ಬಿಡದಿ ಪಾದಯಾತ್ರೆ ಕಾಂಗ್ರೆಸ್ ಆಡಳಿತಕ್ಕೆ ಅಂತ್ಯ ಹಾಡಲಿದೆ- ಎಚ್.ಡಿ ಕುಮಾರಸ್ವಾಮಿ!
ಬಿಡದಿ ಯೋಜನೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅತಿಯಾದ ಆಸಕ್ತಿ ವಹಿಸುತ್ತಿದ್ದಾರೆ ಎಂದು ಆರೋಪಿಸಿದ ಕುಮಾರಸ್ವಾಮಿ, ಈ ಯೋಜನೆಯು ಕೆಲವು ಸ್ವಹಿತಾಸಕ್ತಿ ಗುಂಪುಗಳಿಗೆ ಲಾಭ ಮಾಡಿಕೊಡುವ ಉದ್ದೇಶವನ್ನು ಹೊಂದಿದೆ ಎಂದು ದೂರಿದರು.

ಬೆಂಗಳೂರು: ಬೈರಮಂಗಲದಿಂದ ಆರಂಭವಾಗಿರುವ ಬಿಡದಿ ಟೌನ್‌ಶಿಪ್ ವಿರುದ್ಧದ ಪಾದಯಾತ್ರೆಯು ರೈತರಿಗೆ ನ್ಯಾಯ ಒದಗಿಸುವುದಲ್ಲದೆ, ಕಾಂಗ್ರೆಸ್ ಸರ್ಕಾರದ ವಿರುದ್ಧದ ಹೋರಾಟದಲ್ಲಿ ರಾಜ್ಯದ ಜನರಿಗೆ ಒಂದು ಮಹತ್ವದ ತಿರುವು ಆಗಲಿದೆ ಎಂದು ಜೆಡಿಎಸ್ ನಾಯಕ ಹಾಗೂ ಕೇಂದ್ರ ಭಾರಿ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಭಾನುವಾರ ಬಿಡದಿಯಲ್ಲಿ ಪಾದಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಕುಮಾರಸ್ವಾಮಿ, ರಾಜ್ಯ ಸರ್ಕಾರದ ವ್ಯಾಪಕ ಭ್ರಷ್ಟಾಚಾರ ಮತ್ತು ರೈತ ವಿರೋಧಿ ನೀತಿಗಳ ವಿರುದ್ಧದ ಬೃಹತ್ ಹೋರಾಟಕ್ಕೆ ಈ ಭಾಗದ ರೈತರು ಅಡಿಪಾಯ ಹಾಕಿದ್ದಾರೆ. ಈ ಪಾದಯಾತ್ರೆಯು ರೈತರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಿದೆ. ಜೊತೆಗೆ, ಈ ಸರ್ಕಾರವನ್ನು ಕಿತ್ತೊಗೆಯುವ ಪ್ರಕ್ರಿಯೆಗೂ ಇದು ನಾಂದಿ ಹಾಡಲಿದೆ. ಆ ಬದಲಾವಣೆಯತ್ತ ಬಿಡದಿಯ ರೈತರು ಮೊದಲ ಹೆಜ್ಜೆ ಇಟ್ಟಿದ್ದಾರೆ," ಎಂದು ಅವರು ನುಡಿದರು.
ಬಿಡದಿ ಯೋಜನೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅತಿಯಾದ ಆಸಕ್ತಿ ವಹಿಸುತ್ತಿದ್ದಾರೆ ಎಂದು ಆರೋಪಿಸಿದ ಕುಮಾರಸ್ವಾಮಿ, ಈ ಯೋಜನೆಯು ಕೆಲವು ಸ್ವಹಿತಾಸಕ್ತಿ ಗುಂಪುಗಳಿಗೆ ಲಾಭ ಮಾಡಿಕೊಡುವ ಉದ್ದೇಶವನ್ನು ಹೊಂದಿದೆ ಎಂದು ದೂರಿದರು. "ಇಲ್ಲಿಯವರೆಗೆ ಸರ್ಕಾರವು ಪ್ರತಿ ಎಕರೆಗೆ 2 ಕೋಟಿ ರೂ. ನೀಡುವುದಾಗಿ ಹೇಳುತ್ತಿತ್ತು. ಆದರೆ ಈಗ ಪ್ರತಿ ಎಕರೆಗೆ 3 ಕೋಟಿ ರೂ. ನೀಡುವುದಾಗಿ ತಿಳಿಸುವ ವಿಡಿಯೋವನ್ನು ಮುಖ್ಯಮಂತ್ರಿ ಬಿಡುಗಡೆ ಮಾಡಿದ್ದಾರೆ. ಇದಕ್ಕೆ ಯಾರೂ ಮರುಳಾಗಬೇಡಿ. ಅವರು ನಿಮ್ಮನ್ನು ವಂಚಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಕುಮಾರಸ್ವಾಮಿ ರೈತರಿಗೆ ಎಚ್ಚರಿಸಿದರು.
