ರಾಜ್ಯ

ಹೆಬ್ಬಾಳ ಟನಲ್ ಯೋಜನೆ ಪರಿಶೀಲಿಸಿ: ಸಿಎಂ ಡಿ.ಕೆ ಶಿವಕುಮಾರ್ ಗೆ ತೇಜಸ್ವಿ ಸೂರ್ಯ ಪತ್ರ

ಹಲವಾರು ನಾಗರಿಕ ಸಂಘಟನೆಗಳು ಈ ಬಗ್ಗೆ ಹಲವು ಬಾರಿ ಮನವಿ ಹಾಗೂ ಆಕ್ಷೇಪಣೆಗಳನ್ನು ಸಲ್ಲಿಸಿದ್ದರೂ, ಅವರೊಂದಿಗೆ ಯಾವುದೇ ಅರ್ಥಪೂರ್ಣ ಸಮಾಲೋಚನೆ ನಡೆಸದೆ ಕಾಮಗಾರಿಯನ್ನು ಆರಂಭಿಸಲಾಗಿದೆ ಎಂದು ಆರೋಪಿಸಿದ್ದಾರೆ.

ಹೆಬ್ಬಾಳ ಟನಲ್ ಯೋಜನೆ ಪರಿಶೀಲಿಸಿ: ಸಿಎಂ ಡಿ.ಕೆ ಶಿವಕುಮಾರ್ ಗೆ ತೇಜಸ್ವಿ ಸೂರ್ಯ ಪತ್ರ
ಡಿಕೆ ಶಿವಕುಮಾರ್-ಸಂಸದ ತೇಜಸ್ವಿ ಸೂರ್ಯ — online desk
Published On :

ಬೆಂಗಳೂರು: ಸಂಚಾರ ದಟ್ಟಣೆ ಕಡಿಮೆ ಮಾಡುವ ನಿಟ್ಟಿನಲ್ಲಿ ಹೆಬ್ಬಾಳ ಶಾರ್ಟ್ ಟನಲ್ ಯೋಜನೆಗೆ ಬಿಡಿಎ ಮುಂದಾಗಿದೆ. ಇತ್ತೀಚೆಗೆ ಸುರಂಗ ಮಾರ್ಗದ ಕಾಮಗಾರಿಗಳಿಗೆ ಪ್ರಾಥಮಿಕವಾಗಿ ಚಾಲನೆ ನೀಡಲಾಗಿತ್ತು.

ಸದ್ಯ ಈ ವಿಚಾರವಾಗಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಸಿಎಂ ಡಿಕೆ ಶಿವಕುಮಾರ್​ಗೆ ಪತ್ರ ಬರೆದಿದ್ದು, 1,140 ಕೋಟಿ ರೂ ಅಂದಾಜು ವೆಚ್ಚದ ಈ ಯೋಜನೆಯನ್ನು ವೈಜ್ಞಾನಿಕ ಮೌಲ್ಯಮಾಪನವಿಲ್ಲದೆ ಮುಂದುವರಿಸಬಾರದು ಎಂದು ಆಗ್ರಹಿಸಿದ್ದಾರೆ.

ಹೆಬ್ಬಾಳ ಶಾರ್ಟ್ ಟನಲ್​​ ಯೋಜನೆಯು ಹೆಬ್ಬಾಳ ಕೆರೆಯ ಜಮೀನಿನ ಮೂಲಕ ಹಾದುಹೋಗಲಿದ್ದು, ಯೋಜನಾ ಕಾಮಗಾರಿಗಾಗಿ ಸುಮಾರು 3.45 ಎಕರೆ ಭೂಮಿಯನ್ನು ವರ್ಗಾಯಿಸಲಾಗುತ್ತಿದೆ ಎಂದು ವರದಿಯಾಗಿದೆ. ಅಲ್ಲದೆ, ಇದು ಪ್ರಸ್ತಾವಿತ ಮೆಟ್ರೋ ರೆಡ್ ಲೈನ್ ಹಾಗೂ ಸಬ್ ಅರ್ಬನ್ ರೈಲು ಯೋಜನೆಗಳೊಂದಿಗೆ ಸಂಘರ್ಷಿಸುವ ಸಾಧ್ಯತೆಯಿದೆ ಎಂದು ತೇಜಸ್ವಿ ಸೂರ್ಯ ತಿಳಿಸಿದ್ದಾರೆ.

