ಬೆಂಗಳೂರು: ಮನೆಯಿಂದ ನಾಪತ್ತೆಯಾಗಿದ್ದ ಮಹಿಳೆ ಅಸ್ಥಿಪಂಜರ ಪತ್ತೆ, ಹತ್ಯೆ ಶಂಕೆ..!
ಮಾರ್ಚ್ 21 ರಂದು, ಯಮುನಾ ಕೆಲಸದಿಂದ ಮನೆಗೆ ಹಿಂತಿರುಗಿರಲಿಲ್ಲ. ಅವರು ಕಾಣೆಯಾಗುವ ಎರಡು ದಿನಗಳ ಮೊದಲು, ತಮ್ಮ 38ನೇ ಹುಟ್ಟುಹಬ್ಬವನ್ನು ತಮ್ಮ ಪತಿ ಮತ್ತು ಮಕ್ಕಳೊಂದಿಗೆ ಆಚರಿಸಿದ್ದರು.

ಬೆಂಗಳೂರು: ಕಳೆದ ಕೆಲವು ದಿನಗಳಿಂದ ನಿಗೂಢವಾಗಿ ನಾಪತ್ತೆಯಾಗಿದ್ದ ಮಹಿಳೆಯೊಬ್ಬರು ನೆಲಮಂಗಲ ತಾಲೂಕಿನ ಗಡಿ ಗ್ರಾಮವಾದ ಹಳೇ ನಿಜಗಲ್‌ನಲ್ಲಿ ಅಸ್ಥಿಪಂಜರವಾಗಿ ಪತ್ತೆಯಾಗಿದ್ದಾರೆ.
ಮೃತ ಮಹಿಳೆಯನ್ನು ತುಮಕೂರಿನ ಕ್ಯಾತಸಂದ್ರದ ಬಸವೇಶ್ವರ ಲೇಔಟ್ ನಿವಾಸಿ ಯಮುನಾ ಎಂದು ಗುರುತಿಸಲಾಗಿದೆ. ಕಳೆದ ಏಳು ತಿಂಗಳಿನಿಂದ ಹಳೇನಿಜಗಲ್ ಪ್ರದೇಶದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಮಲ್ಲಿಕಾರ್ಜುನ್ ಅವರು ಯಮುನಾ ಅವರನ್ನು ವಿವಾಹವಾಗಿದ್ದು, ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.
ಮಾರ್ಚ್ 21 ರಂದು, ಯಮುನಾ ಕೆಲಸದಿಂದ ಮನೆಗೆ ಹಿಂತಿರುಗಿರಲಿಲ್ಲ. ಅವರು ಕಾಣೆಯಾಗುವ ಎರಡು ದಿನಗಳ ಮೊದಲು, ತಮ್ಮ 38ನೇ ಹುಟ್ಟುಹಬ್ಬವನ್ನು ತಮ್ಮ ಪತಿ ಮತ್ತು ಮಕ್ಕಳೊಂದಿಗೆ ಆಚರಿಸಿದ್ದರು.
ಕುಟುಂಬವು ಯಮುನಾ ಅವರನ್ನು ಪತ್ತೆಹಚ್ಚಲು ಸಾಕಷ್ಟು ಪ್ರಯತ್ನಗಳನ್ನು ನಡೆಸಿದರು, ಪತ್ತೆ ಸಾಧ್ಯವಾಗಿರಲಿಲ್ಲ. ಬಳಿಕ ಪತಿ ಮಲ್ಲಿಕಾರ್ಜುನ್ ಅವರು ತುಮಕೂರು ಜಿಲ್ಲೆಯ ಕ್ಯಾತಸಂದ್ರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು.
