'ಅವಳೊಬ್ಬಳೇ ಅಲ್ಲ.. ಸಾಕಷ್ಟು ಮಂದಿ ಇದ್ದಾರೆ, ಮುಲಾಜಿಲ್ಲದೇ ಅವನನ್ನ ಗಲ್ಲಿಗೇರಿಸಿ': ಆರೋಪಿ ಮಗನ ವಿರುದ್ಧವೇ ತಾಯಿ ಆರೋಪ!
ಮಗನ “ಹೀನ ಕೃತ್ಯಗಳಿಗೆ” ಗಲ್ಲು ಶಿಕ್ಷೆ ವಿಧಿಸಬೇಕು ಮತ್ತು ಅಕ್ರಮವಾಗಿ ವಶಪಡಿಸಿಕೊಂಡಿರುವ ತನ್ನ ಆಸ್ತಿಗಳನ್ನು ಮರಳಿ ಕೊಡಿಸಬೇಕು ಎಂದು ಸುಲೋಚನಾ ಪಾಟೀಲ್ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

ಮುಂಬೈ: ಅತ್ಯಾಚಾರ ಆರೋಪ ಎದುರಿಸುತ್ತಿರುವ ತನ್ನ ಮಗನ ತಪ್ಪು ಸಾಬೀತಾದರೆ ಮುಲಾಜಿಲ್ಲದೇ ಗಲ್ಲಿಗೇರಿಸಿ ಎಂದು ಆರೋಪಿಯ ತಾಯಿ ಹೇಳಿದ್ದಾರೆ.
ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಭಿವಂಡಿಯಲ್ಲಿ ನಡೆದ ಅತ್ಯಾಚಾರ ಪ್ರಕರಣದ ಸಹ ಆರೋಪಿ ಹಾಗೂ ವಜಾಗೊಂಡ ಪೊಲೀಸ್ ಪೇದೆ ಶೈಲೇಶ್ ಪಾಟೀಲ್ ವಿರುದ್ಧ ಅವರ ತಾಯಿ ಕೆಂಡಾಮಂಡಲರಾಗಿದ್ದು, ತನ್ನ ಮಗನಿಗೆ ಮರಣದಂಡನೆ ವಿಧಿಸಬೇಕು ಎಂದು ಆಗ್ರಹಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸೆಪ್ಟೆಂಬರ್ 13ರಂದು ಭಿವಂಡಿಯ ಬಾಪಗಾಂವ್ ಪ್ರದೇಶಕ್ಕೆ ವಿವಾಹಿತ ಮಹಿಳೆಯೊಬ್ಬರನ್ನು ಕರೆದೊಯ್ದು, ಬಂದೂಕು ತೋರಿಸಿ ಬೆದರಿಸಿ, ಮದ್ಯಪಾನ ಮಾಡಿಸಿ ಅತ್ಯಾಚಾರ ಎಸಗಿದ ಆರೋಪ ಮಾಜಿ ಬಿಜೆಪಿ ಶಾಸಕ ನರೇಂದ್ರ ಪವಾರ್ ಹಾಗೂ ಶೈಲೇಶ್ ಪಾಟೀಲ್ ವಿರುದ್ಧ ಕೇಳಿಬಂದಿದೆ.
ಮಗನ ವಿರುದ್ಧವೇ ತಾಯಿ ಗಂಭೀರ ಆರೋಪ
ಇದೀಗ ಇದೇ ವಿಚಾರವಾಗಿ ಕಲ್ಯಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶೈಲೇಶ್ ಪಾಟೀಲ್ ಅವರ ತಾಯಿ ಸುಲೋಚನಾ ಪಾಟೀಲ್, 'ತನ್ನ ಮಗ ಈ ಹಿಂದೆ ಹಲವು ಮಹಿಳೆಯರಿಗೆ ಬೆದರಿಕೆ ಹಾಕಿ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಿದ್ದಾರೆ.
