ರಾಜ್ಯ

ಬೆಂಗಳೂರು: ತಪ್ಪದ ರಸ್ತೆ ಗುಂಡಿಗಳ ಗಂಡಾಂತರ; TNIE ಇಬ್ಬರು ಪತ್ರಕರ್ತರಿಗೆ ಕಾಲು ಮುರಿತ..!

ಮೆಟ್ರೋ ನಿಲ್ದಾಣಕ್ಕೆ ತೆರಳುವ ರಸ್ತೆ ಕಳಪೆ ಸ್ಥಿತಿಯಲ್ಲಿದ್ದು, ಇದನ್ನು ಪಾದಚಾರಿಗಳು ಮಾತ್ರವಲ್ಲದೆ ದ್ವಿಚಕ್ರ ವಾಹನಗಳ ನಿಲುಗಡೆಗೂ ಹೆಚ್ಚಾಗಿ ಬಳಸುತ್ತಾರೆ.

ಬೆಂಗಳೂರು: ತಪ್ಪದ ರಸ್ತೆ ಗುಂಡಿಗಳ ಗಂಡಾಂತರ; TNIE ಇಬ್ಬರು ಪತ್ರಕರ್ತರಿಗೆ ಕಾಲು ಮುರಿತ..!
ರಸ್ತೆ ಗುಂಡಿ (ಸಾಂಕೇತಿಕ ಚಿತ್ರ) — online desk
Published On :

ಬೆಂಗಳೂರು: ಬೆಂಗಳೂರಿನ ರಸ್ತೆಗಳಲ್ಲಿರುವ ಗುಂಡಿಗಳು ಹಾಗೂ ಸಮರ್ಪಕ ನಿರ್ವಹಣೆ ಇಲ್ಲದ ಪಾದಚಾರಿ ಮಾರ್ಗಗಳು ಎಷ್ಟು ಅಪಾಯಕಾರಿ ಎಂಬುದಕ್ಕೆ ಮತ್ತೊಂದು ಉದಾಹರಣೆ ಸಿಕ್ಕಿದೆ.

ರಾತ್ರಿ ಪಾಳಿಯ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ವೇಳೆ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ (TNIE)ನ ಇಬ್ಬರು ಪತ್ರಕರ್ತರು ರಸ್ತೆ ಗುಂಡಿಗಳಿಂದಾಗಿ ಗಾಯಗೊಂಡು ಕಾಲಿನ ಮೂಳೆ ಮುರಿತಕ್ಕೆ ಒಳಗಾಗಿದ್ದಾರೆ.

ಫೀಚರ್‌ ಪತ್ರಕರ್ತೆ ಶ್ರುತಿ ಹೇಮಚಂದ್ರನ್ ಅವರು ಮಂಗಳವಾರ ರಾತ್ರಿ 10 ಗಂಟೆಯ ಬಳಿಕ ಕಾಡುಗೋಡಿ ಟ್ರೀ ಪಾರ್ಕ್‌ ಮೆಟ್ರೋ ನಿಲ್ದಾಣದ ಸಮೀಪದ ಎಂಐಎಂಎಸ್‌ ಗುಲ್ಮೊಹರ್‌ ರಸ್ತೆಯಲ್ಲಿ ರಸ್ತೆ ಗುಂಡಿಯಿಂದಾಗಿ ಎಡವಿ ಗಾಯಗೊಂಡಿದ್ದಾರೆ. ಪರಿಣಾಮ ಅವರ ಪಾದದ ಮೂಳೆಯಲ್ಲಿ ಸಣ್ಣ ಬಿರುಕು (ಹೇರ್‌ಲೈನ್‌ ಫ್ರ್ಯಾಕ್ಚರ್‌) ಉಂಟಾಗಿದೆ.

ಈ ರಸ್ತೆಯಲ್ಲಿ ಬೀದಿ ದೀಪಗಳಿಲ್ಲದ ಕಾರಣ ಶ್ರುತಿ ಮೊಬೈಲ್‌ನ ಟಾರ್ಚ್‌ ಬೆಳಕಿನ ಸಹಾಯದಿಂದ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಗುಂಡಿಗೆ ಕಾಲಿಟ್ಟ ಪರಿಣಾಮ ಕಾಲು ಉಳುಕಿದೆ. ವೈದ್ಯರು ಅವರಿಗೆ ಮೂರು ವಾರಗಳ ವಿಶ್ರಾಂತಿ ಸೂಚಿಸಿದ್ದಾರೆ.

