ಗ್ರಾಮೀಣ ಪ್ರದೇಶಗಳಿಗೆ ಅಗ್ಗದ ದರದಲ್ಲಿ ಔಷಧಿ: ಇಂಡಿಯಾ ಪೋಸ್ಟ್ ಮೂಲಕ ಜನೌಷಧಿ ಸೇವೆ ವಿಸ್ತರಿಸಲು ಕೇಂದ್ರ ಸರ್ಕಾರ ಚಿಂತನೆ..!
ದೇಶದ ಅಂಚೆ ಕಚೇರಿ ಜಾಲವನ್ನು ಬಳಸಿಕೊಂಡು ಪ್ರಧಾನ ಮಂತ್ರಿ ಜನೌಷಧಿ ಪರಿಯೋಜನಾ ಕೇಂದ್ರಗಳನ್ನು ಸ್ಥಾಪಿಸುವುದರ ಜೊತೆಗೆ ಇಂಡಿಯಾ ಪೋಸ್ಟ್ ಮೂಲಕ ಮನೆಗಳ ಬಾಗಿಲಿಗೇ ಔಷಧಿ ತಲುಪಿಸುವ ವ್ಯವಸ್ಥೆ ಜಾರಿಗೆ ತರಲು ಕೇಂದ್ರ ಚಿಂತನೆ ನಡೆಸುತ್ತಿದೆ.

ಬೆಂಗಳೂರು: ಕೇಂದ್ರ ಸರ್ಕಾರವು ದೇಶದ ಜನರಿಗೆ ಅಗ್ಗದ ಮತ್ತು ಗುಣಮಟ್ಟದ ಔಷಧಿಗಳನ್ನು ಸುಲಭವಾಗಿ ತಲುಪಿಸಲು ಮಹತ್ವದ ಹೊಸ ಯೋಜನೆ ಜಾರಿಗೆ ತರಲು ಚಿಂತನೆ ನಡೆಸುತ್ತಿದೆ.
ದೇಶದ ಅಂಚೆ ಕಚೇರಿ ಜಾಲವನ್ನು ಬಳಸಿಕೊಂಡು ಪ್ರಧಾನ ಮಂತ್ರಿ ಜನೌಷಧಿ ಪರಿಯೋಜನಾ ಕೇಂದ್ರಗಳನ್ನು ಸ್ಥಾಪಿಸುವುದರ ಜೊತೆಗೆ ಇಂಡಿಯಾ ಪೋಸ್ಟ್ ಮೂಲಕ ಮನೆಗಳ ಬಾಗಿಲಿಗೇ ಔಷಧಿ ತಲುಪಿಸುವ ವ್ಯವಸ್ಥೆ ಜಾರಿಗೆ ತರಲು ಕೇಂದ್ರ ಚಿಂತನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.
ರಾಜ್ಯಸಭಾ ಸಂಸದ ಲಹರ್ ಸಿಂಗ್ ಸಿರೋಯಾ ಅವರು ಈ ನಿಟ್ಟಿನಲ್ಲಿ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ಪತ್ರ ಬರೆದಿದ್ದರು.
ಗ್ರಾಮೀಣ ಮತ್ತು ದೂರದ ಪ್ರದೇಶಗಳಲ್ಲಿ ಜನರಿಗೆ ಅಗ್ಗದ ಜನರಿಕ್ ಔಷಧಿಗಳು ತಲುಪುವಲ್ಲಿ ಇನ್ನೂ ಹಲವು ಸವಾಲುಗಳಿರುವುದನ್ನು ಗಮನಿಸಿ, ಅಂಚೆ ಕಚೇರಿಗಳ ಮೂಲಸೌಕರ್ಯವನ್ನು ಬಳಸಿಕೊಳ್ಳುವಂತೆ ಸಲಹೆ ನೀಡಿದ್ದರು. ಸಚಿವರ ಈ ಸಲಹೆಯನ್ನು ಕೇಂದ್ರ ಸರ್ಕಾರ ಪರಿಗಣಿಸಿದ್ದು, ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತಪಡಿಸಿದೆ ಎಂದು ತಿಳಿದುಬಂದಿದೆ.
