ರಣ ಬಿಸಿಲಿಗೆ ಸಿಲಿಕಾನ್ ಸಿಟಿ ಜನ ತತ್ತರ: 35 ಡಿಗ್ರಿ ತಲುಪಿದ ತಾಪಮಾನ; ಮಧ್ಯಾಹ್ನ 12 ರಿಂದ 3ರವರೆಗೆ ಹೊರ ಹೋಗುವುದನ್ನು ತಪ್ಪಿಸಿ..!
ಭಾರತೀಯ ಹವಾಮಾನ ಇಲಾಖೆ ನೀಡಿದ ಸೂಚನೆಯ ಮೇರೆಗೆ ಈ ಎಚ್ಚರಿಕೆ ಹೊರಡಿಸಲಾಗಿದೆ. ಕಳೆದ ಮೂರು ದಿನಗಳಿಂದ ನಗರದಲ್ಲಿ ಗರಿಷ್ಠ ತಾಪಮಾನವು 35 ಡಿಗ್ರಿ ಸೆಲ್ಸಿಯಸ್ ತಲುಪಿದ್ದು, ಕನಿಷ್ಠ ತಾಪಮಾನವೂ 20 ಡಿಗ್ರಿ ಸೆಲ್ಸಿಯಸ್‌ಕ್ಕಿಂತ ಹೆಚ್ಚಾಗಿದೆ.

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ತಾಪಮಾನ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಆಡಳಿತದಡಿ ಕಾರ್ಯನಿರ್ವಹಿಸುವ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ಹೀಟ್‌ವೇವ್ ಹಾಗೂ ಹೀಟ್‌ಸ್ಟ್ರೋಕ್ ಬಗ್ಗೆ ಎಚ್ಚರಿಕೆ ನೀಡಿದೆ.
ಭಾರತೀಯ ಹವಾಮಾನ ಇಲಾಖೆ ನೀಡಿದ ಸೂಚನೆಯ ಮೇರೆಗೆ ಈ ಎಚ್ಚರಿಕೆ ಹೊರಡಿಸಲಾಗಿದೆ. ಕಳೆದ ಮೂರು ದಿನಗಳಿಂದ ನಗರದಲ್ಲಿ ಗರಿಷ್ಠ ತಾಪಮಾನವು 35 ಡಿಗ್ರಿ ಸೆಲ್ಸಿಯಸ್ ತಲುಪಿದ್ದು, ಕನಿಷ್ಠ ತಾಪಮಾನವೂ 20 ಡಿಗ್ರಿ ಸೆಲ್ಸಿಯಸ್‌ಕ್ಕಿಂತ ಹೆಚ್ಚಾಗಿದೆ.
ಇದರಿಂದಾಗಿ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಿಲ್ಲಾಧಿಕಾರಿಗಳು ಜನತೆಗೆ ತಾಪಮಾನ ಸ್ಥಿತಿಯನ್ನು ಮಾಧ್ಯಮಗಳ ಮೂಲಕ ಗಮನಿಸಿ, ಬಿಸಿಲಿನ ತೀವ್ರತೆಯಿಂದ ರಕ್ಷಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ.
ಸಾಧ್ಯವಾದಷ್ಟು ಹೆಚ್ಚು ನೀರು ಕುಡಿಯುವಂತೆ, ದೇಹಕ್ಕೆ ಹಿತವಾದ ಹಗುರವಾದ ಮತ್ತು ಸಡಿಲವಾದ ಹತ್ತಿ ಬಟ್ಟೆಗಳನ್ನು ಧರಿಸಬೇಕು ಎಂದು ಸಲಹೆ ನೀಡಿದ್ದಾರೆ.
ಬಿಸಿಲಿಗೆ ಹೊರಗೆ ಹೋಗುವಾಗ ಟೋಪಿ, ಗಾಗಲ್ಸ್, ಪಾದರಕ್ಷೆಗಳನ್ನು ಬಳಸುವುದು ಅಗತ್ಯ. ದೂರ ಪ್ರಯಾಣಗಳನ್ನು ಸಾಧ್ಯವಾದರೆ ರಾತ್ರಿ ವೇಳೆ ಮಾಡುವುದು ಉತ್ತಮ. ಹೊರಾಂಗಣದಲ್ಲಿ ಕೆಲಸ ಮಾಡುವವರು ತಲೆಗೆ ಟೋಪಿ ಅಥವಾ ಛತ್ರಿ ಬಳಸಿ, ತೇವವಾದ ಬಟ್ಟೆಯನ್ನು ತಲೆ, ಕುತ್ತಿಗೆ, ಮುಖದ ಮೇಲೆ ಇಟ್ಟುಕೊಳ್ಳುವುದು ಉತ್ತಮ ಎಂದು ಸೂಚಿಸಲಾಗಿದೆ.
ದೇಹದ ತಾಪಮಾನ ತಗ್ಗಿಸಲು ಮಜ್ಜಿಗೆ, ಲಸ್ಸಿ, ಶರ್ಬತ್, ಲಿಂಬು ನೀರು ಮುಂತಾದ ಪಾನೀಯಗಳನ್ನು ಸೇವಿಸುವುದು ಉತ್ತಮ. ಪಶು-ಪಕ್ಷಿಗಳಿಗೆ ಸಹ ನೆರಳು ಮತ್ತು ಸಾಕಷ್ಟು ನೀರು ಒದಗಿಸುವಂತೆ ಪ್ರಾಧಿಕಾರ ಮನವಿ ಮಾಡಿದೆ.
ಗರ್ಭಿಣಿಯರು, ನವಜಾತ ಶಿಶುಗಳು, ಹಿರಿಯ ನಾಗರಿಕರು ಮತ್ತು ಚಿಕ್ಕ ಮಕ್ಕಳಿಗೆ ವಿಶೇಷ ಕಾಳಜಿ ವಹಿಸಬೇಕು. ಹೃದಯರೋಗ, ರಕ್ತದೊತ್ತಡ ಸಮಸ್ಯೆ ಇರುವವರು ಹೆಚ್ಚಿನ ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಲಾಗಿದೆ.
ವಿಶೇಷವಾಗಿ ಮಧ್ಯಾಹ್ನ 12 ರಿಂದ 3 ಗಂಟೆಯೊಳಗೆ ಹೊರಗೆ ಹೋಗುವುದನ್ನು ತಪ್ಪಿಸುವುದು ಉತ್ತಮ ಎಂದು ಪ್ರಾಧಿಕಾರವು ಪ್ರಕಟಣೆಯ ಮೂಲಕ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



