ಕಲಬುರಗಿಯಲ್ಲಿ ಹೃದಯವಿದ್ರಾವಕ ಘಟನೆ: ಮಗನ ಚಿನ್ನದ ಪದಕ ಸಂಭ್ರಮ ನೋಡಲು ಬರುವಾಗಲೇ ಅಪಘಾತದಲ್ಲಿ ತಂದೆ ದುರಂತ ಅಂತ್ಯ..!
ತಮ್ಮ ಮಗ ದಿವ್ಯಾಂಶು ಸಕ್ಸೇನಾ ಅವರ ಸಾಧನೆಯನ್ನು ಕಣ್ಣುಂಬಿಕೊಳ್ಳಲು ಬಹಳ ಉತ್ಸಾಹದಿಂದ ಬಂದಿದ್ದರು. ದಿವ್ಯಾಂಶು ಅವರು ಎರಡು ಚಿನ್ನದ ಪದಕಗಳನ್ನು ಗಳಿಸಿದ್ದು, ಕುಟುಂಬದಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಗಿತ್ತು.

ಕಲಬುರಗಿ: ಕುಟುಂಬದ ಸಂತೋಷದ ಕ್ಷಣವು ಕ್ಷಣಾರ್ಧದಲ್ಲೇ ದುರಂತದಲ್ಲಿ ಅಂತ್ಯಗೊಂಡ ಹೃದಯವಿದ್ರಾವಕ ಘಟನೆ ಕಲಬುರಗಿಯಲ್ಲಿ ನಡೆದಿದೆ.
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ನಡೆಯಲಿದ್ದ ಪದವಿ ಪ್ರದಾನ ಸಮಾರಂಭದಲ್ಲಿ ಮಗನ ಸಾಧನೆ ಕಣ್ತುಂಬಿಕೊಳ್ಳಲು ಬಂದಿದ್ದ ತಂದೆ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.
ಉಜ್ಜೈನಿನಿಂದ ಸುಮಾರು 896 ಕಿ.ಮೀ ದೂರ ಪ್ರಯಾಣ ಮಾಡಿ ಬಂದಿದ್ದ ಶಿವಕುಮಾರ್ ಸಕ್ಸೇನಾ (57) ಅವರು ತಮ್ಮ ಪತ್ನಿ ಮಾಲತಿ ಸಕ್ಸೇನಾ ಅವರೊಂದಿಗೆ ಕಲಬುರಗಿಗೆ ತಲುಪಿದ್ದರು.
ತಮ್ಮ ಮಗ ದಿವ್ಯಾಂಶು ಸಕ್ಸೇನಾ ಅವರ ಸಾಧನೆಯನ್ನು ಕಣ್ಣುಂಬಿಕೊಳ್ಳಲು ಬಹಳ ಉತ್ಸಾಹದಿಂದ ಬಂದಿದ್ದರು. ದಿವ್ಯಾಂಶು ಅವರು ಎರಡು ಚಿನ್ನದ ಪದಕಗಳನ್ನು ಗಳಿಸಿದ್ದು, ಕುಟುಂಬದಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಗಿತ್ತು.
ಶಿವಕುಮಾರ್ ಅವರು UCO Bankನಲ್ಲಿ ಉದ್ಯೋಗಿಯಾಗಿದ್ದರು. ಮಂಗಳವಾರ ಸಂಜೆ ಉಜ್ಜೈನಿನಿಂದ ಹೊರಟ ಕುಟುಂಬ ಬುಧವಾರ ಬೆಳಗ್ಗೆ ಕಲಬುರಗಿಗೆ ತಲುಪಿತ್ತು. ನಂತರ ಅವರು ವಿಶ್ವವಿದ್ಯಾಲಯ ಕ್ಯಾಂಪಸ್‌ನ ಹಾಸ್ಟೆಲ್‌ನಲ್ಲಿ ಇರುವ ಮಗನನ್ನು ಭೇಟಿ ಮಾಡಲು ಆಟೋ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದರು.
ಆದರೆ, ಕೇವಲ 4 ಕಿ.ಮೀ ದೂರದಲ್ಲೇ ದುರಂತ ಸಂಭವಿಸಿದೆ. ಆಳಂದ ಟೋಲ್ ಗೇಟ್ ಸಮೀಪದ ರಾಜಸ್ಥಾನಿ ಧಾಬಾ ಬಳಿ ಆಟೋ ರಿಕ್ಷಾ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಈ ಅಪಘಾತದಲ್ಲಿ ಶಿವಕುಮಾರ್ ಸ್ಥಳದಲ್ಲೇ ಸಾವನ್ನಪ್ಪಿದ್ದು, ಅವರ ಪತ್ನಿ ಮಾಲತಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ.
ರಸ್ತೆಯ ಅಸಮತೋಲನ ಹಾಗೂ ವೇಗದ ಕಾರಣದಿಂದಾಗಿ ಆಟೋ ನಿಯಂತ್ರಣ ತಪ್ಪಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಘಟನೆಯ ನಂತರ ಸ್ಥಳೀಯರು ತಕ್ಷಣ ರಕ್ಷಣಾ ಧಾವಿಸಿದ್ದು, ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಈ ಘಟನೆಯಿಂದ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ. ಮಗನ ಶೈಕ್ಷಣಿಕ ಸಾಧನೆಯನ್ನು ಕಣ್ತುಂಬಿಕೊಳ್ಳಲು ಬಂದಿದ್ದ ತಂದೆಯೇ ಜೀವ ಕಳೆದುಕೊಂಡಿರುವುದು ಎಲ್ಲರಿಗೂ ಆಘಾತ ಮೂಡಿಸಿದೆ.
ದಿವ್ಯಾಂಶು ಸಕ್ಸೇನಾ ಅವರು ಬಿ.ಟೆಕ್ ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ಇಂಜಿನಿಯರಿಂಗ್‌ನಲ್ಲಿ ಅತ್ಯುತ್ತಮ ಅಂಕಗಳನ್ನು ಪಡೆದು ಎರಡು ಚಿನ್ನದ ಪದಕಗಳಿಗೆ ಆಯ್ಕೆಯಾಗಿದ್ದರು. ಜೊತೆಗೆ ಮಾಜಿ ಉಪಕುಲಪತಿ ಎ.ಎಂ. ಪಠಾಣ್ ಹೆಸರಿನ ವಿಶೇಷ ಚಿನ್ನದ ಪದಕಕ್ಕೂ ಅವರು ಪಾತ್ರರಾಗಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