ಪ್ರಸ್ತುತ ದೇಶದ ಅನೇಕ ಗ್ರಾಮಗಳಲ್ಲಿ ಪೋಸ್ಟ್ ಆಫೀಸ್‌ಗಳು ಮಾತ್ರವೇ ಪ್ರಮುಖ ಸರ್ಕಾರಿ ಸಂಪರ್ಕ ಕೇಂದ್ರಗಳಾಗಿದ್ದು, ಇಂತಹ ಸ್ಥಳಗಳಲ್ಲಿ ಜನೌಷಧಿ ಕೇಂದ್ರಗಳನ್ನು ಸ್ಥಾಪಿಸಿದರೆ, ಅಗ್ಗದ ಔಷಧಿಗಳು ಜನರಿಗೆ ಹತ್ತಿರದಲ್ಲೇ ಲಭ್ಯವಾಗುವಂತಾಗುತ್ತದೆ. ಜೊತೆಗೆ, ಇಂಡಿಯಾ ಪೋಸ್ಟ್‌ನ ಕೊನೆಯ ಮೈಲಿ ಡೆಲಿವರಿ ವ್ಯವಸ್ಥೆಯನ್ನು ಬಳಸಿಕೊಂಡು, ಔಷಧಿಗಳನ್ನು ನೇರವಾಗಿ ಮನೆಬಾಗಿಲಿಗೆ ತಲುಪಿಸುವ ಅವಕಾಶವೂ ಸೃಷ್ಟಿಯಾಗಲಿದೆ. ಇದು ವಯೋವೃದ್ಧರು, ದಿವ್ಯಾಂಗರು ಮತ್ತು ದೂರದ ಪ್ರದೇಶಗಳಲ್ಲಿ ವಾಸಿಸುವವರಿಗೆ ಉಪಯುಕ್ತವಾಗಲಿದೆ.
ಈ ಯೋಜನೆಯು ಆರೋಗ್ಯ ಸೇವೆಗಳ ಪ್ರವೇಶವನ್ನು ವಿಸ್ತರಿಸುವುದರ ಜೊತೆಗೆ, ಸಾರ್ವಜನಿಕ ಆರೋಗ್ಯ ವ್ಯವಸ್ಥೆಗೆ ಬಲ ನೀಡುತ್ತದೆ ಎಂದು ಜ್ಯೋತಿರಾದಿತ್ಯ ಸಿಂಧಿಯಾ ಅವರು ಹೇಳಿದ್ದಾರೆ.
ಈ ಹಿನ್ನೆಲೆಯಲ್ಲಿ, ಪ್ರಸ್ತಾವನೆಯನ್ನು ಸಂಬಂಧ ಪಟ್ಟಂತಹ ಇಲಾಖೆಗೆ ಕಳುಹಿಸಲಾಗಿದ್ದು, ಅದರ ಕಾರ್ಯನಿರ್ವಹಣಾ ಸಾಧ್ಯತೆಗಳ ಕುರಿತು ಸಮಗ್ರ ಅಧ್ಯಯನ ನಡೆಯುತ್ತಿದೆ. ವಿವಿಧ ಇಲಾಖೆಗಳ ನಡುವೆ ಸಮಾಲೋಚನೆ ನಡೆಸಿ, ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದರು.
ಸಿರೋಯಾ ಅವರು ಈ ಹಿಂದೆಯೂ ಈ ವಿಷಯವನ್ನು ಸಂಸತ್ತಲ್ಲಿಯೂ ಪ್ರಸ್ತಾಪಿಸಿದ್ದರು. ದೇಶದ ಕೊನೆಯ ವ್ಯಕ್ತಿಗೂ ಅಗ್ಗದ ಔಷಧಿ ತಲುಪಿಸುವ ಗುರಿ ಸಾಧಿಸಲು ಇದು ಮಹತ್ವದ ಹೆಜ್ಜೆಯಾಗಲಿದೆ ಎಂದು ತಿಳಿಸಿದ್ದರು.
ಇದೀಗ ಕೇಂದ್ರ ಸರ್ಕಾರದಿಂದ ಬಂದ ಸಕಾರಾತ್ಮಕ ಪ್ರತಿಕ್ರಿಯೆಗೆ ಸಿರೋಯಾ ಅವರು ಸಂತೋಷ ವ್ಯಕ್ತಪಡಿಸಿದ್ದಾರೆ. ಈ ಯೋಜನೆ ಜಾರಿಗೆ ಬಂದಲ್ಲಿ, ಆರೋಗ್ಯ ಸೇವೆಗಳ ಲಭ್ಯತೆ ಮತ್ತು ಸಮಾನತೆ ಹೆಚ್ಚುವುದರ ಜೊತೆಗೆ, ಔಷಧಿಗಳ ವೆಚ್ಚವನ್ನು ಕಡಿಮೆ ಮಾಡಿ ಸಾಮಾನ್ಯ ಜನರಿಗೆ ದೊಡ್ಡ ಮಟ್ಟದಲ್ಲಿ ನೆರವಾಗಲಿದೆ. ಭಾರತದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆ ತರಬಲ್ಲ ಯೋಜನೆ ಇದಾಗಲಿದೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



