Mysuru: ಮಂಚದ ಕೆಳಗೆ ಅವಿತಿದ್ದ ಚಿರತೆ; ವೃದ್ಧ ತಾಯಿಯ ಹೊರಗೆಳೆದ ಮಗಳು; ಕಾರ್ಯಾಚರಣೆಯೇ ರೋಚಕ!
ಸುಮಾರು ಮೂರರಿಂದ ನಾಲ್ಕು ವರ್ಷ ವಯಸ್ಸಿನ ಚಿರತೆಯೊಂದು ಸ್ಥಳೀಯ ನಿವಾಸಿ ಸುರೇಶ್ ಎಂಬುವವರ ಮನೆಗೆ ನುಗ್ಗಿದೆ. ಮನೆಯಲ್ಲಿನ ಒಂದು ಕೋಣೆಯಲ್ಲಿ ಮಂಚದ ಕೆಳಗೆ ನುಗ್ಗಿದ್ದ ಚಿರತೆ ಅಲ್ಲಿಯೇ ವಿಶ್ರಾಂತಿ ಪಡೆದಿದೆ.

ಮೈಸೂರು: ಶುಕ್ರವಾರ ಮೈಸೂರಿನಲ್ಲಿ ಮನೆಯೊಂದಕ್ಕೆ ಗಂಡು ಚಿರತೆಯೊಂದು ನುಗ್ಗಿದ್ದು, ನಿವಾಸಿಗಳಲ್ಲಿ ಆತಂಕ ಮೂಡಿಸಿತ್ತು ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಮೈಸೂರು ನಗರದ ಸಿದ್ಧಾರ್ಥ ಲೇಔಟ್‌ನಲ್ಲಿ ಬೆಳಿಗ್ಗೆ 10 ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದ್ದು, ಸುಮಾರು ಮೂರರಿಂದ ನಾಲ್ಕು ವರ್ಷ ವಯಸ್ಸಿನ ಚಿರತೆಯೊಂದು ಸ್ಥಳೀಯ ನಿವಾಸಿ ಸುರೇಶ್ ಎಂಬುವವರ ಮನೆಗೆ ನುಗ್ಗಿದೆ. ಮನೆಯಲ್ಲಿನ ಒಂದು ಕೋಣೆಯಲ್ಲಿ ಮಂಚದ ಕೆಳಗೆ ನುಗ್ಗಿದ್ದ ಚಿರತೆ ಅಲ್ಲಿಯೇ ವಿಶ್ರಾಂತಿ ಪಡೆದಿದೆ.
ವಿಚಾರ ತಿಳಿದ ಕೂಡಲೆ ಮನೆಯವರು ಹೊರಗೆ ಓಡಿ ಬಂದು ಮನೆ ಬಾಗಿಲು ಹಾಕಿದ್ದಾರೆ. ಬಳಿಕ ಅರಣ್ಯ ಇಲಾಖೆ ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದು ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಚಿರತೆಯನ್ನು ಸೆರೆ ಹಿಡಿದಿದ್ದಾರೆ.
ಅರಣ್ಯ ಇಲಾಖೆ ಸಿಬ್ಬಂದಿಗಳೊಂದಿಗೆ ಧಾವಿಸಿದ ಪಶುವೈದ್ಯರು ಚಿರತೆಗೆ ಅರವಳಿಗೆ ಚುಚ್ಚು ಮದ್ದು ನೀಡಿ ಅದನ್ನು ಸೆರೆ ಹಿಡಿದಿದ್ದಾರೆ. ನಂತರ ಅದನ್ನು ಸುರಕ್ಷಿತವಾಗಿ ಮೈಸೂರು ಮೃಗಾಲಯಕ್ಕೆ ಸ್ಥಳಾಂತರಿಸಲಾಯಿತು ಎಂದು ಹಿರಿಯ ಅರಣ್ಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಧಿಕಾರಿಗಳು ಹೇಳಿರುವಂತೆ ಚಾಮುಂಡಿ ಬೆಟ್ಟ ಅಥವಾ ಹತ್ತಿರದ ಅರಣ್ಯ ಪ್ರದೇಶಗಳಿಂದ ಚಿರತೆ ದಾರಿ ತಪ್ಪಿ ಬಂದಿರುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
ವೃದ್ಧ ಅಮ್ಮನ ಹೊರಗೆಳೆದು, ಕೋಣೆಯೊಳಗೆ ಕೂಡಿಹಾಕಿದ ಮಗಳು!
