ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆ: ನಕಲಿ ಪಿಂಚಣಿದಾರರಿಗೆ ಸರ್ಕಾರ ಶಾಕ್; 18 ಲಕ್ಷ ಅಕೌಂಟ್ ತಾತ್ಕಾಲಿಕ ಸ್ಥಗಿತ; ವಂಚನೆಯಲ್ಲಿ ಬೆಂಗಳೂರೇ ನಂ.1
ನಂತರ ಗ್ರಾಮ ಲೆಕ್ಕಾಧಿಕಾರಿಗಳು ಸ್ಥಳಕ್ಕೆ ತೆರಳಿ ಭೌತಿಕ ಪರಿಶೀಲನೆ ನಡೆಸಿ, ಅಗತ್ಯ ದಾಖಲೆಗಳನ್ನು ಸಂಗ್ರಹಿಸಿದ್ದಾರೆ. ಶಂಕಾಸ್ಪದ ಪ್ರಕರಣಗಳನ್ನು ತಹಶೀಲ್ದಾರರಿಗೆ ಕಳುಹಿಸಲಾಗಿದ್ದು, ಅರ್ಹತೆ ಸಾಬೀತಾದ ಬಳಿಕ ಪಿಂಚಣಿ ಮರುಸ್ಥಾಪಿಸಲಾಗುತ್ತದೆ.

ಬೆಂಗಳೂರು: ‘ಸಂಧ್ಯಾ ಸುರಕ್ಷಾ’ ಸೇರಿದಂತೆ ವಿವಿಧ ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಗಳಲ್ಲಿ ಅಕ್ರಮಕ್ಕೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಕೈಗೊಂಡ ಪರಿಶೀಲನಾ ಅಭಿಯಾನದಲ್ಲಿ ಭಾರಿ ಪ್ರಮಾಣದ ಶಂಕಾಸ್ಪದ ಪ್ರಕರಣಗಳು ಪತ್ತೆಯಾಗಿವೆ.
ಅರ್ಹತೆ ಇಲ್ಲದವರು ಪಿಂಚಣಿ ಪಡೆಯುತ್ತಿರುವುದು, ಅಗತ್ಯ ದಾಖಲೆಗಳನ್ನು ಸಲ್ಲಿಸದಿರುವುದು ಹಾಗೂ ನಿಗದಿತ ವಿಳಾಸದಲ್ಲಿ ವಾಸಿಸದಿರುವುದು ಸೇರಿದಂತೆ ಹಲವು ಕಾರಣಗಳಿಂದ 18.06 ಲಕ್ಷ ಫಲಾನುಭವಿಗಳ ಪಿಂಚಣಿಯನ್ನು ಸರ್ಕಾರ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಈ ಪೈಕಿ ನಕಲಿ ಪಿಂಚಣಿ ಪ್ರಕರಣಗಳ ಸಂಖ್ಯೆಯಲ್ಲಿ ಬೆಂಗಳೂರು ನಗರ ಜಿಲ್ಲೆ ಪ್ರಮುಖ ಸ್ಥಾನದಲ್ಲಿದೆ.
ಶಾಸಕರಾದ ಡಿ. ವೇದವ್ಯಾಸ ಕಾಮತ್ ಹಾಗೂ ಡಾ. ವೈ. ಭರತ್ ಶೆಟ್ಟಿ ಅವರ ಪ್ರತ್ಯೇಕ ಪ್ರಶ್ನೆಗಳಿಗೆ ಉತ್ತರಿಸಿದ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಅವರು ಈ ಮಾಹಿತಿ ನೀಡಿದರು.
2026ರ ಆಗಸ್ಟ್ 13ರವರೆಗೆ ಒಟ್ಟು 23,14,544 ಪಿಂಚಣಿದಾರರು ಶಂಕಾಸ್ಪದ ಪ್ರಕರಣಗಳು ಎಂದು ಗುರುತಿಸಲಾಗಿದೆ. ಅರ್ಹತಾ ಮಾನದಂಡಗಳನ್ನು ಪೂರೈಸದ ಕೆಲವರು ಸಾಮಾಜಿಕ ಭದ್ರತಾ ಪಿಂಚಣಿ ಪಡೆಯುತ್ತಿದ್ದಾರೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಈ ಪರಿಶೀಲನಾ ಅಭಿಯಾನ ಆರಂಭಿಸಲಾಗಿದೆ ಎಂದು ಅವರು ತಿಳಿಸಿದರು.
