ರಾಜ್ಯ

ಕರ್ನಾಟಕದ 43 ಲಕ್ಷಕ್ಕೂ ಹೆಚ್ಚು ಮತದಾರರಿಗೆ ಶೀಘ್ರದಲ್ಲೇ ಚುನಾವಣಾ ಆಯೋಗದ ನೋಟಿಸ್! ಯಾರಿಗೆಲ್ಲ ಬರಲಿದೆ ನೋಟಿಸ್?

ರಾಜ್ಯದಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆ ನಡೆಯುತ್ತಿದ್ದು, ಮ್ಯಾಪಿಂಗ್ ಆಗದ ಮತ್ತು ಮಾಹಿತಿ ದೋಷವಿರುವ ಒಟ್ಟು 43.80 ಲಕ್ಷ ಮತದಾರರಿಗೆ ಭಾರತೀಯ ಚುನಾವಣಾ ಆಯೋಗದಿಂದ ಶೀಘ್ರದಲ್ಲೇ ನೋಟಿಸ್ ಜಾರಿಯಾಗಲಿದೆ. ಆ ಕುರಿತ ವರದಿ ಇಲ್ಲಿದೆ:

ಕರ್ನಾಟಕದ 43 ಲಕ್ಷಕ್ಕೂ ಹೆಚ್ಚು ಮತದಾರರಿಗೆ ಶೀಘ್ರದಲ್ಲೇ  ಚುನಾವಣಾ ಆಯೋಗದ ನೋಟಿಸ್! ಯಾರಿಗೆಲ್ಲ ಬರಲಿದೆ ನೋಟಿಸ್?
ಕರ್ನಾಟಕದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ
Published On :

ಬೆಂಗಳೂರು: ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆ ಗರಿಗೆದರಿದ್ದು, ಅದರಂತೆ, ಚುನಾವಣಾ ಆಯೋಗವು ರಾಜ್ಯದ ಒಟ್ಟು ಮತದಾರರ ಪಟ್ಟಿಯನ್ನು ಅತ್ಯಂತ ಕಟ್ಟುನಿಟ್ಟಾಗಿ ಮರುಪರಿಶೀಲನೆ ಮಾಡುತ್ತಿದೆ. ಇನ್ನು, SIR ಪ್ರಕ್ರಿಯೆಯಲ್ಲಿ ಸಣ್ಣಪುಟ್ಟ ತಪ್ಪುಗಳು ಅಥವಾ ಮಾಹಿತಿ ಕೊರತೆ ಕಂಡುಬಂದಿರುವ ಬರೋಬ್ಬರಿ 43.80 ಲಕ್ಷ ಮತದಾರರನ್ನು ಆಯೋಗ ಗುರುತಿಸಿದೆ. ಅದರಂತೆ, ಈ ಎಲ್ಲ ಜನರಿಗೂ ಶೀಘ್ರದಲ್ಲೇ ಅವರವರ ವಿಳಾಸಕ್ಕೆ ಅಧಿಕೃತ ನೋಟಿಸ್ ತಲುಪಲಿದ್ದು, ನಿಗದಿತ ಸಮಯದೊಳಗೆ ಸೂಕ್ತ ದಾಖಲೆ ನೀಡದಿದ್ದರೆ ಮತದಾನದ ಹಕ್ಕನ್ನೇ ಕಳೆದುಕೊಳ್ಳುವ ಭೀತಿ ಎದುರಾಗಿದೆ.  ಆ ಕುರಿತ ವರದಿ ಇಲ್ಲಿದೆ:

