ಹೆಬ್ಬಾಳ ಸುರಂಗ ರಸ್ತೆ ಯೋಜನೆ: PIL ಗೆ 10 ದಿನಗಳೊಳಗೆ ಸರ್ಕಾರದ ಪ್ರತಿಕ್ರಿಯೆ ಕೇಳಿದ ಹೈಕೋರ್ಟ್
ಯೋಜನೆಯಿಂದ ಪರಿಸರದ ಮೇಲೆ ಉಂಟಾಗುವ ಪರಿಣಾಮದ ಕುರಿತು ಯಾವುದೇ ಅಧ್ಯಯನ ನಡೆಸಲಾಗಿದೆಯೇ, ವಿಶೇಷವಾಗಿ ಹೆಬ್ಬಾಳ ಕೆರೆಗೆ ನೀರಿನ ಒಳಹರಿವು ಮತ್ತು ಹೊರಹರಿವು ಅಡ್ಡಿಯಾಗುತ್ತದೆಯೇ, ಜಲಮಾರ್ಗಗಳಿಗೆ ತೊಂದರೆಯಾಗುತ್ತದೆಯೇ ಎಂಬ ವಿವರಗಳನ್ನು ದಾಖಲಾತಿಗಳೊಂದಿಗೆ 10 ದಿನಗಳೊಳಗೆ ಸಲ್ಲಿಸುವಂತೆ ನ್ಯಾಯಾಲಯ ಸೂಚಿಸಿದೆ.

ಬೆಂಗಳೂರು: ಹೆಬ್ಬಾಳ ಮೇಲ್ಸೇತುವೆ ಜಂಕ್ಷನ್‌ನಿಂದ ಜಿಕೆವಿಕೆ ಆವರಣದ ಮೂಲಕ ಪಶುವೈದ್ಯಕೀಯ ಕಾಲೇಜಿಗೆ ಸಂಪರ್ಕ ಕಲ್ಪಿಸುವ ಬಹುಕೋಟಿ ವೆಚ್ಚದ ಮೂರು ಪಥಗಳ ದ್ವಿಮುಖ ವಾಹನ ಅಂಡರ್‌ಪಾಸ್ (Short Length Transitory 3-Lane Bi-Directional Vehicular Underpass) ಯೋಜನೆಗೆ ಸಂಬಂಧಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ವಿಚಾರಣೆ ನಡೆಸಿದ ಹೈಕೋರ್ಟ್, ಯೋಜನೆ ಕುರಿತು ಎತ್ತಲಾಗಿರುವ ಪ್ರಶ್ನೆಗಳಿಗೆ ಉತ್ತರಿಸುವ ಪ್ರಮಾಣಪತ್ರ (Affidavit) ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಹಾಗೂ ನ್ಯಾಯಮೂರ್ತಿ ಕೆ ಎಸ್ ಹೇಮಲೇಖ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿತು.
ಯೋಜನೆಯಿಂದ ಪರಿಸರದ ಮೇಲೆ ಉಂಟಾಗುವ ಪರಿಣಾಮದ ಕುರಿತು ಯಾವುದೇ ಅಧ್ಯಯನ ನಡೆಸಲಾಗಿದೆಯೇ, ವಿಶೇಷವಾಗಿ ಹೆಬ್ಬಾಳ ಕೆರೆಗೆ ನೀರಿನ ಒಳಹರಿವು ಮತ್ತು ಹೊರಹರಿವು ಅಡ್ಡಿಯಾಗುತ್ತದೆಯೇ, ನೈಸರ್ಗಿಕ ಜಲಮಾರ್ಗಗಳಿಗೆ ತೊಂದರೆಯಾಗುತ್ತದೆಯೇ ಎಂಬ ವಿವರಗಳನ್ನು ದಾಖಲಾತಿಗಳೊಂದಿಗೆ 10 ದಿನಗಳೊಳಗೆ ಪ್ರಮಾಣಪತ್ರದ ಮೂಲಕ ಸಲ್ಲಿಸುವಂತೆ ನ್ಯಾಯಾಲಯ ಸೂಚಿಸಿದೆ.
ಈ ಕುರಿತು ಗುರುಪ್ರಸಾದ್ ಆರ್.ಕೆ. ರಿಷ್ವಾಂಜಸ್ ರಾಘವನ್ ಹಾಗೂ ಎಲಿಜಬೆತ್ ಸೌಮ್ಯ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಪೀಠವು ರಾಜ್ಯ ಸರ್ಕಾರ ಹಾಗೂ ಇತರ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿದೆ.
ನಿಗದಿತ ಅವಧಿಯೊಳಗೆ ಸರ್ಕಾರ ಪ್ರಮಾಣಪತ್ರ ಸಲ್ಲಿಸದೆ, ಮುಂದೂಡಿಕೆ ಕೋರಿ ವಿಳಂಬ ಮಾಡಿದರೆ ಯೋಜನೆಗೆ ತಡೆ ನೀಡಲಾಗುವುದು ಎಂದು ನ್ಯಾಯಾಲಯ ಮೌಖಿಕವಾಗಿ ಎಚ್ಚರಿಕೆ ನೀಡಿತು. ಪ್ರಕರಣದ ಮುಂದಿನ ವಿಚಾರಣೆಯನ್ನು ಆಗಸ್ಟ್ 24ಕ್ಕೆ ಮುಂದೂಡಲಾಗಿದೆ.