ಶಂಕಾಸ್ಪದ ಫಲಾನುಭವಿಗಳನ್ನು ಪತ್ತೆಹಚ್ಚಲು ಸರ್ಕಾರವು ‘ಸಂಯೋಜನ’ ಮೊಬೈಲ್ ಅಪ್ಲಿಕೇಶನ್ ಬಳಸಿದೆ. ಕುಟುಂಬದ ದತ್ತಾಂಶವನ್ನು ಆಧರಿಸಿ ಆದಾಯ ತೆರಿಗೆ ಪಾವತಿದಾರರು, ಎಪಿಎಲ್ ಕಾರ್ಡ್ ಹೊಂದಿರುವವರು, ವಯಸ್ಸಿನ ಮಿತಿಗೆ ಹೊಂದಿಕೆಯಾಗದ ಅರ್ಜಿದಾರರು, ಆದಾಯ ಮಿತಿ ಉಲ್ಲಂಘನೆ ಹಾಗೂ ಮಾನವ ಸಂಪನ್ಮೂಲ ನಿರ್ವಹಣಾ ವ್ಯವಸ್ಥೆಯ (HRMS) ದಾಖಲೆಗಳನ್ನು ಪರಿಶೀಲಿಸಿ ಫಲಾನುಭವಿಗಳನ್ನು ಗುರುತಿಸಲಾಗಿದೆ.
ನಂತರ ಗ್ರಾಮ ಲೆಕ್ಕಾಧಿಕಾರಿಗಳು ಸ್ಥಳಕ್ಕೆ ತೆರಳಿ ಭೌತಿಕ ಪರಿಶೀಲನೆ ನಡೆಸಿ, ಅಗತ್ಯ ದಾಖಲೆಗಳನ್ನು ಸಂಗ್ರಹಿಸಿದ್ದಾರೆ. ಶಂಕಾಸ್ಪದ ಪ್ರಕರಣಗಳನ್ನು ತಹಶೀಲ್ದಾರರಿಗೆ ಕಳುಹಿಸಲಾಗಿದ್ದು, ಅರ್ಹತೆ ಸಾಬೀತಾದ ಬಳಿಕ ಪಿಂಚಣಿ ಮರುಸ್ಥಾಪಿಸಲಾಗುತ್ತದೆ.
ಕರ್ನಾಟಕದಲ್ಲಿ ಒಟ್ಟು 83,12,536 ಪಿಂಚಣಿ ಫಲಾನುಭವಿಗಳು ನೋಂದಣಿಯಾಗಿದ್ದು, 2026ರ ಜುಲೈನಲ್ಲಿ 62,43,640 ಮಂದಿಗೆ ಪಿಂಚಣಿ ಪಾವತಿಸಲಾಗಿದೆ ಎಂದು ಮಾಹಿತಿ ನೀಡಿದರು.
ಸಂಧ್ಯಾ ಸುರಕ್ಷಾ ಯೋಜನೆಯಲ್ಲೇ ಹೆಚ್ಚು ಪ್ರಕರಣ..!
ಪಿಂಚಣಿ ವಂಚನೆ ಪ್ರಕರಣಗಳಲ್ಲಿ ಸಂಧ್ಯಾ ಸುರಕ್ಷಾ ಯೋಜನೆ ಅತಿ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ. ಈ ಯೋಜನೆಯಡಿ 12,61,610 ಫಲಾನುಭವಿಗಳು ಪರಿಶೀಲನೆಗೆ ಒಳಪಟ್ಟಿದ್ದಾರೆ.
ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ಪಿಂಚಣಿ ಯೋಜನೆ – 5,63,938, ವಿಧವಾ ಪಿಂಚಣಿ – 3,36,746, ಅಂಗವಿಕಲರ ಪಿಂಚಣಿ – 2,56,750, ಮನಸ್ವಿನಿ ಪಿಂಚಣಿ – 17,360, ಎಂಡೋಸಲ್ಫಾನ್ ಸಂತ್ರಸ್ತರ ಪಿಂಚಣಿ – 883, ಆತ್ಮಹತ್ಯೆ ಮಾಡಿಕೊಂಡ ರೈತರ ವಿಧವೆಯರ ಪಿಂಚಣಿ – 526, ಮೈತ್ರಿ ಪಿಂಚಣಿ – 454, ಆ್ಯಸಿಡ್ ದಾಳಿ ಸಂತ್ರಸ್ತರ ಪಿಂಚಣಿ – 8 ಪ್ರಕರಣಗಳು ಪತ್ತೆಯಾಗಿವೆ.
ವಾಸ್ತವಿಕ ವಿಳಾಸದಲ್ಲಿ ವಾಸಿಸದಿರುವುದು, ಅಗತ್ಯ ದಾಖಲೆಗಳನ್ನು ನೀಡಲು ನಿರಾಕರಿಸುವುದು ಅಥವಾ ಆದಾಯ ಪ್ರಮಾಣಪತ್ರ ಸಲ್ಲಿಸದಿರುವುದು ಸೇರಿದಂತೆ ವಿವಿಧ ಕಾರಣಗಳಿಂದ 18,06,032 ಮಂದಿಯ ಪಿಂಚಣಿ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ.
ಅರ್ಹತೆಯನ್ನು ಸಾಬೀತುಪಡಿಸುವ ದಾಖಲೆಗಳನ್ನು ಸಲ್ಲಿಸಿದ ಬಳಿಕ ಪಿಂಚಣಿಯನ್ನು ಮರುಸ್ಥಾಪಿಸಲಾಗುತ್ತದೆ ಎಂದು ಸರ್ಕಾರ ತಿಳಿಸಿದೆ.
ಇನ್ನು ಜಿಲ್ಲಾವಾರು ಅಂಕಿ-ಅಂಶಗಳ ಪ್ರಕಾರ ಬೆಳಗಾವಿ ಜಿಲ್ಲೆಯಲ್ಲಿ 1,82,758 ಶಂಕಾಸ್ಪದ ಫಲಾನುಭವಿಗಳು ಪತ್ತೆಯಾಗಿದ್ದು, ಇವರಲ್ಲಿ 1,51,311 ಮಂದಿಯ ಪಿಂಚಣಿ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ.
ಬಳಿಕ ಬೆಂಗಳೂರು ನಗರದಲ್ಲಿ 1,36,669 ಶಂಕಾಸ್ಪದ ಪ್ರಕರಣಗಳು ಪತ್ತೆಯಾಗಿದ್ದು, 1,24,073 ಪಿಂಚಣಿಗಳನ್ನು ಸ್ಥಗಿತಗೊಳಿಸಲಾಗಿದೆ. ಮೈಸೂರಿನಲ್ಲಿ 1,33,831 ಪ್ರಕರಣಗಳಲ್ಲಿ 1,11,808 ಪಿಂಚಣಿಗಳು, ಕಲಬುರಗಿಯಲ್ಲಿ 1,18,387 ಪ್ರಕರಣಗಳಲ್ಲಿ 98,984 ಪಿಂಚಣಿಗಳು ಸ್ಥಗಿತಗೊಂಡಿವೆ.
ತುಮಕೂರಿನಲ್ಲಿ 1,18,217 ಶಂಕಾಸ್ಪದ ಪ್ರಕರಣಗಳು ಪತ್ತೆಯಾಗಿದ್ದು, 71,111 ಪಿಂಚಣಿಗಳನ್ನು ಸ್ಥಗಿತಗೊಳಿಸಲಾಗಿದೆ. ದಾವಣಗೆರೆಯಲ್ಲಿ 1,04,805 ಪ್ರಕರಣಗಳಲ್ಲಿ 94,012 ಹಾಗೂ ರಾಯಚೂರಿನಲ್ಲಿ 1,01,272 ಪ್ರಕರಣಗಳಲ್ಲಿ 89,387 ಪಿಂಚಣಿಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