ಹೌದು, ರಾಜ್ಯದಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆ ನಡೆಯುತ್ತಿದ್ದು, ಮ್ಯಾಪಿಂಗ್ ಆಗದ ಮತ್ತು ಮಾಹಿತಿ ದೋಷವಿರುವ ಒಟ್ಟು 43.80 ಲಕ್ಷ ಮತದಾರರಿಗೆ ಭಾರತೀಯ ಚುನಾವಣಾ ಆಯೋಗದಿಂದ (ECI) ಶೀಘ್ರದಲ್ಲೇ ನೋಟಿಸ್ ಜಾರಿಯಾಗಲಿದೆ. ಆದರೆ ಇದು ಕೇವಲ ಪರಿಶೀಲನೆಗಾಗಿ ನೀಡುತ್ತಿರುವ ನೋಟಿಸ್ ಆಗಿದ್ದು, ಯಾವುದೇ ಕಾರಣಕ್ಕೂ ನಿಮ್ಮ ಹೆಸರು ಪಟ್ಟಿಯಿಂದ ನೇರವಾಗಿ ಡಿಲೀಟ್ ಆಗುವುದಿಲ್ಲ. ಜೊತೆಗೆ, ಆಗಸ್ಟ್ 24ರಂದು ಕರಡು ಮತದಾರರ ಪಟ್ಟಿ ಬಿಡುಗಡೆಯಾಗಲಿದ್ದು, ಅಂದಿನಿಂದಲೇ ಅಂದರೆ ಆಗಸ್ಟ್ 24 ರಿಂದ ಅಕ್ಟೋಬರ್ 22ರ ವರೆಗೆ ಈ ನೋಟಿಸ್ ಜಾರಿ ಮತ್ತು ತಕರಾರು ವಿಲೇವಾರಿ ಪ್ರಕ್ರಿಯೆ ನಡೆಯಲಿದೆ.

ಯಾರಿಗೆಲ್ಲ ನೋಟಿಸ್ ಬರಲಿದೆ?

ರಾಜ್ಯದ ಒಟ್ಟು 5.54 ಕೋಟಿ ಮತದಾರರ ಪೈಕಿ ಕರಡು ಪಟ್ಟಿಯಲ್ಲಿರುವ 4.46 ಕೋಟಿ ಮತದಾರರಲ್ಲಿ ಸುಮಾರು ಶೇ. 9.81 ರಷ್ಟು ಜನರಿಗೆ ಈ ನೋಟಿಸ್ ತಲುಪಲಿದೆ. ಪ್ರಮುಖವಾಗಿ ಎರಡು ಕಾರಣಗಳಿಗಾಗಿ ನೋಟಿಸ್ ನೀಡಲಾಗುತ್ತಿದೆ:

  • ಮ್ಯಾಪಿಂಗ್ ಆಗದ ಮತದಾರರು (23.45 ಲಕ್ಷ ಜನ): 2002ರ ಚುನಾವಣಾ ಪಟ್ಟಿಯೊಂದಿಗೆ ತಮ್ಮ ಅಥವಾ ತಮ್ಮ ಪೋಷಕರ ವಿವರ ಹೊಂದಾಣಿಕೆಯಾಗದ ಮತದಾರರು.

  • ಮಾಹಿತಿ ದೋಷವಿರುವ ಮತದಾರರು (20.35 ಲಕ್ಷ ಜನ): ಹೆಸರು, ವಯಸ್ಸು ಅಥವಾ ತಂದೆಯ ಹೆಸರಿನಲ್ಲಿ ಕಾಗುಣಿತ ದೋಷ ಹಾಗೂ ಇನ್ನಿತರ 9 ರೀತಿಯ ತಾಂತ್ರಿಕ ವ್ಯತ್ಯಾಸಗಳಿರುವ ಮತದಾರರು.

ಬೆಂಗಳೂರಿನಲ್ಲೇ ಅತಿ ಹೆಚ್ಚು ನೋಟಿಸ್!

