ರಾಜ್ಯಗಳ ಆದಾಯಕ್ಕೆ ಕೇಂದ್ರ ಕತ್ತರಿ: ಗಣಿ ಮಸೂದೆ ತಿದ್ದುಪಡಿ 2026ಗೆ ರಾಜ್ಯ ಸರ್ಕಾರ ವಿರೋಧ, ಮರುಪರಿಶೀಲನೆಗೆ ಆಗ್ರಹ
ಪತ್ರದಲ್ಲಿ ಕಂದಾಯ ಸಚಿವರೂ ಆಗಿರುವ ಪರಮೇಶ್ವರ್ ಅವರು, ಖನಿಜ ಹಕ್ಕುಗಳು ಮತ್ತು ಖನಿಜಯುಕ್ತ ಭೂಮಿಗಳ ಮೇಲೆ ರಾಜ್ಯ ಸರ್ಕಾರಗಳು ತೆರಿಗೆ ಹಾಗೂ ಸೆಸ್ ವಿಧಿಸುವ ಅಧಿಕಾರವನ್ನು ನಿರ್ಬಂಧಿಸುವ ಉದ್ದೇಶ ಹೊಂದಿರುವ ಮಸೂದೆಯಲ್ಲಿನ ನಿಬಂಧನೆಗಳಿಗೆ ವಿರೋಧ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು: ಕೇಂದ್ರ ಸರ್ಕಾರ ಇತ್ತೀಚೆಗೆ ಸಂಸತ್ತಿನಲ್ಲಿ ಅಂಗೀಕರಿಸಿರುವ ಗಣಿ ಮತ್ತು ಖನಿಜಗಳ (ಅಭಿವೃದ್ಧಿ ಮತ್ತು ನಿಯಂತ್ರಣ) ತಿದ್ದುಪಡಿ ಮಸೂದೆ, 2026 ಅನ್ನು ತಕ್ಷಣವೇ ಹಿಂಪಡೆದು, ಮರುಪರಿಶೀಲಿಸಬೇಕು ಎಂದು ರಾಜ್ಯ ಸರ್ಕಾರ ಆಗ್ರಹಿಸಿದೆ.
ಈ ಕುರಿತು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಗಣಿ ಸಚಿವ ಜಿ. ಕಿಶನ್ ರೆಡ್ಡಿ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.
ಪತ್ರದಲ್ಲಿ ಕಂದಾಯ ಸಚಿವರೂ ಆಗಿರುವ ಪರಮೇಶ್ವರ್ ಅವರು, ಖನಿಜ ಹಕ್ಕುಗಳು ಮತ್ತು ಖನಿಜಯುಕ್ತ ಭೂಮಿಗಳ ಮೇಲೆ ರಾಜ್ಯ ಸರ್ಕಾರಗಳು ತೆರಿಗೆ ಹಾಗೂ ಸೆಸ್ ವಿಧಿಸುವ ಅಧಿಕಾರವನ್ನು ನಿರ್ಬಂಧಿಸುವ ಉದ್ದೇಶ ಹೊಂದಿರುವ ಮಸೂದೆಯಲ್ಲಿನ ನಿಬಂಧನೆಗಳಿಗೆ ವಿರೋಧ ವ್ಯಕ್ತಪಡಿಸಿದ್ದಾರೆ.
‘ರಾಜ್ಯಗಳು ಬಲಿಷ್ಠವಾದಾಗ ಕೇಂದ್ರವೂ ಬಲಿಷ್ಠವಾಗುತ್ತದೆ. ರಾಜ್ಯಗಳಿಗೆ ಅಭಿವೃದ್ಧಿ ಹೊಂದಲು ಅಗತ್ಯವಿರುವ ಸಂಪನ್ಮೂಲಗಳು ಮತ್ತು ಸ್ವಾಯತ್ತತೆ ದೊರೆತಾಗ ದೇಶವೂ ಸಮೃದ್ಧಿಯಾಗುತ್ತದೆ. ಹೀಗಾಗಿ, ಪ್ರಸ್ತುತ ಮಸೂದೆಯನ್ನು ಮರುಪರಿಶೀಲಿಸಿ, ರಾಜ್ಯಗಳೊಂದಿಗೆ ಸಮಗ್ರ ಚರ್ಚೆ ನಡೆಸುವ ಮೂಲಕ ಸಂವಿಧಾನಬದ್ಧ, ಆರ್ಥಿಕವಾಗಿ ಸಮಂಜಸ ಹಾಗೂ ನೈಜ ಒಕ್ಕೂಟ ವ್ಯವಸ್ಥೆಗೆ ಪೂರಕವಾದ ಖನಿಜ ತೆರಿಗೆ ಚೌಕಟ್ಟನ್ನು ರೂಪಿಸಬೇಕು’ ಎಂದು ತಿಳಿಸಿದ್ದಾರೆ.