ಜನತಾ ದಳದ ಅವಧಿಯಲ್ಲಿ ಆರಂಭವಾದ 'ನೈಸ್' (NICE) ಯೋಜನೆಯನ್ನು ಪ್ರಸ್ತಾಪಿಸಿದ ಕುಮಾರಸ್ವಾಮಿ, ಕಾಂಗ್ರೆಸ್ ವಿರುದ್ಧ ಟೀಕಾಪ್ರಹಾರ ನಡೆಸಿದರು. ಯೋಜನೆಗಾಗಿ ಭೂಸ್ವಾಧೀನ ನಡೆಸಿ ಸುಮಾರು ಮೂರು ದಶಕಗಳೇ ಕಳೆದಿದ್ದರೂ, ಭೂಮಿ ಕಳೆದುಕೊಂಡ ಅನೇಕರಿಗೆ ಇನ್ನೂ ಪರಿಹಾರ ಅಥವಾ ಪರ್ಯಾಯ ನಿವೇಶನಗಳು ಸಿಕ್ಕಿಲ್ಲ ಎಂದು ಅವರು ಹೇಳಿದರು. ಬಿಡದಿ ಟೌನ್‌ಶಿಪ್ ಮತ್ತು ನೈಸ್ ಯೋಜನೆಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂದು ಅವರು ಆರೋಪಿಸಿದರು.
"2006-07ರಲ್ಲಿ ನಾನು ಮುಖ್ಯಮಂತ್ರಿಯಾಗಿದ್ದಾಗ ಹಾಗೂ ನಂತರ ಬಿಜೆಪಿ ಅಧಿಕಾರದಲ್ಲಿದ್ದಾಗ, ಬಿಡದಿ ಯೋಜನೆಗೆ ಸಂಬಂಧಿಸಿದಂತೆ ಯಾವುದೇ ಪ್ರಾಥಮಿಕ ಅಧಿಸೂಚನೆಯನ್ನು ಹೊರಡಿಸಿರಲಿಲ್ಲ. ಕಾಂಗ್ರೆಸ್ ಸರ್ಕಾರವೇ ಪ್ರಾಥಮಿಕ ಮತ್ತು ಅಂತಿಮ ಅಧಿಸೂಚನೆಗಳೆರಡನ್ನೂ ಹೊರಡಿಸಿತು ಎಂದು ಅವರು ಹೇಳಿದರು.
ಈಗಲ್‌ಟನ್ ಕುರಿತು ಸರ್ಕಾರದ ನಿಲುವು ಪ್ರಶ್ನಿಸಿದ ಕುಮಾರಸ್ವಾಮಿ: ಈಗಲ್‌ಟನ್‌ಗೆ ಸಂಬಂಧಿಸಿದ ಸರ್ಕಾರಿ ಗುತ್ತಿಗೆ ಭೂಮಿಯ ವಿಷಯವನ್ನು ರಾಜ್ಯ ಸರ್ಕಾರ ನಿರ್ವಹಿಸಿದ ರೀತಿಯನ್ನು ಕುಮಾರಸ್ವಾಮಿ ಪ್ರಶ್ನಿಸಿದರು. "ಹದಿನೈದು ವರ್ಷಗಳ ಹಿಂದೆ, ಈ ಸರ್ಕಾರಿ ಗುತ್ತಿಗೆ ಭೂಮಿಯ ಮೌಲ್ಯವನ್ನು ಎಕರೆಗೆ 12 ಕೋಟಿ ರೂಪಾಯಿ ಎಂದು ನಿಗದಿಪಡಿಸಲಾಗಿತ್ತು ಮತ್ತು ಈಗಲ್‌ಟನ್ ಸಂಸ್ಥೆಗೆ 948 ಕೋಟಿ ರೂಪಾಯಿ ಪಾವತಿಸುವಂತೆ ಸೂಚಿಸಲಾಗಿತ್ತು ಎಂದು ಅವರು ಹೇಳಿದರು. ರೈತರ ಜೀವನ ಮತ್ತು ಜೀವನೋಪಾಯದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ನೀತಿಗಳನ್ನು ಅನುಸರಿಸುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಕಾಂಗ್ರೆಸ್ ಸರ್ಕಾರದ ವಿರುದ್ಧ ಆರೋಪಿಸಿದರು. ಬಿಜೆಪಿ ರೈತರ ಪರವಾಗಿ ನಿಲ್ಲಲಿದೆ ಎಂದು ಅವರು ಹೇಳಿದರು.

