಂದೇ ರೀತಿಯ ಆರೋಪಗಳಿಗಾಗಿ ಎರಡನೇ ಬಾರಿಗೆ ರಾಜೀನಾಮೆಯನ್ನು ಅಂಗೀಕರಿಸಿರುವುದು ಇಂದಿನ ಸರ್ಕಾರದ ವಿಶೇಷತೆಯಾಗಿದೆ ಎಂದು ಶ್ರೀರಾಮುಲು ವ್ಯಂಗ್ಯವಾಡಿದರು.
ತಾವು 'ದಲಿತ'ರಾಗಿರುವುದರಿಂದಲೇ ವಿರೋಧ ಪಕ್ಷಗಳು ತಮ್ಮನ್ನು ಗುರಿಯಾಗಿಸಿಕೊಂಡಿವೆ ಎಂಬ ನಾಗೇಂದ್ರ ಅವರ ವಾದವನ್ನು ಶ್ರೀರಾಮುಲು ತಳ್ಳಿಹಾಕಿದರು.
ಯಾವುದೇ ತಪ್ಪು ನಡೆಯದಿದ್ದಲ್ಲಿ 2024ರ ಆರಂಭದಲ್ಲಿಯೇ ಸಚಿವರು ಏಕೆ ರಾಜೀನಾಮೆ ನೀಡಿದ್ದರು ಎಂದು ಅವರು ಪ್ರಶ್ನಿಸಿದರು. ನಿಗಮದ ಲೆಕ್ಕಪತ್ರ ಅಧೀಕ್ಷಕ ಪಿ. ಚಂದ್ರಶೇಖರನ್ (ಪರಿಶಿಷ್ಟ ಪಂಗಡದ ಅಧಿಕಾರಿ) ಆತ್ಮಹತ್ಯೆಗೂ ಮುನ್ನ ಕಿರುಕುಳಕ್ಕೆ ಒಳಗಾಗಿದ್ದರು. ಇವರ ಸಾವಿನಿಂದಲೇ ಈ ಅಕ್ರಮಗಳ ವಿಷಯ ಬೆಳಕಿಗೆ ಬಂದಿತ್ತು. "ನಿಮ್ಮ ಕಣ್ಣೀರು ಮತ್ತು ಸಂಕಷ್ಟಕ್ಕೆ ಕಾಂಗ್ರೆಸ್ ಪಕ್ಷವೇ ಕಾರಣ ಎಂದು ಶ್ರೀರಾಮುಲು ನಾಗೇಂದ್ರ ಅವರಿಗೆ ತಿರುಗೇಟು ನೀಡಿದರು.
ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ಮೀಸಲಾದ ಹಣವನ್ನು ರಕ್ಷಿಸುವುದೇ ಬಿಜೆಪಿಯ ಹೋರಾಟದ ಉದ್ದೇಶ ಎಂದು ಹೇಳಿದ ಶ್ರೀರಾಮುಲು, ವಿರೋಧ ಪಕ್ಷದ ಪ್ರತಿಭಟನೆ ರಾಜಕೀಯ ಪ್ರೇರಿತವಾಗಿದೆ ಎಂಬ ಆರೋಪವನ್ನು ನಿರಾಕರಿಸಿದರು. "ನಾವು ವಿರೋಧ ಪಕ್ಷದಲ್ಲಿದ್ದೇವೆ. ನಮ್ಮ ಕೆಲಸವನ್ನು ನಾವು ಮಾಡಲೇಬೇಕು, ಮತ್ತು ನಾವು ಅದನ್ನು ಮಾಡಿದ್ದೇವೆ ಎಂದು ಅವರು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



