ತಪ್ಪು ಸಾಬೀತಾದರೆ ರಾಜೀನಾಮೆಗೆ ಸಿದ್ಧ, ಮೃತರು ಬೇಟೆಗಾರರೆಂದು ದೃಢಪಟ್ಟರೆ ಪರಿಹಾರವಿಲ್ಲ: ಸಚಿವ ರಾಮಲಿಂಗಾ ರೆಡ್ಡಿ ಸ್ಪಷ್ಟನೆ
ಸದ್ಯ ಪ್ರಕರಣದ ಕುರಿತು ಮ್ಯಾಜಿಸ್ಟೀರಿಯಲ್ ತನಿಖೆ ನಡೆಯುತ್ತಿದೆ. ಇನ್ನೂ ಮೂರು ದಿನಗಳಲ್ಲಿ ವರದಿ ಬರುವ ನಿರೀಕ್ಷೆಯಿದೆ. ಈ ಅಧಿವೇಶನ ಇನ್ನೂ ಎರಡು ವಾರಗಳ ಕಾಲ ನಡೆಯಲಿದೆ. ವರದಿಯನ್ನು ಸದನದಲ್ಲಿ ಮಂಡಿಸುತ್ತೇವೆ.

ಬೆಂಗಳೂರು: ಚಾಮರಾಜನಗರ ಎನ್‌ಕೌಂಟರ್ ಪ್ರಕರಣದಲ್ಲಿ ಮೂವರು ಮೃತಪಟ್ಟಿರುವ ಹಿನ್ನೆಲೆಯಲ್ಲಿ, ಈ ಘಟನೆಗೆ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಬಿಜೆಪಿ ನಾಯಕರು ನಿಜವಾಗಿಯೂ ಭಾವಿಸಿದರೆ ತಾವು ರಾಜೀನಾಮೆ ನೀಡಲು ಸಿದ್ಧ ಎಂದು ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಸೋಮವಾರ ಹೇಳಿದರು.
ಪ್ರಕರಣದ ಕುರಿತು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ್ ಅವರು ನ್ಯಾಯಾಂಗ ತನಿಖೆ ನಡೆಸಬೇಕು, ಮೃತರ ಕುಟುಂಬಗಳಿಗೆ ತಲಾ ರೂ.1 ಕೋಟಿ ಪರಿಹಾರ ನೀಡಬೇಕು ಹಾಗೂ ರಾಮಲಿಂಗಾರೆಡ್ಡಿ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ರಾಮಲಿಂಗಾರೆಡ್ಡಿ ಅವರು, ಮೃತಪಟ್ಟವರು ರೈತರಲ್ಲ, ಬೇಟೆಗಾರರು ಎಂದು ತನಿಖೆಯಲ್ಲಿ ದೃಢಪಟ್ಟರೆ ಪರಿಹಾರ ನೀಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.
ಸದ್ಯ ಪ್ರಕರಣದ ಕುರಿತು ಮ್ಯಾಜಿಸ್ಟೀರಿಯಲ್ ತನಿಖೆ ನಡೆಯುತ್ತಿದೆ. ಇನ್ನೂ ಮೂರು ದಿನಗಳಲ್ಲಿ ವರದಿ ಬರುವ ನಿರೀಕ್ಷೆಯಿದೆ. ಈ ಅಧಿವೇಶನ ಇನ್ನೂ ಎರಡು ವಾರಗಳ ಕಾಲ ನಡೆಯಲಿದೆ. ವರದಿಯನ್ನು ಸದನದಲ್ಲಿ ಮಂಡಿಸುತ್ತೇವೆ. ಅದರಿಂದ ತೃಪ್ತಿಯಾಗದಿದ್ದರೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸುತ್ತೇವೆ” ಎಂದು ತಿಳಿಸಿದರು.
ಅರಣ್ಯ ಇಲಾಖೆ ಅಧಿಕಾರಿಗಳು ತಪ್ಪು ಮಾಡಿದ್ದಾರೆ ಎಂಬುದು ತನಿಖೆಯಲ್ಲಿ ಕಂಡುಬಂದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಭರವಸೆ ನೀಡಿದರು.
ಆದರೆ, ಪ್ರತಿಪಕ್ಷ ಸದಸ್ಯರು ನ್ಯಾಯಾಂಗ ತನಿಖೆಗೆ ಪಟ್ಟು ಹಿಡಿದರು. ಪ್ರಕರಣವನ್ನು ಮುಂದಿಟ್ಟುಕೊಂಡು ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಇದೇ ವೇಳೆ ಎನ್‌ಕೌಂಟರ್ ಬಗ್ಗೆ ಚರ್ಚೆಗೆ ಆಗ್ರಹಿಸಿದ ಅವರು, ಹೊಸ ಸ್ಪೀಕರ್ ಜಿ.ಎಸ್. ಪಾಟೀಲ್ ಅವರು ಪ್ರಶ್ನೋತ್ತರ ಅವಧಿ ಆರಂಭಿಸಲೂ ಅವಕಾಶ ನೀಡದೆ ಸದನದಲ್ಲಿ ಗದ್ದಲ ಎಬ್ಬಿಸಿದರು.