ಅಕ್ರಮವಾಗಿ ₹2,000 ಕೋಟಿಗೂ ಹೆಚ್ಚು ಹಣ ಸಂಗ್ರಹ: ನೈಸ್ ರಸ್ತೆಯಲ್ಲಿ ಟೋಲ್ ಕಟ್ಟಬೇಡಿ; ಜನರಿಗೆ ಕುಮಾರಸ್ವಾಮಿ ಕರೆ!
ಹೊಸ ಸಮಿತಿ ಒಂದು ನಾಟಕ: ಬಿಡದಿ ಟೌನ್‌ಶಿಪ್ ಯೋಜನೆಗೆ ಸಂಬಂಧಿಸಿದಂತೆ ಹೊಸ ಸಮಿತಿಯ ವರದಿಯನ್ನು ಪಡೆಯುವ ರಾಜ್ಯ ಸರ್ಕಾರದ ನಿರ್ಧಾರವನ್ನು ಕೇಂದ್ರ ಭಾರಿ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ. ಕುಮಾರಸ್ವಾಮಿ ಟೀಕಿಸಿದ್ದು, ಇದನ್ನು "ಕೇವಲ ಒಂದು ನಾಟಕ ಎಂದು ಕರೆದಿದ್ದಾರೆ. ಭಾನುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಕುಮಾರಸ್ವಾಮಿ, 2006ರಲ್ಲೇ ಸದನ ಸಮಿತಿಯು ಈ ವಿಷಯದ ಕುರಿತು ಸತ್ಯಶೋಧನಾ ವರದಿಯನ್ನು ಸಲ್ಲಿಸಿದ್ದರೂ, ಮತ್ತೊಂದು ಸಮಿತಿಯ ಅಗತ್ಯವೇನಿತ್ತು ಎಂದು ಪ್ರಶ್ನಿಸಿದರು. ಆ ವರದಿಗೆ ಏನಾಯಿತು? ಈಗ ಮತ್ತೊಂದು ಸಮಿತಿಯನ್ನು ಏಕೆ ರಚಿಸಲಾಗಿದೆ? ಅಂದು ಆ ಸಮಿತಿಯಲ್ಲಿದ್ದ ಸದಸ್ಯರೇ ಈಗ ಮುಖ್ಯಮಂತ್ರಿ ಹುದ್ದೆಯಲ್ಲಿದ್ದಾರೆ. ಮುಖ್ಯಮಂತ್ರಿಯಾದ ಮಾತ್ರಕ್ಕೆ ಅವರಿಗೆ ವಿವೇಕ ಇಲ್ಲವಾಗುತ್ತದೆಯೇ?" ಎಂದು ಅವರು ಪ್ರಶ್ನಿಸಿದರು.
ಬಿಡದಿ ಟೌನ್‌ಶಿಪ್ ಯೋಜನೆಯನ್ನು ಮುಂದುವರಿಸಲು ಬಿಡುವುದಿಲ್ಲ ಎಂದು ಹೇಳುವ ಮೂಲಕ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನೂ ತೀವ್ರವಾಗಿ ಟೀಕಿಸಿದರು. "ಅವರು ಬಿಡದಿ ಯೋಜನೆಯನ್ನು ಲೂಟಿ ಮಾಡಲು ಪ್ರಯತ್ನಿಸುತ್ತಿದ್ದಾರೆ. ಇದು ಕೇವಲ ಹಣ ಮಾಡುವ ಕಾರ್ಯಕ್ರಮವಾಗಿದೆ. ಕನಿಷ್ಠಪಕ್ಷ ಜಾಹೀರಾತುಗಳನ್ನು ನೀಡುವಾಗಲಾದರೂ ಅವು ನಂಬಲರ್ಹವಾಗಿರುವಂತೆ ನೋಡಿಕೊಳ್ಳಿ," ಎಂದು ಅವರು ಹೇಳಿದರು. ಅಲ್ಲದೆ, ಪ್ರಸ್ತಾವಿತ ಬಿಡದಿ ಟೌನ್‌ಶಿಪ್ ಯೋಜನೆಯನ್ನು ವಿರೋಧಿಸುವಂತೆ ಅವರು ಪಕ್ಷದ ಶಾಸಕರಿಗೆ ಸೂಚನೆ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