ಬೆಂಗಳೂರು ಮಹಾನಗರ ಭೂ ಸಾರಿಗೆ ಪ್ರಾಧಿಕಾರ ಅನುಮೋದನೆಯನ್ನೇ ಪಡೆಯದೆ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಹಲವಾರು ನಾಗರಿಕ ಸಂಘಟನೆಗಳು ಈ ಬಗ್ಗೆ ಹಲವು ಬಾರಿ ಮನವಿ ಹಾಗೂ ಆಕ್ಷೇಪಣೆಗಳನ್ನು ಸಲ್ಲಿಸಿದ್ದರೂ, ಅವರೊಂದಿಗೆ ಯಾವುದೇ ಅರ್ಥಪೂರ್ಣ ಸಮಾಲೋಚನೆ ನಡೆಸದೆ ಕಾಮಗಾರಿಯನ್ನು ಆರಂಭಿಸಲಾಗಿದೆ ಎಂದು ಆರೋಪಿಸಿದ್ದಾರೆ.

ಹೆಬ್ಬಾಳ ಜಂಕ್ಷನ್ ನಿಂದ ಕರ್ನಾಟಕ ಪಶುವೈದ್ಯಕೀಯ, ಪ್ರಾಣಿ ಮತ್ತು ಮೀನುಗಾರಿಕೆ ವಿಜ್ಞಾನ ವಿಶ್ವವಿದ್ಯಾಲಯ (ಕೆವಿಎಎಫ್‌ಎಸ್‌ಯು)ದೊಂದಿಗೆ ಸಂಪರ್ಕಿಸುವ 2.2 ಕಿ.ಮೀ. ಕಿರು ಸುರಂಗ ಮಾರ್ಗವು 1,139 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಹೆಬ್ಬಾಳ ಕೆರೆಯ 3.45 ಎಕರೆ ಪ್ರದೇಶವನ್ನು ಈ ಯೋಜನೆಗಾಗಿ ವರ್ಗಾಯಿಸಲಾಗಿದೆ ಎಂದು ವರದಿಯಾಗಿದೆ.

ಯೋಜನೆಗೆ ಸಂಬಂಧಿಸಿದಂತೆ ಮುಂದಿನ ಯಾವುದೇ ಕಾಮಗಾರಿಯನ್ನು ಕೈಗೊಳ್ಳುವ ಮೊದಲು ಸಮಗ್ರ ಸಂಚಾರ ಸಿಮ್ಯುಲೇಷನ್ ಅಧ್ಯಯನ ನಡೆಸಬೇಕು ಹಾಗೂ ಭಾರತೀಯ ವಿಜ್ಞಾನ ಸಂಸ್ಥೆಯಿಂದ ಸ್ವತಂತ್ರ ತಾಂತ್ರಿಕ ಮೌಲ್ಯಮಾಪನ ಮಾಡಿಸಬೇಕು.

ಇದರ ಜೊತೆಗೆ, ಯೋಜನೆಯ ಕುರಿತು ನಗರಾಡಳಿತ ಭೂ ಸಾರಿಗೆ ನಿರ್ದೇಶನಾಲಯ ಹಾಗೂ ಬೆಂಗಳೂರು ಮಹಾನಗರ ಭೂ ಸಾರಿಗೆ ಪ್ರಾಧಿಕಾರ ಸಂಸ್ಥೆಗಳ ಅಭಿಪ್ರಾಯಗಳನ್ನು ಕಡ್ಡಾಯವಾಗಿ ಪಡೆಯಬೇಕು ಎಂದು ಪತ್ರದಲ್ಲಿ ಸಿಎಂ ಡಿ.ಕೆ.ಶಿವಕುಮಾರ್​​ಗೆ ಸಂಸದ ತೇಜಸ್ವಿ ಸೂರ್ಯ ಆಗ್ರಹಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.