ರಾಜ್ಯದಲ್ಲೇ ಅತಿ ಹೆಚ್ಚು ಅಂದರೆ ಅರ್ಧಕ್ಕಿಂತ ಹೆಚ್ಚು (24 ಲಕ್ಷಕ್ಕೂ ಅಧಿಕ) ನೋಟಿಸ್‌ಗಳು ಬೆಂಗಳೂರು ನಗರ ಒಂದರಲ್ಲೇ ಜಾರಿಯಾಗಲಿವೆ. ಬಿಬಿಎಂಪಿ ಉತ್ತರ, ದಕ್ಷಿಣ, ಮಧ್ಯ ವಲಯ ಹಾಗೂ ಬೆಂಗಳೂರು ನಗರ ಜಿಲ್ಲೆಯ ವ್ಯಾಪ್ತಿಯ ಮತದಾರರು ಇದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

ನೋಟಿಸ್ ಬಂದ ತಕ್ಷಣ ಏನು ಮಾಡಬೇಕು?

ಬಿಎಲ್‌ಒ ಭೇಟಿ: ನಿಮ್ಮ ಬೂತ್ ಮಟ್ಟದ ಅಧಿಕಾರಿಗಳು (BLO) ಖುದ್ದಾಗಿ ನಿಮ್ಮ ಮನೆಗೆ ಬಂದು ನೋಟಿಸ್ ನೀಡಲಿದ್ದಾರೆ.

  • ಆನ್‌ಲೈನ್ ಅಪ್‌ಲೋಡ್: ನೋಟಿಸ್ ಮೇಲೆ ಒಂದು QR ಕೋಡ್ ಇರಲಿದ್ದು, ಅದನ್ನು ಸ್ಕ್ಯಾನ್ ಮಾಡಿ ನಿಮ್ಮ ನಿಗದಿತ ದಾಖಲೆಗಳನ್ನು ಆನ್‌ಲೈನ್‌ನಲ್ಲೇ ಅಪ್‌ಲೋಡ್ ಮಾಡಬಹುದು.

  • ವಿಚಾರಣೆಗೆ ಹಾಜರಾತಿ: ನೋಟಿಸ್‌ನಲ್ಲಿ ನೀಡಲಾಗಿರುವ ದಿನಾಂಕ ಮತ್ತು ಸಮಯದ ಪ್ರಕಾರ ನಿಗದಿತ ಸರ್ಕಾರಿ ಕಚೇರಿ ಅಥವಾ ಮತಗಟ್ಟೆ ಕೇಂದ್ರದಲ್ಲಿ ನಿಮ್ಮ ದಾಖಲೆಗಳೊಂದಿಗೆ ಪರಿಶೀಲನೆಗೆ ಹಾಜರಾಗಬೇಕಾಗುತ್ತದೆ.

  • ದಾಖಲೆಗಳು: ಗುರುತು ಮತ್ತು ವಿಳಾಸದ ದೃಢೀಕರಣಕ್ಕಾಗಿ ಆಧಾರ್ ಕಾರ್ಡ್ ಹೊರತುಪಡಿಸಿ ಇನ್ನೂ ಎರಡು ನಿಗದಿತ ದಾಖಲೆಗಳನ್ನು ಒದಗಿಸಬೇಕಾಗಬಹುದು.

ವಿಚಾರಣೆಗೆ ಹಾಜರಾಗದಿದ್ದರೆ ಏನಾಗುತ್ತದೆ?

ಮೊದಲ ಬಾರಿ ವಿಚಾರಣೆಗೆ ಹಾಜರಾಗದಿದ್ದರೆ ತಕ್ಷಣಕ್ಕೆ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ಮತ್ತೊಂದು ದಿನಾಂಕವನ್ನು ನೀಡಲಾಗುತ್ತದೆ. ಆದರೆ ಎರಡನೇ ಬಾರಿಯೂ ಗೈರುಹಾಜರಾದರೆ, ಮೂರನೇ ಅವಕಾಶ ಇರುವುದಿಲ್ಲ ಮತ್ತು ಅಂತಹವರ ಹೆಸರನ್ನು ಅಂತಿಮ ಮತದಾರರ ಪಟ್ಟಿಯಿಂದ ಕೈಬಿಡಲಾಗುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.