ಬಳಿಕ ಸದನದಲ್ಲಿ ಪ್ರಕರಣದ ವಿವರ ನೀಡಿದ ರಾಮಲಿಂಗಾರೆಡ್ಡಿ, ಆಗಸ್ಟ್ 14ರಂದು ರಾತ್ರಿ 8 ಗಂಟೆಗೆ ಅರಣ್ಯ ಇಲಾಖೆಗೆ ಅಕ್ರಮ ಬೇಟೆಯ ಕುರಿತು ಮಾಹಿತಿ ಬಂದಿತ್ತು. ಶಂಕಿತರನ್ನು ಪತ್ತೆಹಚ್ಚಲು ಎರಡು ತಂಡಗಳನ್ನು ಅರಣ್ಯಕ್ಕೆ ಕಳುಹಿಸಲಾಗಿತ್ತು. ಬೆಳಗಿನ ಜಾವ 5 ಗಂಟೆ ಸುಮಾರಿಗೆ ಅರಣ್ಯ ಸಿಬ್ಬಂದಿಗೆ ಶಂಕಿತ ಬೇಟೆಗಾರರು ಕಾಣಿಸಿಕೊಂಡಿದ್ದರು.
ಅರಣ್ಯ ಸಿಬ್ಬಂದಿ ತಮ್ಮನ್ನು ಶಂಕಿತರು ದಾಳಿ ಮಾಡಲು ಮುಂದಾದ ಹಿನ್ನೆಲೆಯಲ್ಲಿ ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದ್ದಾರೆ ಎಂದು ಸಚಿವರು ತಿಳಿಸಿದರು.
ಶಂಕಿತರು ಎತ್ತರದ ಪ್ರದೇಶದಲ್ಲಿದ್ದ ಕಾರಣ, ಅರಣ್ಯ ಸಿಬ್ಬಂದಿ ಸಣ್ಣ ಗುಂಡುಗಳಿರುವ ಸ್ಲೈಡ್ ಆ್ಯಕ್ಷನ್ ಬಂದೂಕುಗಳನ್ನು ಬಳಸಿದ್ದರು. ಇವುಗಳಿಂದ ಗುಂಡುಗಳು ಚದುರಿ ದೇಹದ ವಿವಿಧ ಭಾಗಗಳಿಗೆ ತಾಗುತ್ತವೆ ಎಂದು ವಿವರಿಸಿದರು.
ಗುಂಡಿನ ದಾಳಿ ಬಳಿಕ ಮೂವರು ನೆಲದ ಮೇಲೆ ಬಿದ್ದಿದ್ದು, ನೋವಿನಿಂದ ಬಳಲುತ್ತಿರುವುದು ಸಿಬ್ಬಂದಿಗೆ ಕಂಡುಬಂದಿತು ಎಂದು ಹೇಳಿದರು.
ಬಳಿಕ ಗಾಯಾಳುಗಳನ್ನು ಹನೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು. ಅಲ್ಲಿ ವೈದ್ಯರು ಲಭ್ಯವಿರದ ಕಾರಣ ಕೊಳ್ಳೇಗಾಲ ಉಪವಿಭಾಗ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಅಲ್ಲಿ ಮೂವರೂ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು. ನಂತರ ಪೊಲೀಸರು ಮೃತದೇಹಗಳನ್ನು ವಶಕ್ಕೆ ಪಡೆದು ಮೈಸೂರಿನ ಕೆ.ಆರ್. ಆಸ್ಪತ್ರೆಗೆ ಸ್ಥಳಾಂತರಿಸಿದರು ಎಂದು ತಿಳಿಸಿದರು.
ಘಟನಾ ಸ್ಥಳದಿಂದ ಎರಡು ನಾಡ ಬಂದೂಕುಗಳು, ಅಡುಗೆ ಪಾತ್ರೆಗಳು, ತರಕಾರಿಗಳು, ಚಾಕು, ಮಸಾಲೆ ಪದಾರ್ಥಗಳು, ಮಾಂಸ ಸೇರಿದಂತೆ ಹಲವು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು.
ಮೃತರು ತಮ್ಮ ಜಾನುವಾರುಗಳನ್ನು ಹುಡುಕಿಕೊಂಡು ಅರಣ್ಯಕ್ಕೆ ತೆರಳಿದ್ದರು ಎಂಬ ಆರೋಪವನ್ನು ಸಚಿವರು ತಳ್ಳಿಹಾಕಿದರು.
ಮೃತಪಟ್ಟ ಮೂವರ ಪೈಕಿ ಆಂಟೋನಿಸ್ವಾಮಿ ಹೊರತುಪಡಿಸಿ, ಉಳಿದ ಇಬ್ಬರ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣಗಳು ದಾಖಲಾಗಿವೆ ಎಂದು ತಿಳಿಸಿದರು.
ಘಟನೆ ಬಳಿಕ ಕೆಲ ಕಿಡಿಗೇಡಿಗಳು ಅರಣ್ಯ ಇಲಾಖೆಯ ವಾಹನಗಳು ಮತ್ತು ಕಟ್ಟಡ ಸೇರಿದಂತೆ ಆಸ್ತಿಪಾಸ್ತಿಗೆ ಹಾನಿ ಮಾಡಿದ್ದಾರೆ. ಈ ಸಂಬಂಧವೂ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಸಚಿವರು ಹೇಳಿದರು.
ಅರಣ್ಯ ಸಿಬ್ಬಂದಿ ಯಾವುದೇ ದ್ವೇಷದಿಂದ ಗುಂಡು ಹಾರಿಸಿಲ್ಲ. ತಮ್ಮ ಜೀವ ರಕ್ಷಣೆಗಾಗಿ ಮಾತ್ರ ಗುಂಡಿನ ದಾಳಿ ನಡೆಸಿದ್ದಾರೆ ಎಂದೂ ರಾಮಲಿಂಗಾರೆಡ್ಡಿ ಅವರು ಸ್ಪಷ್ಟಪಡಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



