'ಎದೆ, ಕುತ್ತಿಗೆಗೆ ಏಕೆ ಗುಂಡು ಹಾರಿಸಿದಿರಿ? ಕಾಲಿಗೆ ಗುಂಡು ಹಾರಿಸಬಹುದಿತ್ತು': ಸರ್ಕಾರದ ಉತ್ತರಕ್ಕೆ BJP ಅಸಮಾಧಾನ; ಸದನದಲ್ಲಿ ಭಾರೀ ಕೋಲಾಹಲ..! Video
ಗುಂಡಿನ ದಾಳಿಯಲ್ಲಿ ನಾಲ್ವರು ಗಾಯಗೊಂಡಿದ್ದರು ಎನ್ನಲಾಗಿದ್ದು, ಅವರ ಪೈಕಿ ನಾಲ್ಕನೇ ವ್ಯಕ್ತಿ ನಾಪತ್ತೆಯಾಗಿದ್ದಾನೆ ಎಂಬ ವಿಚಾರವನ್ನೂ ಅಶೋಕ್ ಪ್ರಸ್ತಾಪಿಸಿದರು.

ಬೆಂಗಳೂರು: ಚಾಮರಾಜನಗರದಲ್ಲಿ ಶನಿವಾರ ನಡೆದ ಎನ್‌ಕೌಂಟರ್‌ನಲ್ಲಿ ಮೂವರು ಮೃತಪಟ್ಟ ಪ್ರಕರಣ ವಿಧಾನಸಭೆಯಲ್ಲಿ ಭಾರೀ ಗದ್ದಲಕ್ಕೆ ಕಾರಣವಾಯಿತು.
ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಅವರು ಸದನದಲ್ಲಿ ನೀಡಿದ ಉತ್ತರದಿಂದ ತೃಪ್ತರಾಗದ ಪ್ರತಿಪಕ್ಷ ಬಿಜೆಪಿ ಸದಸ್ಯರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಸದನದ ಬಾವಿಗೆ ಇಳಿದು ಪ್ರತಿಭಟನೆ ನಡೆಸಿದರು.
ವಿಷಯ ಪ್ರಸ್ತಾಪಿಸಿದ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ್ ಅವರು, ಎನ್‌ಕೌಂಟರ್ ನಡೆದ ಸ್ಥಳಕ್ಕೆ ಹತ್ತಿರದಲ್ಲೇ ಚಾಮರಾಜನಗರದಲ್ಲಿ ಆಸ್ಪತ್ರೆ ಇದ್ದರೂ ಗಾಯಾಳುಗಳನ್ನು ಮೈಸೂರಿನ ಆಸ್ಪತ್ರೆಗೆ ಏಕೆ ಕರೆದೊಯ್ಯಲಾಯಿತು ಎಂದು ಪ್ರಶ್ನಿಸಿದರು.
ಮೃತರಿಗೆ ಅತ್ಯಂತ ಸಮೀಪದಿಂದ ಗುಂಡು ಹಾರಿಸಲಾಗಿದೆ ಎಂದು ಆರೋಪಿಸಿದ ಬಿಜೆಪಿ ಸದಸ್ಯರು, ಸರ್ಕಾರ ಮಾತ್ರ ಇದನ್ನು ಆತ್ಮರಕ್ಷಣೆಗಾಗಿ ನಡೆದ ಗುಂಡಿನ ದಾಳಿ ಎಂದು ಸಮರ್ಥಿಸಿಕೊಳ್ಳುತ್ತಿದೆ ಎಂದು ದೂರಿದರು.
ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದ್ದರೆ ಎದೆ ಮತ್ತು ಕುತ್ತಿಗೆಗೆ ಗುಂಡು ಹಾರಿಸುವ ಬದಲು ಕಾಲಿಗೆ ಗುಂಡು ಹಾರಿಸಬಹುದಿತ್ತು ಎಂದು ಅಶೋಕ್ ಹೇಳಿದರು.
ಗುಂಡಿನ ದಾಳಿಯಲ್ಲಿ ನಾಲ್ವರು ಗಾಯಗೊಂಡಿದ್ದರು ಎನ್ನಲಾಗಿದ್ದು, ಅವರ ಪೈಕಿ ನಾಲ್ಕನೇ ವ್ಯಕ್ತಿ ನಾಪತ್ತೆಯಾಗಿದ್ದಾನೆ ಎಂಬ ವಿಚಾರವನ್ನೂ ಅಶೋಕ್ ಪ್ರಸ್ತಾಪಿಸಿದರು.
ರಾಮಲಿಂಗಾರೆಡ್ಡಿ ಅವರ ಉತ್ತರದಲ್ಲಿ ನಾಲ್ಕನೇ ವ್ಯಕ್ತಿಯ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ಆತ ಈಗ ಎಲ್ಲಿದ್ದಾನೆ? ಸತ್ಯವನ್ನು ಬಹಿರಂಗಪಡಿಸಬಹುದು ಎಂಬ ಭಯದಿಂದ ಆತನನ್ನು ಯಾವುದಾದರೂ ದೂರದ ಸ್ಥಳದಲ್ಲಿ ಇರಿಸಲಾಗಿದೆಯೇ?” ಎಂದು ಪ್ರಶ್ನಿಸಿದರು.
