ರಾಜ್ಯ

ಮತ್ತೆ ಒತ್ತುವರಿ ಮಾಡಿದ್ರೆ ದುಪ್ಪಟ್ಟು ದಂಡ: ಫುಟ್‌ಪಾತ್ ಅತಿಕ್ರಮಣಕಾರರಿಗೆ ಕೃಷ್ಣ ಬೈರೇಗೌಡ ಖಡಕ್ ಎಚ್ಚರಿಕೆ..!

ತೆರವುಗೊಳಿಸಿದ ಬಳಿಕ ಮತ್ತೆ ವ್ಯಾಪಾರಕ್ಕೆ ಮರಳುವವರ ವಸ್ತುಗಳನ್ನೂ ವಶಪಡಿಸಿಕೊಳ್ಳಬೇಕು. ಮರು ಅತಿಕ್ರಮಣ ಮಾಡುವವರ ಮೇಲೆ ದುಪ್ಪಟ್ಟು ದಂಡ ವಿಧಿಸಬೇಕು.

ಮತ್ತೆ ಒತ್ತುವರಿ ಮಾಡಿದ್ರೆ ದುಪ್ಪಟ್ಟು ದಂಡ: ಫುಟ್‌ಪಾತ್ ಅತಿಕ್ರಮಣಕಾರರಿಗೆ ಕೃಷ್ಣ ಬೈರೇಗೌಡ ಖಡಕ್ ಎಚ್ಚರಿಕೆ..!
ಕಂದಾಯ ಸಚಿವ ಕೃಷ್ಣ ಬೈರೇಗೌಡ
Published On :

ಬೆಂಗಳೂರು: ಫುಟ್‌ಪಾತ್‌ಗಳನ್ನು ಮತ್ತೆ ಅತಿಕ್ರಮಣ ಮಾಡುವವರ ವಿರುದ್ಧ ದುಪ್ಪಟ್ಟು ದಂಡ ವಿಧಿಸುವಂತೆ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ತೆರವುಗೊಳಿಸಿರುವ ಸ್ಥಳಗಳಲ್ಲಿ ಮತ್ತೆ ಅತಿಕ್ರಮಣವಾಗದಂತೆ ನಿರಂತರ ನಿಗಾ ವಹಿಸುವಂತೆಯೂ ಅವರು ನಿರ್ದೇಶನ ನೀಡಿದ್ದಾರೆ.

ಫುಟ್‌ಪಾತ್ ಅತಿಕ್ರಮಣ ತೆರವು, ‘ಕಸದಿಂದ ಮುಕ್ತಿ’ ಅಭಿಯಾನ ಹಾಗೂ ನಗರದ ವಿವಿಧೆಡೆ ನಿಲ್ಲಿಸಿರುವ ನಿರುಪಯುಕ್ತ ವಾಹನಗಳ ತೆರವು ಕಾರ್ಯಗಳ ಪ್ರಗತಿ ಪರಿಶೀಲಿಸಲು GBA ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದ ಸಚಿವರು ಈ ಸೂಚನೆಗಳನ್ನು ನೀಡಿದ್ದಾರೆ.

ತೆರವುಗೊಳಿಸಿದ ಬಳಿಕ ಮತ್ತೆ ವ್ಯಾಪಾರಕ್ಕೆ ಮರಳುವವರ ವಸ್ತುಗಳನ್ನೂ ವಶಪಡಿಸಿಕೊಳ್ಳಬೇಕು. ಮರು ಅತಿಕ್ರಮಣ ಮಾಡುವವರ ಮೇಲೆ ದುಪ್ಪಟ್ಟು ದಂಡ ವಿಧಿಸಬೇಕು ಎಂದು ಹೇಳಿದ್ದಾರೆ.