ಮನೆಯ ಮುಂಭಾಗದ ಬಾಗಿಲು ತೆರೆದಿದ್ದನ್ನು ಕಂಡ ಚಿರತೆ, ಯಾರಿಗೂ ತಿಳಿಯದಂತೆ ನೇರವಾಗಿ ಒಳಗಿನ ಕೊಠಡಿಯೊಂದಕ್ಕೆ ನುಗ್ಗಿದೆ. ಈ ಸಮಯದಲ್ಲಿ ಮನೆಯಲ್ಲಿ ಸುರೇಶ್ ಅವರ ಪತ್ನಿ ಸುಜಾತ ಮತ್ತು ಅವರ ತಾಯಿ ಶೈಲಜಾ ಮಾತ್ರ ಇದ್ದರು. ಚಿರತೆ ನೇರವಾಗಿ ಅಜ್ಜಿ ಶೈಲಜಾ ಅವರು ಇದ್ದ ಕೊಠಡಿಯೊಳಗೆ ನುಗ್ಗಿದೆ. ಕಣ್ಣೆದುರೇ ಕಾಡುಪ್ರಾಣಿಯನ್ನು ಕಂಡ ಶೈಲಜಾ ಆಘಾತಕ್ಕೊಳಗಾಗಿದ್ದಾರೆ.
ಆದರೆ, ತಕ್ಷಣವೇ ಕಾರ್ಯಪ್ರವೃತ್ತರಾದ ಸುರೇಶ್ ಅವರ ಪತ್ನಿ ಸುಜಾತ, ಪ್ರಾಣದ ಹಂಗು ತೊರೆದು ಅದ್ಭುತ ಧೈರ್ಯ ತೋರಿದ್ದಾರೆ. ಚಿರತೆ ದಾಳಿ ಮಾಡುವ ಮೊದಲೇ ತನ್ನ ತಾಯಿಯನ್ನು ಚಾಣಾಕ್ಷತನದಿಂದ ಕೊಠಡಿಯಿಂದ ಹೊರಕ್ಕೆ ಎಳೆದು ತಂದು, ಹೊರಗಿನಿಂದ ಕೊಠಡಿಯ ಬಾಗಿಲನ್ನು ಲಾಕ್ ಮಾಡಿದ್ದಾರೆ.
ಕೆಲಕಾಲ ಆತಂಕ
ನಗರದ ಮಧ್ಯಭಾಗದಲ್ಲಿರುವ ಸಿದ್ದಾರ್ಥ ಬಡಾವಣೆಯೊಳಗೆ ಚಿರತೆ ಬಂದಿರುವುದು ಸ್ಥಳೀಯ ನಿವಾಸಿಗಳಲ್ಲಿ ತೀವ್ರ ಆತಂಕ ಮೂಡಿಸಿತ್ತು. ಸುದ್ದಿ ಹರಡುತ್ತಿದ್ದಂತೆ ನೂರಾರು ಜನರು ಸುರೇಶ್ ಅವರ ಮನೆಯ ಬಳಿ ಜಮಾಯಿಸಿದ್ದು, ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು.
ಮೈಸೂರು ನಗರದ ಸುತ್ತಮುತ್ತಲಿನ ಬೆಟ್ಟ ಮತ್ತು ಪೊದೆಗಳಿಂದ ಚಿರತೆಗಳು ನಗರಕ್ಕೆ ಲಗ್ಗೆ ಇಡುತ್ತಿರುವುದು ಈಗ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಅಮ್ಮನನ್ನು ರಕ್ಷಿಸಿದ ಸುಜಾತ ಅವರ ಸಾಹಸಕ್ಕೆ ಈಗ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



