'ಅಧಿಕಾರಿಗಳು ಬಿಲ್ ಮಾಡೋದಿಕ್ಕೆ ಕೆಲಸ ಮಾಡ್ತಾ ಇದ್ದೀರಾ?': ಕಳಪೆ ರಸ್ತೆ ಕುರಿತು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಕೃಷ್ಣ ಬೈರೇಗೌಡ; Video
ಸರ್ಕಾರವು ಇತರ ರಾಜ್ಯಗಳಿಗಿಂತ ರಸ್ತೆ ನಿರ್ಮಾಣಕ್ಕೆ ಕಡಿಮೆ ಹಣ ಮೀಸಲಿಡುತ್ತಿದೆಯೇ ಎಂದು ಪ್ರಶ್ನಿಸಿದರು. ಒಂದೇ ಕಾಮಗಾರಿಗೆ ಎರಡು ವಿಭಿನ್ನ ಸ್ಥಳಗಳಲ್ಲಿ ಬಿಲ್‌ಗಳನ್ನು ಸೃಷ್ಟಿಸಲಾಗಿದೆ ಎಂಬ ಆರೋಪದ ಕುರಿತು ಅಧಿಕಾರಿಯೊಬ್ಬರನ್ನು ಪ್ರಶ್ನಿಸಿದರು.

ಬೆಂಗಳೂರು: ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ನಿನ್ನೆ ಬೆಂಗಳೂರು ನಗರ ಜಿಲ್ಲಾ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮ (ಕೆಡಿಪಿ) ಸಭೆಯಲ್ಲಿ ಕಳಪೆ ಗುಣಮಟ್ಟದ ರಸ್ತೆಗಳು, ಸಮರ್ಪಕ ತ್ಯಾಜ್ಯ ನಿರ್ವಹಣೆಯ ಕೊರತೆ ಹಾಗೂ ಅಭಿವೃದ್ಧಿ ಕಾಮಗಾರಿಗಳ ಅನುಷ್ಠಾನದಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಕುರಿತು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು.
ರಸ್ತೆಗಳ ಗುಣಮಟ್ಟ ಮತ್ತು ಬಾಳಿಕೆ ಕುರಿತು ಅಧಿಕಾರಿಗಳನ್ನು ಪ್ರಶ್ನಿಸಿದ ಸಚಿವರು, ಸರ್ಕಾರವು ಇತರ ರಾಜ್ಯಗಳಿಗಿಂತ ರಸ್ತೆ ನಿರ್ಮಾಣಕ್ಕೆ ಕಡಿಮೆ ಹಣ ಮೀಸಲಿಡುತ್ತಿದೆಯೇ ಎಂದು ಪ್ರಶ್ನಿಸಿದರು. ಒಂದೇ ಕಾಮಗಾರಿಗೆ ಎರಡು ವಿಭಿನ್ನ ಸ್ಥಳಗಳಲ್ಲಿ ಬಿಲ್‌ಗಳನ್ನು ಸೃಷ್ಟಿಸಲಾಗಿದೆ ಎಂಬ ಆರೋಪದ ಕುರಿತು ಅಧಿಕಾರಿಯೊಬ್ಬರನ್ನು ಪ್ರಶ್ನಿಸಿದರು.
ಅಭಿವೃದ್ಧಿಗೆ ಸಾಮರ್ಥ್ಯ ಮತ್ತು ಸಂಪನ್ಮೂಲಗಳ ಕೊರತೆ ಇದೆಯೇ? ಅಥವಾ ಎಲ್ಲವೂ ಇದ್ದರೂ ಅಧಿಕಾರಿಗಳು ಬಿಲ್ ತಯಾರಿಸುವುದಕ್ಕೆ ಕೆಲಸ ಮಾಡುತ್ತಿದ್ದಾರೆಯೇ ಎಂದು ಪ್ರಶ್ನಿಸಿದರು.
ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ನಗರದ ಹೊರವಲಯದ ಪ್ರದೇಶಗಳಲ್ಲಿ ಕಳಪೆ ರಸ್ತೆಗಳ ಕುರಿತು ದೂರುಗಳು ಕೇಳಿಬರುತ್ತಿರುವ ಸಂದರ್ಭದಲ್ಲೇ ಸಚಿವರ ಈ ಹೇಳಿಕೆ ಬಂದಿದೆ.
ಸಾರ್ವಜನಿಕರ ಹಣದಿಂದ ನಿರ್ಮಿಸಲಾದ ರಸ್ತೆ ಕನಿಷ್ಠ ಏಳೆಂಟು ವರ್ಷಗಳಾದರೂ ಬಾಳಿಕೆ ಬರಬೇಕು. ಕಳಪೆ ಗುಣಮಟ್ಟದ ಕಾಮಗಾರಿ ನಡೆಸಿ, ಎರಡು ವರ್ಷಗಳಲ್ಲೇ ರಸ್ತೆ ಮರುಹಸ್ತರೀಕರಣಕ್ಕೆ ಹಣ ಕೋರುವ ಪದ್ಧತಿಯನ್ನೂ ಅವರು ಪ್ರಶ್ನಿಸಿದರು.
ಇತರ ರಾಜ್ಯಗಳಲ್ಲಿ ರಸ್ತೆಗಳ ಮೇಲೆ ವಾಹನಗಳ ದಟ್ಟಣೆ, ಸಂಚಾರ ಹಾಗೂ ಮಳೆಯ ಸಮಸ್ಯೆ ಇರುವುದಿಲ್ಲವೇ? ಈ ಎಲ್ಲ ಸಮಸ್ಯೆಗಳು ನಮ್ಮ ರಾಜ್ಯದಲ್ಲೇ ಮಾತ್ರ ಇವೆಯೇ ಎಂದು ರಸ್ತೆ ಹಾಳಾಗಿರುವುದಕ್ಕೆ ಅಧಿಕಾರಿಗಳು ನೀಡುತ್ತಿರುವ ಕಾರಣಗಳನ್ನು ಪ್ರಶ್ನಿಸುತ್ತಾ ಅವರು ಹೇಳಿದರು.
ಗ್ರಾಮ ಪಂಚಾಯಿತಿಗಳಲ್ಲಿ ವೈಜ್ಞಾನಿಕ ತ್ಯಾಜ್ಯ ನಿರ್ವಹಣೆ ಇಲ್ಲದಿರುವುದಕ್ಕೂ ಸಚಿವರು ಅಸಮಾಧಾನ ವ್ಯಕ್ತಪಡಿಸಿದರು.
ಗ್ರಾಮ ಪಂಚಾಯಿತಿಗಳಿಗೆ ಬಿಡುಗಡೆ ಮಾಡುವ ಅನುದಾನದ ಒಂದು ಭಾಗವನ್ನು ಕುಡಿಯುವ ನೀರು ಮತ್ತು ತ್ಯಾಜ್ಯ ನಿರ್ವಹಣಾ ಸೌಲಭ್ಯಗಳು ಸೇರಿದಂತೆ ಶಾಶ್ವತ ಮೂಲಸೌಕರ್ಯ ನಿರ್ಮಾಣಕ್ಕೆ ಕಡ್ಡಾಯವಾಗಿ ಬಳಸಬೇಕು ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