ಅರ್ಜಿದಾರರ ಪರ ವಕೀಲರು, 2026ರಲ್ಲಿ ತಿದ್ದುಪಡಿ ಮಾಡಲಾದ ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ ಕಾಯ್ದೆಯ ಸೆಕ್ಷನ್ 12ರ ಸಾಂವಿಧಾನಿಕ ಮಾನ್ಯತೆಯನ್ನೂ ಪ್ರಶ್ನಿಸಲಾಗಿದೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು. ಈ ತಿದ್ದುಪಡಿಯು ಪರಿಸರ ಸೂಕ್ಷ್ಮ ಕೆರೆ ಪರಿಸರ ವ್ಯವಸ್ಥೆಗಳೊಳಗೆ ರಸ್ತೆ ಮತ್ತು ಸಂಬಂಧಿತ ಮೂಲಸೌಕರ್ಯ ನಿರ್ಮಾಣಕ್ಕೆ ಅವಕಾಶ ಕಲ್ಪಿಸುತ್ತದೆ ಎಂದು ಹೇಳಿದರು.
ಪ್ರಸ್ತಾವಿತ ಅಂಡರ್‌ಪಾಸ್ ಯೋಜನೆಯಿಂದ ಹೆಬ್ಬಾಳ ಕೆರೆಯ ನೀರಿನ ಹರಿವಿಗೆ ಅಡ್ಡಿಯಾಗುವ ಸಾಧ್ಯತೆ ಇದ್ದರೂ, ಈ ವಿಷಯದ ಕುರಿತು ವಿವರವಾದ ಯೋಜನಾ ವರದಿ (DPR)ಯಲ್ಲಿ ಯಾವುದೇ ಉಲ್ಲೇಖವಿಲ್ಲ ಎಂದು ವಾದಿಸಿದರು.
ಇದಲ್ಲದೆ, ಯೋಜನೆಗಾಗಿ 800ಕ್ಕೂ ಹೆಚ್ಚು ಮರಗಳನ್ನು ಕಡಿಯುವ ಪ್ರಸ್ತಾಪವಿರುವುದನ್ನೂ ನ್ಯಾಯಾಲಯದ ಗಮನಕ್ಕೆ ತಂದರು.
ಯೋಜನೆಯ ಡಿಪಿಆರ್‌ನಲ್ಲಿಯೇ ಈ ರಸ್ತೆ ಹೆಬ್ಬಾಳ ಕಣಿವೆ ಹಾಗೂ ಹೆಬ್ಬಾಳ ಕೆರೆಯ ಪಕ್ಕದಲ್ಲೇ ಹಾದುಹೋಗುತ್ತದೆ ಎಂದು ಉಲ್ಲೇಖಿಸಲಾಗಿದೆ. ಅಲ್ಲದೆ, ಅಂಡರ್ ಪಾಸ್ ಜಲಮಟ್ಟ, ಪ್ರವಾಹ ನಿರ್ವಹಣೆ ಹಾಗೂ ಮಳೆನೀರು ಹರಿವಿನ ಕುರಿತು ಚರ್ಚೆಗಳಿದ್ದರೂ, ಯೋಜನೆಯ ಸಮಗ್ರ ಪರಿಸರ ಪರಿಣಾಮವನ್ನು ಸಮರ್ಪಕವಾಗಿ ಮೌಲ್ಯಮಾಪನ ಮಾಡಿಲ್ಲ ಎಂದು ಅರ್ಜಿದಾರರು ವಾದಿಸಿದರು.
ಇದಲ್ಲದೆ, ಬೆಂಗಳೂರು ಮಹಾನಗರ ಭೂ ಸಾರಿಗೆ ಪ್ರಾಧಿಕಾರ (BMLTA) ಕಾಯ್ದೆ–2022 ಅಡಿಯಲ್ಲಿ ಕಡ್ಡಾಯವಾಗಿರುವ ಸಮಗ್ರ ಯೋಜನಾ ಪ್ರಕ್ರಿಯೆಯನ್ನು ಸಂಪೂರ್ಣ ನಿರ್ಲಕ್ಷಿಸಿ ಈ ಅಂಡರ್‌ಪಾಸ್ ಯೋಜನೆಯನ್ನು ಮುಂದುವರಿಸಲಾಗಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.
ಪ್ರಸ್ತಾವಿತ ರೆಡ್ ಲೈನ್ ಮೆಟ್ರೋ ಕಾರಿಡಾರ್ ಕೂಡ ಇದೇ ಸಾರಿಗೆ ಮಾರ್ಗದಲ್ಲಿ ಹಾದುಹೋಗಲಿದ್ದು, ಮೆಟ್ರೋ ಯೋಜನೆ ಮತ್ತು ಅಂಡರ್‌ಪಾಸ್ ಯೋಜನೆ ಎರಡರ ಒಟ್ಟಾರೆ ಪರಿಣಾಮವನ್ನು ಬಿಎಮ್‌ಎಲ್‌ಟಿಎ ಕಾಯ್ದೆಯಡಿ ಸಮಗ್ರವಾಗಿ ಪರಿಶೀಲಿಸಲಾಗಿದೆ ಎಂಬುದಕ್ಕೆ ಯಾವುದೇ ದಾಖಲೆಗಳಿಲ್ಲ ಎಂದು ಅರ್ಜಿದಾರರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



