ಸಚಿವ ಸಂಪುಟ ವಿಸ್ತರಣೆಗೆ ಕ್ಷಣಗಣನೆ: ಇಂದು ಸಂಜೆ 4.05 ಕ್ಕೆ ಪ್ರಮಾಣವಚನ ಕಾರ್ಯಕ್ರಮ; ನೂತನ ಸಚಿವರ ಪಟ್ಟಿ ಹೀಗಿದೆ ನೋಡಿ…
ವಿವಿಧ ಹಂತದ ಚರ್ಚೆಗಳ ಬಳಿಕ ಜಾತಿವಾರು ಹಾಗೂ ಪ್ರದೇಶವಾರು ಪ್ರಾತಿನಿಧ್ಯಕ್ಕೆ ಆದ್ಯತೆ ನೀಡಿ ಸಚಿವರ ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ ಎಂದು ತಿಳಿದುಬಂದಿದೆ.

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಭಾರೀ ಕುತೂಹಲಕ್ಕೆ ಕಾರಣವಾಗಿದ್ದ ಸಚಿವ ಸಂಪುಟ ವಿಸ್ತರಣೆಗೆ ಕೊನೆಗೂ ಕ್ಷಣಗಣನೆ ಆರಂಭವಾಗಿದೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ನೂತನ ಸಚಿವ ಸಂಪುಟದ ಪ್ರಮಾಣವಚನ ಸ್ವೀಕಾರ ಸಮಾರಂಭ ಇಂದು (ಸೋಮವಾರ) ಸಂಜೆ 4.05 ಗಂಟೆಗೆ ನಡೆಯಲಿದೆ ಎಂದು ಲೋಕಭವನ ಮೂಲಗಳು ತಿಳಿಸಿವೆ.
ಲೋಕಭವನದ ಗಾಜಿನ ಮನೆಯಲ್ಲಿ ನೂತನ ಸಚಿವರ ಪ್ರಮಾಣವಚನ ಕಾರ್ಯಕ್ರಮ ನಡೆಯಲಿದ್ದು, ಸಮಾರಂಭಕ್ಕೆ ಅಗತ್ಯವಿರುವ ಎಲ್ಲ ಸಿದ್ಧತೆಗಳನ್ನು ಈಗಾಗಲೇ ಪೂರ್ಣಗೊಳಿಸಲಾಗಿದೆ. ಕಾರ್ಯಕ್ರಮಕ್ಕೆ ಆಗಮಿಸುವ ಗಣ್ಯರು ಹಾಗೂ ಅತಿಥಿಗಳಿಗಾಗಿ ಹೊರಭಾಗದಲ್ಲಿ ಜರ್ಮನ್ ಟೆಂಟ್ ಅಳವಡಿಸಲಾಗಿದ್ದು, ಲೋಕೋಪಯೋಗಿ ಇಲಾಖೆಯು ಮೂರು ದಿನಗಳ ಹಿಂದೆಯೇ ಸಿದ್ಧತಾ ಕಾರ್ಯಗಳನ್ನು ಆರಂಭಿಸಿದೆ. ಭದ್ರತಾ ದೃಷ್ಟಿಯಿಂದ ಸುಮಾರು 2,000 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಲೋಕಭವನ ಸುತ್ತಮುತ್ತ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದೆ.
ಇದಕ್ಕೂ ಮುನ್ನ ನವದೆಹಲಿಯಲ್ಲಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ ನಡೆದ ಮಹತ್ವದ ಸಭೆಯಲ್ಲಿ ಕರ್ನಾಟಕ ಸಚಿವ ಸಂಪುಟ ವಿಸ್ತರಣೆ ಕುರಿತು ಅಂತಿಮ ಹಂತದ ಚರ್ಚೆ ನಡೆಯಿತು.
ಸುಮಾರು 45 ನಿಮಿಷಗಳ ಕಾಲ ನಡೆದ ಸಭೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಹಾಗೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಂಪುಟ ಸೇರಲಿರುವ ನೂತನ ಸಚಿವರ ಪಟ್ಟಿಗೆ ಅಂತಿಮ ಮುದ್ರೆ ಒತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಭೆಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಸೇರಿದಂತೆ ಹಲವು ಹಿರಿಯ ನಾಯಕರು ಉಪಸ್ಥಿತರಿದ್ದರು.
ವಿವಿಧ ಹಂತದ ಚರ್ಚೆಗಳ ಬಳಿಕ ಜಾತಿವಾರು ಹಾಗೂ ಪ್ರದೇಶವಾರು ಪ್ರಾತಿನಿಧ್ಯಕ್ಕೆ ಆದ್ಯತೆ ನೀಡಿ ಸಚಿವರ ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ, ಕಾಂಗ್ರೆಸ್ ಹೈಕಮಾಂಡ್ ಸಂಭಾವ್ಯ ಸಚಿವರ ಪಟ್ಟಿಯನ್ನು ಪರಿಶೀಲಿಸಿ ಅನುಮೋದನೆ ನೀಡಿದ್ದು, ಆ ಪಟ್ಟಿಯನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಹಸ್ತಾಂತರಿಸಲಾಗಿದೆ.
ನೂತನ ಸಚಿವ ಪಟ್ಟಿ ಇಂತಿದೆ...
ಪಿ.ಎಂ.ನರೇಂದ್ರಸ್ವಾಮಿ
ಶಿವರಾಜ್ ತಂಗಡಗಿ
ರುದ್ರಪ್ಪ ಲಮಾಣಿ
ಕೆ.ಎಸ್.ಬಸವಂತಪ್ಪ
ಬಿ.ನಾಗೇಂದ್ರ
ಟಿ.ರಘುಮೂರ್ತಿ
B. Z. ಜಮೀರ್ ಅಹಮದ್ ಖಾನ್
ರಿಜ್ವಾನ್ ಅರ್ಷದ್
ಸಂತೋಷ್ ಲಾಡ್
ಮಧು ಬಂಗಾರಪ್ಪ
ಪುಟ್ಟರಂಗಶೆಟ್ಟಿ
ಎಸ್.ಎಸ್.ಮಲ್ಲಿಕಾರ್ಜುನ
ಅಜಯ್ ಸಿಂಗ್
ಎನ್. ಚಲುವರಾಯ ಸ್ವಾಮಿ
ಕೆ.ಎಂ.ಶಿವಲಿಂಗೇಗೌಡ
ಎಚ್.ಸಿ.ಬಾಲಕೃಷ್ಣ
ಗಾಯತ್ರಿ ಶಾಂತೇಗೌಡ
ಬಸವರಾಜ ರಾಯರೆಡ್ಡಿ
ವಿಜಯಾನಂದ ಕಾಶಪ್ಪನವರ್
ಲಕ್ಷ್ಮಣ ಸವದಿ
ಸಚಿವ ಸ್ಥಾನ ಖಚಿತಪಡಿಸಿದ ಲಕ್ಷ್ಮಣ ಸವದಿ
ಈ ನಡುವೆ ನೂತನ ಸಚಿವರಾಗಿ ಪ್ರಮಾಣ ಸ್ವೀಕರಿಸಲು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರಿಂದ ಈಗಷ್ಟೇ ಕರೆ ಬಂದಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಖಚಿತಪಡಿಸಿದ್ದಾರೆ.
ಸಂಜೆ ಪ್ರಮಾಣ ವಚನ ಸ್ವೀಕರಿಸಲು ಆಗಮಿಸುವಂತೆ ಮುಖ್ಯಮಂತ್ರಿಗಳು ಕರೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