ಘಟನೆ ನಡೆದ ಸಂದರ್ಭದಲ್ಲಿ 5,000ಕ್ಕೂ ಹೆಚ್ಚು ರೈತರು ಪ್ರತಿಭಟನೆಗೆ ಸೇರಿದ್ದರು ಎಂದು ಹೇಳಿದ ಅಶೋಕ್, ಮೃತರು ನಿಜವಾಗಿಯೂ ಬೇಟೆಗಾರರಾಗಿದ್ದರೆ ಇಷ್ಟೊಂದು ಸಂಖ್ಯೆಯಲ್ಲಿ ರೈತರೇಕೆ ಪ್ರತಿಭಟನೆ ನಡೆಸುತ್ತಿದ್ದರು ಎಂದು ಪ್ರಶ್ನಿಸಿದರು.
ಬೇಟೆಗಾರರ ಬಗ್ಗೆ ಮೊದಲೇ ಮಾಹಿತಿ ಇದ್ದರೆಸ ಅರಣ್ಯ ಇಲಾಖೆ ಕೇವಲ ಸಣ್ಣ ತಂಡವನ್ನು ಏಕೆ ಕಳುಹಿಸಿತ್ತು ಎಂದೂ ಪ್ರಶ್ನಿಸಿದರು.
ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಮಾಡಿರುವ ಹೇಳಿಕೆಯನ್ನೂ ಅಶೋಕ್ ಸದನದಲ್ಲಿ ಪ್ರಸ್ತಾಪಿಸಿದರು.
ಘಟನೆಯನ್ನು ಖಂಡಿಸಿರುವ ವಿಜಯ್, ಕರ್ನಾಟಕ ಅರಣ್ಯ ಇಲಾಖೆ ನೀಡಿರುವ ವಿವರಣೆ ಸ್ವೀಕಾರಾರ್ಹವಲ್ಲ ಎಂದು ಹೇಳಿರುವುದಾಗಿ ಅವರು ತಿಳಿಸಿದರು.
ಈ ಪ್ರಕರಣದ ಕುರಿತು ಪ್ರಾಮಾಣಿಕ ತನಿಖೆ ನಡೆಸಬೇಕು ಎಂದು ವಿಜಯ್ ಒತ್ತಾಯಿಸಿದ್ದಾರೆ. ಉನ್ನತ ಮಟ್ಟದ ತನಿಖಾ ಸಮಿತಿ ರಚಿಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ಮೃತರ ಕುಟುಂಬಗಳಿಗೆ ಕರ್ನಾಟಕ ಸರ್ಕಾರ ಅಗತ್ಯ ನೆರವು ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ ಎಂದು ಅಶೋಕ್ ಹೇಳಿದರು.
“ಇಂತಹ ಘಟನೆಗಳು ಮತ್ತೆ ನಡೆಯದಂತೆ ಕರ್ನಾಟಕ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು” ಎಂದು ವಿಜಯ್ ಹೇಳಿರುವುದನ್ನೂ ಅಶೋಕ್ ಉಲ್ಲೇಖಿಸಿದರು.
ತಮಿಳುನಾಡಿನ ತಮ್ಮ ಮಿತ್ರ ಪಕ್ಷದ ನಾಯಕರು ಈ ರೀತಿಯ ಹೇಳಿಕೆ ನೀಡಿರುವ ಬಗ್ಗೆ ಕರ್ನಾಟಕದ ಕಾಂಗ್ರೆಸ್ ನಾಯಕರು ಏನು ಹೇಳುತ್ತಾರೆ ಎಂದು ಪ್ರಶ್ನಿಸಿದರು.
ಚಾಮರಾಜನಗರದ ಹಿರಿಯ ಬಿಜೆಪಿ ಶಾಸಕ ಸುನಿಲ್ ಕುಮಾರ್ ಮಾತನಾಡಿ, ಗಾಯಾಳುಗಳನ್ನು ಮೈಸೂರಿಗೆ ಸ್ಥಳಾಂತರಿಸುವುದಕ್ಕೆ ಸಚಿವ ಪುಟ್ಟರಂಗಶೆಟ್ಟಿ ಅವರೂ ಆಕ್ಷೇಪ ವ್ಯಕ್ತಪಡಿಸಿದ್ದರು. ಕಾಂಗ್ರೆಸ್ ಸಂಸದ ಸುನಿಲ್ ಬೋಸ್ ಕೂಡ ಅರಣ್ಯ ಸಿಬ್ಬಂದಿಯ ಹೇಳಿಕೆಯನ್ನು ನಂಬಲು ಸಾಧ್ಯವಿಲ್ಲ ಎಂಬ ರೀತಿಯಲ್ಲಿ ಹೇಳಿಕೆ ನೀಡಿದ್ದಾರೆ ಎಂದು ತಿಳಿಸಿದರು.
“ನಿಮ್ಮ ರಾಜಕೀಯ ಲಾಭಕ್ಕಾಗಿ ರೈತರನ್ನೇ ಎನ್‌ಕೌಂಟರ್ ಮಾಡಿದ್ದೀರಿ” ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.
ಇದಕ್ಕೆ ಕಾಂಗ್ರೆಸ್ ಶಾಸಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಸಾವಿನ ಪ್ರಕರಣವನ್ನು ಬಿಜೆಪಿ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದರು. ಪರಿಣಾಮವಾಗಿ ಸದನದಲ್ಲಿ ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ತೀವ್ರ ವಾಗ್ವಾದ ನಡೆಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



