ಗೆಳೆಯನಿಗಾಗಿ ಕಾಯುತ್ತಿದ್ದವರಿಗೆ ಗಂಡಾಂತರ: 'ನೀವು ಉಗ್ರರಾ?' ಎಂದು ಪ್ರಶ್ನಿಸಿ ಇಬ್ಬರು ಟೆಕ್ಕಿಗಳ ಮೇಲೆ ಬ್ಯಾಟ್‌ನಿಂದ ಹಲ್ಲೆ; ಆರೋಪಿ ಬಂಧನ..!
ಕಾರಿನಿಂದ ಕೆಳಗಿಳಿದ ಅರುಣ್, ಅಲ್ಲಿ ನಿಂತಿದ್ದ ಯುವಕರ ಬಳಿ ಬಂದು ಆಕ್ರಮಣಕಾರಿ ಧಾಟಿಯಲ್ಲಿ ಕನ್ನಡದಲ್ಲೇ, "ನೀವಿಬ್ಬರು ಭಯೋತ್ಪಾದಕರಾ?" (Are you terrorists?) ಎಂದು ಪ್ರಶ್ನಿಸಿದ್ದಾನೆ.

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ರೋಡ್ ರೇಜ್ ಮತ್ತು ಹಲ್ಲೆ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಇಬ್ಬರು ಸಾಫ್ಟ್‌ವೇರ್ ಇಂಜಿನಿಯರ್‌ಗಳ ಮೇಲೆ 'ಭಯೋತ್ಪಾದಕರು' ಎಂದು ಕಿರುಚಾಡಿ, ಬೇಸ್‌ಬಾಲ್ ಬ್ಯಾಟ್‌ನಿಂದ ಮನಬಂದಂತೆ ಹಲ್ಲೆ ನಡೆಸಿದ ಆರೋಪದ ಮೇಲೆ 42 ವರ್ಷದ ಮತ್ತೊಬ್ಬ ಟೆಕ್ಕಿಯನ್ನು ಹೆಚ್‌ಎಎಲ್ (HAL) ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಅರುಣ್ ಎಂದು ಗುರುತಿಸಲಾಗಿದ್ದು, ಈತ ಕೂಡ ಐಟಿ ಕಂಪನಿಯೊಂದರಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಎಫ್‌ಐಆರ್ ಪ್ರಕಾರ, ಈ ಆಘಾತಕಾರಿ ಘಟನೆಯು ಆಗಸ್ಟ್ 6ರ ಗುರುವಾರ ಮುಂಜಾನೆ ಸುಮಾರು 4:15ರ ಸುಮಾರಿಗೆ ಹೆಚ್‌ಎಎಲ್ ಪೊಲೀಸ್ ಠಾಣಾ ವ್ಯಾಪ್ತಿಯ ಎಇಸಿಎಸ್ (AECS) ಲೇಔಟ್‌ನಲ್ಲಿ ನಡೆದಿದೆ.
ಸಂತ್ರಸ್ತರಾದ ಸಂದೀಪ್ ಕುಮಾರ್ ಗೊಂಡ್ (27) ಮತ್ತು ರೋಹಿತ್ ಕುಮಾರ್ (26) ಎಂಬ ಇಬ್ಬರು ಐಟಿ ಉದ್ಯೋಗಿಗಳು ರಸ್ತೆ ಬದಿಯ ಬ್ಯಾಂಕ್ ಎಟಿಎಂ ಬಳಿ ತಮ್ಮ ಸ್ನೇಹಿತನಿಗಾಗಿ ಕಾಯುತ್ತಾ ನಿಂತಿದ್ದರು.
ಈ ವೇಳೆ ಬಿಳಿ ಬಣ್ಣದ ಮಹೀಂದ್ರಾ ಸ್ಕಾರ್ಪಿಯೋ ಎಸ್‌ಯುವಿ ಕಾರಿನಲ್ಲಿ ಅತಿ ವೇಗವಾಗಿ ಬಂದ ಆರೋಪಿ ಅರುಣ್, ಕಾರನ್ನು ಇವರ ಮುಂದೆಯೇ ದಿಢೀರನೆ ನಿಲ್ಲಿಸಿದ್ದಾನೆ.
ಕಾರಿನಿಂದ ಕೆಳಗಿಳಿದ ಅರುಣ್, ಅಲ್ಲಿ ನಿಂತಿದ್ದ ಯುವಕರ ಬಳಿ ಬಂದು ಆಕ್ರಮಣಕಾರಿ ಧಾಟಿಯಲ್ಲಿ ಕನ್ನಡದಲ್ಲೇ, "ನೀವಿಬ್ಬರು ಭಯೋತ್ಪಾದಕರಾ?" (Are you terrorists?) ಎಂದು ಪ್ರಶ್ನಿಸಿದ್ದಾನೆ.