ಮೆಟ್ರೋ ನಿಲ್ದಾಣಕ್ಕೆ ತೆರಳುವ ರಸ್ತೆ ಕಳಪೆ ಸ್ಥಿತಿಯಲ್ಲಿದ್ದು, ಇದನ್ನು ಪಾದಚಾರಿಗಳು ಮಾತ್ರವಲ್ಲದೆ ದ್ವಿಚಕ್ರ ವಾಹನಗಳ ನಿಲುಗಡೆಗೂ ಹೆಚ್ಚಾಗಿ ಬಳಸುತ್ತಾರೆ ಎಂದು ಶ್ರುತಿ ತಿಳಿಸಿದ್ದಾರೆ.

ಫೀನಿಕ್ಸ್‌ ಮಾಲ್‌ ಸಮೀಪ ಮತ್ತೊಬ್ಬ ಪತ್ರಕರ್ತನಿಗೆ ಎರಡು ಮೂಳೆ ಮುರಿತ

ಇದಕ್ಕೂ ಒಂದು ವಾರ ಮುನ್ನ ಪತ್ರಕರ್ತ ಪ್ರಣವ್‌ ಶ್ರೀರಾಮ್ ಅವರು ಸಿಂಗೆಯ್ಯನಪಾಳ್ಯ ಮೆಟ್ರೋ ನಿಲ್ದಾಣದ ಸಮೀಪದ ಫೀನಿಕ್ಸ್‌ ಮಾರ್ಕೆಟ್‌ಸಿಟಿ ಮಾಲ್‌ ಬಳಿ ರಸ್ತೆ ಗುಂಡಿಯಿಂದಾಗಿ ಕಾಲಿನ ಮೂಳೆ ಮುರಿತಕ್ಕೊಳಗಾಗಿದ್ದಾರೆ.

ಈ ಪ್ರದೇಶದ ಪಾದಚಾರಿ ಮಾರ್ಗಗಳು ಸಮತಟ್ಟಾಗಿಲ್ಲ. ಕೆಲವೆಡೆ ಪಾದಚಾರಿ ಮಾರ್ಗಗಳು ಎತ್ತರವಾಗಿದ್ದರೆ, ಇನ್ನು ಕೆಲವು ಕಡೆ ತಗ್ಗಾಗಿವೆ ಎಂದು ಅವರು ಹೇಳಿದ್ದಾರೆ.

ಮಾಲ್‌ನ ಪ್ರವೇಶ ದ್ವಾರ ಮತ್ತು ಪಾರ್ಕಿಂಗ್‌ ಪ್ರದೇಶದ ಸಮೀಪದ ಸಣ್ಣ ರಸ್ತೆಯನ್ನು ದಾಟುತ್ತಿದ್ದಾಗ ಪ್ರಣವ್‌ ಆಳವಾದ ಗುಂಡಿಗೆ ಕಾಲಿಟ್ಟಿದ್ದಾರೆ.

“ಗುಂಡಿ ಕಾಣಿಸಿತ್ತು. ಹೇಗಾದರೂ ಸಮತೋಲನ ಕಾಯ್ದುಕೊಳ್ಳಲು ಪ್ರಯತ್ನಿಸಿದೆ. ಆದರೆ, ಕಾಲು ಜಾರಿತು ಎಂದು ಹೇಳಿದ್ದಾರೆ.

ಎಕ್ಸ್‌ರೇ ಪರೀಕ್ಷೆಯಲ್ಲಿ ಎರಡು ಮೂಳೆಗಳು ಮುರಿದಿರುವುದು ದೃಢಪಟ್ಟಿದೆ. ಸದ್ಯ ವೈದ್ಯರು ಅವರಿಗೆ ಆರುರಿಂದ ಏಳು ವಾರಗಳ ವಿಶ್ರಾಂತಿ ಪಡೆಯುವಂತೆ ಸೂಚಿಸಿದ್ದಾರೆ. ಇದೀಗ ಪ್ರಣವ್ ಅವರು ಓಡಾಡಲು ವಾಕರ್‌ ಬಳಸುತ್ತಿದ್ದಾರೆ.

ಈ ಎರಡೂ ಘಟನೆಗಳು ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳು, ಸಮರ್ಪಕ ಬೀದಿ ದೀಪಗಳ ಕೊರತೆ ಹಾಗೂ ಅಸಮತಟ್ಟಾದ ಪಾದಚಾರಿ ಮಾರ್ಗಗಳು ವಿಶೇಷವಾಗಿ ರಾತ್ರಿ ವೇಳೆ ಸಂಚರಿಸುವ ಪಾದಚಾರಿಗಳಿಗೆ ಎಷ್ಟು ಅಪಾಯಕಾರಿಯಾಗಿವೆ ಎಂಬುದನ್ನು ಎತ್ತಿ ತೋರಿಸಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.