ನಗರದ ಸುಮಾರು 1,500 ಕಿ.ಮೀ ಉದ್ದದ ಪ್ರಮುಖ ಹಾಗೂ ಉಪಪ್ರಮುಖ ರಸ್ತೆಗಳ ವ್ಯಾಪ್ತಿಯಲ್ಲಿ ಫುಟ್‌ಪಾತ್ ಅತಿಕ್ರಮಣ ತೆರವು ಕಾರ್ಯ ನಡೆಯುತ್ತಿದೆ. ಈಗಾಗಲೇ 964 ಕಿ.ಮೀ ವ್ಯಾಪ್ತಿಯಲ್ಲಿ ಅತಿಕ್ರಮಣ ತೆರವುಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

ಇದೇ ವೇಳೆ ತೆರವುಗೊಳಿಸಿದ ಸ್ಥಳಗಳನ್ನು ಅಧಿಕಾರಿಗಳು ನಿರಂತರವಾಗಿ ಪರಿಶೀಲಿಸಬೇಕು ಎಂದು ಸೂಚಿಸಿದ ಅವರು, ತೆರವುಗೊಂಡ ಪ್ರದೇಶಗಳು ಮತ್ತೆ ಅತಿಕ್ರಮಣಕ್ಕೆ ಒಳಗಾಗದಂತೆ ಕ್ರಮ ಕೈಗೊಳ್ಳಲು ಶೀಘ್ರದಲ್ಲೇ ನಾಗರಿಕ ಸಂಸ್ಥೆಗಳು ಹಾಗೂ ಪೊಲೀಸ್ ಅಧಿಕಾರಿಗಳ ಜಂಟಿ ಸಭೆ ನಡೆಸಲಾಗುವುದು ಎಂದರು.

1.02 ಲಕ್ಷ ಟನ್ ನಿರ್ಮಾಣ ತ್ಯಾಜ್ಯ ಗುರುತು

GBA ವ್ಯಾಪ್ತಿಯ ಐದು ನಗರ ಪಾಲಿಕೆಗಳಲ್ಲಿ 4,483 ಸ್ಥಳಗಳಲ್ಲಿ 1,02,002 ಟನ್ ನಿರ್ಮಾಣ ಮತ್ತು ಕಟ್ಟಡ ಧ್ವಂಸ ತ್ಯಾಜ್ಯ ಗುರುತಿಸಲಾಗಿದೆ. ಈ ಪೈಕಿ 1,810 ಸ್ಥಳಗಳಿಂದ 43,492 ಟನ್ ತ್ಯಾಜ್ಯವನ್ನು ಈಗಾಗಲೇ ತೆರವುಗೊಳಿಸಲಾಗಿದೆ ಎಂದು ತಿಳಿಸಿದರು.

ಕಾರ್ಯಾಚರಣೆಯನ್ನು ಮತ್ತಷ್ಟು ಚುರುಕುಗೊಳಿಸಿ, ಸೂಕ್ತ ಮೇಲ್ವಿಚಾರಣೆ ಹಾಗೂ ನಿರಂತರ ಪರಿಶೀಲನೆಯೊಂದಿಗೆ ‘ಕಸದಿಂದ ಮುಕ್ತಿ’ ಅಭಿಯಾನವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವಂತೆ ಅವರು ಸೂಚಿಸಿದರು.

ಹೆಬ್ಬಾಳ ಜಂಕ್ಷನ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಮಗ್ರ ಸ್ವಚ್ಛತಾ ಕಾರ್ಯ ಕೈಗೊಳ್ಳುವಂತೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ನಿರ್ದೇಶನ ನೀಡಿದರು.

ಇದಲ್ಲದೆ, ಹೆಬ್ಬಾಳದಿಂದ ಕೆ.ಆರ್.ಪುರಂವರೆಗಿನ ಹೊರ ವರ್ತುಲ ರಸ್ತೆಯಲ್ಲೂ ಬೆಂಗಳೂರು ಉತ್ತರ, ಬೆಂಗಳೂರು ಪೂರ್ವ ಮತ್ತು ಬೆಂಗಳೂರು ಕೇಂದ್ರ ನಗರ ಪಾಲಿಕೆಗಳು ಜಂಟಿಯಾಗಿ ಸಮಗ್ರ ಸ್ವಚ್ಛತಾ ಅಭಿಯಾನ ನಡೆಸುವಂತೆ ಸೂಚನೆ ನೀಡಿದರು.

ಬಿಡಾಡಿ ವಾಹನಗಳ ತೆರವಿಗೂ ಚುರುಕು

ನಗರದ ವಿವಿಧೆಡೆ ದೀರ್ಘಕಾಲದಿಂದ ನಿಲ್ಲಿಸಿರುವ ಬಿಡಾಡಿ ವಾಹನಗಳ ತೆರವು ಕಾರ್ಯವನ್ನು ಪರಿಣಾಮಕಾರಿಯಾಗಿ ಕೈಗೊಳ್ಳಬೇಕು ಎಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.