ಇದರಿಂದ ಕಂಗಾಲಾದ ಯುವಕರು, "ನಾವು ಭಾರತೀಯ ನಾಗರಿಕರು, ಇಲ್ಲಿ ಕೆಲಸ ಮಾಡುತ್ತಿದ್ದೇವೆ" ಎಂದು ಉತ್ತರಿಸಿದ್ದಾರೆ. ಆದರೂ ಸುಮ್ಮನಾಗದ ಆರೋಪಿ, "ಹಾಗಿದ್ದರೆ ನಿಮ್ಮ ಐಡೆಂಟಿಟಿ ಕಾರ್ಡ್ (ID Card) ತೋರಿಸಿ" ಎಂದು ದಬಾಯಿಸಿದ್ದಾನೆ. "ನಮ್ಮನ್ನು ಪ್ರಶ್ನಿಸಲು ನೀವ್ಯಾರು?" ಎಂದು ಯುವಕರು ಎದುರು ಪ್ರಶ್ನಿಸುತ್ತಿದ್ದಂತೆ ಆರೋಪಿ ಅರುಣ್ ತೀವ್ರ ಕೋಪಗೊಂಡಿದ್ದಾನೆ.
ಕೋಪದಲ್ಲಿ ತನ್ನ ಕಾರಿನ ಡಿಕ್ಕಿಯಲ್ಲಿದ್ದ ಬೇಸ್‌ಬಾಲ್ ಬ್ಯಾಟ್ ತೆಗೆದುಕೊಂಡು ಬಂದ ಅರುಣ್, ಇಬ್ಬರು ಯುವಕರ ಕೈ ಮತ್ತು ಕಾಲುಗಳ ಮೇಲೆ ಮನಬಂದಂತೆ ಜಜ್ಜಿದ್ದಾನೆ. ಯುವಕರು ತಪ್ಪಿಸಿಕೊಳ್ಳಲು ಯತ್ನಿಸಿದರೂ ಬಿಡದೆ ಕೆನ್ನೆಗೆ ಬಾರಿಸಿದ್ದಾನೆ.
ಹಲ್ಲೆಯ ತೀವ್ರತೆಗೆ ಯುವಕರು ರಕ್ತಸಿಕ್ತರಾಗಿದ್ದಾರೆ. ಈ ವೇಳೆ ಸಂತ್ರಸ್ತ ರೋಹಿತ್ ತನ್ನ ಮೊಬೈಲ್ ಫೋನ್ ತೆಗೆದು ಆರೋಪಿಯ ಕೃತ್ಯವನ್ನು ವಿಡಿಯೋ ರೆಕಾರ್ಡ್ ಮಾಡಲು ಯತ್ನಿಸಿದಾಗ, ಅರುಣ್ ಆ ಫೋನ್ ಅನ್ನು ಕಿತ್ತುಕೊಂಡು ಬೇಸ್‌ಬಾಲ್ ಬ್ಯಾಟ್‌ನಿಂದ ಹೊಡೆದು ಪುಡಿಪುಡಿ ಮಾಡಿ, ಅಲ್ಲಿಂದ ಕಾರಿನಲ್ಲಿ ಪರಾರಿಯಾಗಿದ್ದಾನೆ.
ಘಟನೆ ಬಳಿಕ ಗಾಯಾಳು ಯುವಕರು ಹೆಚ್‌ಎಎಲ್ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು, ಬ್ಯಾಂಕ್ ಮುಂಭಾಗ ಅಳವಡಿಸಲಾಗಿದ್ದ ಸಿಸಿಟಿವಿ (CCTV) ದೃಶ್ಯಾವಳಿಗಳನ್ನು ಪರಿಶೀಲಿಸಿ ಆರೋಪಿ ಅರುಣ್‌ನನ್ನು ಮತ್ತು ಆತ ಬಳಸಿದ್ದ ಸ್ಕಾರ್ಪಿಯೋ ಕಾರನ್ನು ಪತ್ತೆಹಚ್ಚಿ ವಶಕ್ಕೆ ಪಡೆದಿದ್ದಾರೆ. ಸದ್ಯ ಆರೋಪಿಗೆ ಸ್ಟೇಷನ್ ಜಾಮೀನು ನೀಡಲಾಗಿದೆ.
ಪೊಲೀಸ್ ವಿಚಾರಣೆ ವೇಳೆ ಆಘಾತಕಾರಿ ಮಾಹಿತಿ ಹೊರಬಂದಿದ್ದು, ಘಟನೆಯ ಸಮಯದಲ್ಲಿ ಆರೋಪಿ ಅರುಣ್ ವಿಪರೀತ ಮದ್ಯಪಾನ ಮಾಡಿದ್ದ ಎನ್ನಲಾಗಿದೆ.
ನಾನು ವೇಗವಾಗಿ ಬಂದು ಕಾರು ಪಾರ್ಕ್ ಮಾಡಿದ್ದನ್ನು ಆ ಯುವಕರು ಪ್ರಶ್ನಿಸಿದರು. ಇದರಿಂದ ಸಿಟ್ಟು ಬಂದು ಅವರೊಂದಿಗೆ ಗಲಾಟೆ ಮಾಡಿದೆ" ಎಂದು ಆರೋಪಿ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ.
ಸದ್ಯ ಹೆಚ್‌ಎಎಲ್ ಪೊಲೀಸರು ಭಾರತೀಯ ನ್ಯಾಯ ಸಂಹಿತೆ (BNS) ಅಡಿಯಲ್ಲಿ ದಾರಿ ತಡೆದು ಹಲ್ಲೆ ನಡೆಸಿದ ಆರೋಪದ ಮೇಲೆ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