ಅಲ್ಲದೆ, ತನ್ನ ಮಗ ಬಂದೂಕು ತೋರಿಸಿ ತನ್ನ ಆಸ್ತಿ, ಜಮೀನು ಮತ್ತು ದೊಡ್ಡ ಮೊತ್ತದ ಹಣವನ್ನು ಬಲವಂತವಾಗಿ ವಶಪಡಿಸಿಕೊಂಡಿದ್ದಾನೆ. ನಕಲಿ ದಾಖಲೆಗಳ ಮೂಲಕ ತನ್ನನ್ನು ಮನೆಯಿಂದ ಹೊರಹಾಕಿ ನಿರ್ಗತಿಕಳನ್ನಾಗಿ ಮಾಡಿದ್ದಾನೆ. ಹೀಗಾಗಿ ಸದ್ಯ ಮಗಳೊಂದಿಗೆ ವಾಸಿಸುತ್ತಿರುವುದಾಗಿ ಅವರು ಹೇಳಿದ್ದಾರೆ.
ಗಲ್ಲು ಶಿಕ್ಷೆ ಕೊಡಿ
ತನ್ನ ಮಗನ “ಹೀನ ಕೃತ್ಯಗಳಿಗೆ” ಗಲ್ಲು ಶಿಕ್ಷೆ ವಿಧಿಸಬೇಕು ಮತ್ತು ಅಕ್ರಮವಾಗಿ ವಶಪಡಿಸಿಕೊಂಡಿರುವ ತನ್ನ ಆಸ್ತಿಗಳನ್ನು ಮರಳಿ ಕೊಡಿಸಬೇಕು ಎಂದು ಸುಲೋಚನಾ ಪಾಟೀಲ್ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
ಅವಳೊಬ್ಬಳೇ ಅಲ್ಲ.. ಸಾಕಷ್ಟು ಮಂದಿ ಇದ್ದಾರೆ
ಅಂತೆಯೇ ಈ ಘಟನೆ ಒಂದೇ ಪ್ರಕರಣವಲ್ಲ ಎಂದು ಸುಲೋಚನಾ ಪಾಟೀಲ್ ಆರೋಪಿಸಿದ್ದು, ತಮ್ಮ ಮಗ ಈ ಹಿಂದೆ ಕೂಡ ಬೆದರಿಕೆ ಹಾಕಿ ಹಲವು ಮಹಿಳೆಯರನ್ನು ಬಲಿಪಶು ಮಾಡಿದ್ದಾನೆ ಎಂದು ಅವರು ಹೇಳಿದ್ದಾರೆ.
ತಮ್ಮ ಮಗನ ಅಪರಾಧ ಹಿನ್ನೆಲೆಯ ಬಗ್ಗೆಯೂ ಮಾತನಾಡಿದ ಅವರು, ಈ ಹಿಂದೆ ಓರ್ವ ಹಿರಿಯ ಐಪಿಎಸ್ ಅಧಿಕಾರಿಯನ್ನು ರಕ್ಷಿಸಲು ಅಪರಾಧದ ಹೊಣೆಯನ್ನು ತನ್ನ ಮೇಲೆ ತೆಗೆದುಕೊಂಡು ಜೈಲು ಸೇರಿದ್ದ ಎಂದು ಆರೋಪಿಸಿದ್ದಾರೆ.
ಆರ್ಥರ್ ರೋಡ್ ಜೈಲಿನಲ್ಲಿ ಶಿಕ್ಷೆ ಅನುಭವಿಸುವ ವೇಳೆ ಕುಖ್ಯಾತ ಅಪರಾಧಿಗಳ ಸಂಪರ್ಕಕ್ಕೆ ಬಂದಿದ್ದು, ಇದರಿಂದ ಆತನ ವರ್ತನೆಯಲ್ಲಿ ಸಾಕಷ್ಟು ಬದಲಾವಣೆಯಾಗಿ ಅಪರಾಧ ಲೋಕದತ್ತ ತಿರುಗಿದ ಎಂದು ಅವರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