ಬಿಡಾಡಿ ವಾಹನಗಳ ಮಾಲೀಕರಿಗೆ ನೋಟಿಸ್ ನೀಡುವ ಜವಾಬ್ದಾರಿಯನ್ನು ಕಿರಿಯ ಆರೋಗ್ಯ ನಿರೀಕ್ಷಕರು, ನಾಗರಿಕ ಸಿಬ್ಬಂದಿ, ಮೇಲ್ವಿಚಾರಕರು ಹಾಗೂ ಮಾರ್ಷಲ್‌ಗಳಿಗೆ ವಹಿಸುವಂತೆ ನಗರ ಪಾಲಿಕೆಗಳಿಗೆ ನಿರ್ದೇಶನ ನೀಡಿದರು. ತಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಫುಟ್‌ಪಾತ್ ಅತಿಕ್ರಮಣ ತೆರವು, ‘ಕಸದಿಂದ ಮುಕ್ತಿ’ ಅಭಿಯಾನ ಹಾಗೂ ನಿರುಪಯುಕ್ತ ವಾಹನಗಳ ತೆರವು ಕಾರ್ಯಗಳನ್ನು ಆಗಸ್ಟ್ 30ರೊಳಗೆ ಪೂರ್ಣಗೊಳಿಸಬೇಕು ಎಂದು ಗಡುವು ನೀಡಿದರು.

ತ್ಯಾಜ್ಯ ಸುರಿದ ಮಾಲೀಕನಿಗೆ 1 ಲಕ್ಷ ರೂ. ದಂಡ

ಇದೇ ವೇಳೆ, ಫುಟ್‌ಪಾತ್ ಹಾಗೂ ಮಳೆನೀರು ಚರಂಡಿಗೆ ಕಟ್ಟಡ ನಿರ್ಮಾಣ ತ್ಯಾಜ್ಯ ಸುರಿದ ಆರೋಪದ ಮೇಲೆ ಬೆಂಗಳೂರು ದಕ್ಷಿಣ ನಗರ ಪಾಲಿಕೆ ಕಟ್ಟಡ ಮಾಲೀಕರೊಬ್ಬರಿಗೆ ರೂ.1 ಲಕ್ಷ ದಂಡ ವಿಧಿಸಿದೆ.

ಕೊರಮಂಗಲ 1ನೇ ಬ್ಲಾಕ್‌ನ 6ನೇ ಮುಖ್ಯರಸ್ತೆಯಲ್ಲಿರುವ ನಿರ್ಮಾಣ ಸ್ಥಳದಲ್ಲಿ ಬುಧವಾರ ಬೆಳಗ್ಗೆ ಪರಿಶೀಲನೆ ನಡೆಸಿದ ವೇಳೆ ಬಿಟಿಎಂ ಲೇಔಟ್ ವಿಭಾಗದ ಮಾರ್ಷಲ್‌ವೊಬ್ಬರು ತ್ಯಾಜ್ಯ ಪತ್ತೆಹಚ್ಚಿದ್ದರು.

ಬಳಿಕ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಸಾರ್ವಜನಿಕ ಪ್ರದೇಶದಲ್ಲಿ ಅಕ್ರಮವಾಗಿ ನಿರ್ಮಾಣ ತ್ಯಾಜ್ಯ ಸುರಿದು ಚರಂಡಿ ಹಾಗೂ ಫುಟ್‌ಪಾತ್‌ಗೆ ಹಾನಿ ಮಾಡಿದ ಆರೋಪದ ಮೇಲೆ ಆಸ್ತಿ ಮಾಲೀಕ ಡೇವಿಡ್‌ಗೆ ಸ್ಥಳದಲ್ಲೇ 1 ಲಕ್ಷ ರೂ. ದಂಡ ವಿಧಿಸಿದರು.

ಜೊತೆಗೆ, ತ್ಯಾಜ್ಯವನ್ನು ಸ್ವಂತ ವೆಚ್ಚದಲ್ಲಿ ತೆರವುಗೊಳಿಸುವಂತೆ ಅವರಿಗೆ ಸೂಚಿಸಲಾಗಿದೆ ಎಂದು ಆಯುಕ್ತ ಕೆ.ಎನ್. ರಮೇಶ್ ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.