ಮಸೂದೆಯನ್ನು ಪ್ರಸ್ತುತ ರೂಪದಲ್ಲೇ ಮರುಪರಿಶೀಲಿಸುವಂತೆ ಹಾಗೂ ವಿವಾದಿತ ಅಂಶಗಳನ್ನು ಜಾರಿಗೆ ತರದಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ರಾಜ್ಯಗಳ ಖನಿಜ ಹಕ್ಕುಗಳು ಮತ್ತು ಖನಿಜಯುಕ್ತ ಭೂಮಿಗಳ ಮೇಲಿನ ತೆರಿಗೆ ವಿಧಿಸುವ ಅಧಿಕಾರಕ್ಕೆ ಪರಿಣಾಮ ಬೀರುವ ಯಾವುದೇ ಕಾನೂನು ರೂಪಿಸುವ ಮುನ್ನ, ಎಲ್ಲ ರಾಜ್ಯ ಸರ್ಕಾರಗಳೊಂದಿಗೆ, ಅದರಲ್ಲೂ ವಿಶೇಷವಾಗಿ ಖನಿಜ ಉತ್ಪಾದಕ ರಾಜ್ಯಗಳೊಂದಿಗೆ, ನಿಗದಿತ ಅವಧಿಯೊಳಗೆ ರಚನಾತ್ಮಕ ಸಮಾಲೋಚನೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
ಇದಲ್ಲದೆ, ಖನಿಜ ತೆರಿಗೆಯ ಸಂವಿಧಾನಾತ್ಮಕ, ಹಣಕಾಸು, ಆರ್ಥಿಕ, ಪರಿಸರ ಹಾಗೂ ಹೂಡಿಕೆ ಸಂಬಂಧಿತ ಪರಿಣಾಮಗಳನ್ನು ಪರಿಶೀಲಿಸಲು ಕೇಂದ್ರ ಮತ್ತು ರಾಜ್ಯಗಳ ನಡುವೆ ಸೂಕ್ತ ಸಮಾಲೋಚನಾ ವ್ಯವಸ್ಥೆಯನ್ನು ರಚಿಸುವಂತೆಯೂ ಪ್ರಧಾನಿ ಹಾಗೂ ಕೇಂದ್ರವನ್ನು ಒತ್ತಾಯಿಸಿದ್ದಾರೆ.
ಕರ್ನಾಟಕದ ‘ಕರ್ನಾಟಕ (ಖನಿಜ ಹಕ್ಕುಗಳು ಮತ್ತು ಖನಿಜಯುಕ್ತ ಭೂಮಿ) ತೆರಿಗೆ ಮಸೂದೆ, 2024’ ಸೇರಿದಂತೆ ಈಗಾಗಲೇ ಇರುವ ಹಾಗೂ ಪ್ರಸ್ತಾವಿತ ರಾಜ್ಯ ಕಾನೂನುಗಳನ್ನೂ ಪರಿಗಣಿಸಬೇಕು ಎಂದು ತಿಳಿಸಿದ್ದಾರೆ.
ಇದೇ ವೇಳೆ, 2024ರಲ್ಲಿ ಸುಪ್ರೀಂ ಕೋರ್ಟ್ ನೀಡಿದ ‘ಮಿನರಲ್ ಏರಿಯಾ ಡೆವಲಪ್‌ಮೆಂಟ್ ಅಥಾರಿಟಿ ವರ್ಸಸ್ ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್’ ಪ್ರಕರಣದ ತೀರ್ಪನ್ನು ಪರಮೇಶ್ವರ್ ತಮ್ಮ ಪತ್ರದಲ್ಲಿ ಪ್ರಮುಖವಾಗಿ ಉಲ್ಲೇಖಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