ಈ ನಡುವೆ ಗುರುವಾರ ಸೊಂಪುರದ ಬಳಿ ಜಮೀನಿಗೆ ಪೂಜೆ ಮಾಡಲು ತೆರಳಿದ್ದ ಜಮೀನು ಮಾಲೀಕ ಉಮೇಶ್ ಅವರು ಅಸ್ಥಿಪಂಜರವನ್ನು ನೋಡಿದ್ದಾರೆ, ತಕ್ಷಣ ದಾಬಸ್‌ಪೇಟೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಅಸ್ಥಿಪಂಜರದ ಜೊತೆಗೆ ಇದ್ದ ಚೀಲದಲ್ಲಿನ ಬಟ್ಟೆಗಳು, ಕಂಪನಿ ಐಡಿ ಕಾರ್ಡ್ ಹಾಗೂ ಆಧಾರ್ ಕಾರ್ಡ್ ನೋಡಿ ಮೃತಳನ್ನು ಗುರುತಿಸಲಾಗಿದೆ.
ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಈ ಪ್ರಕರಣವು ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ನಡೆದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಯಮುನಾ ದೊಡ್ಡಬಳ್ಳಾಪುರ ತಾಲೂಕಿನ ಕೊಡಿಗೆಹಳ್ಳಿಯ ರಾಘವೇಂದ್ರ ಎಂಬ ವ್ಯಕ್ತಿಯೊಂದಿಗೆ ಸಂಬಂಧ ಹೊಂದಿದ್ದಳು ಎನ್ನಲಾಗಿದೆ. ಸುಮಾರು ಆರು-ಏಳು ವರ್ಷ ಲಿವ್-ಇನ್ ರಿಲೇಷನ್ ಶಿಪ್ ನಲ್ಲಿದ್ದ ಇವರು ಸಂಬಂಧ ಹದಗೆಟ್ಟ ಹಿನ್ನೆಲೆಯಲ್ಲಿ ತನ್ನ ಪತಿ ಮತ್ತು ಮಕ್ಕಳ ಬಳಿಗೆ ಮರಳಿದ್ದರು ಎನ್ನಲಾಗುತ್ತಿದೆ.
ಆದರೆ ರಾಘವೇಂದ್ರ ಮತ್ತೆ ತನ್ನ ಜೊತೆ ಬರಲು ಯಮುನಾ ಅವರನ್ನು ಒತ್ತಾಯಿಸಿದ್ದು, ನಿರಾಕರಿಸಿದರೆ ಪತಿ ಮತ್ತು ಮಕ್ಕಳನ್ನು ಹತ್ಯೆ ಮಾಡುವ ಬೆದರಿಕೆ ಹಾಕಿದ್ದ ಎನ್ನಲಾಗಿದೆ. ಈ ನಡುವೆ ಮಾರ್ಚ್ 19ರಂದು ತನ್ನೊಂದಿಗೆ ಹುಟ್ಟುಹಬ್ಬ ಆಚರಿಸುವಂತೆ ಒತ್ತಾಯಿಸಿದ್ದ ಎಂದೂ ಹೇಳಲಾಗುತ್ತಿದೆ.
ಈ ನಡುವೆ ಪ್ರಕರಣದ ತನಿಖೆ ಕೈಗೊಂಡಿರುವ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಯಮುನಾ ಅವರು ರಾಘವೇಂದ್ರ ಜೊತೆಗೆ ನಡೆದು ಹೋಗುತ್ತಿರುವುದು ಕಂಡುಬಂದಿದೆ ಎಂದು ತಿಳಿದುಬಂದಿದೆ. ಇದೀಗ ರಾಘವೇಂದ್ರನಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.
ಇಬ್ಬರ ನಡುವೆ ವಾಗ್ವಾದ ನಡೆದಿದ್ದು, ರಾಘವೇಂದ್ರ ಆಕೆಯನ್ನು ಹತ್ಯೆಗೈದು, ಬಳಿಕ ಶವವನ್ನು ಜಮೀನಿನಲ್ಲಿ ಎಸೆದು ಪರಾರಿಯಾಗಿರಬಹುದು ಎಂದು ಶಂಕಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



