ನೀರಿನ ಬಿಲ್ ಬಾಕಿ ಉಳಿಸಿಕೊಂಡ ಬೆಂಗಳೂರಿಗರಿಗೆ ಗುಡ್ ನ್ಯೂಸ್: ಅಸಲು ಕಟ್ಟಿದರೆ, ಬಡ್ಡಿ-ದಂಡ ಮನ್ನಾ..!
ಸರ್ಕಾರದ ವಿವಿಧ ಇಲಾಖೆಗಳಲ್ಲಿ ಬಾಕಿಯಿರುವ ಮೊತ್ತಗಳನ್ನು ಲೆಕ್ಕ ಪತ್ರದಲ್ಲಿ ಸಮನ್ವಯಗೊಳಿಸಲು ಸಚಿವ ಸಂಪುಟ ನಿರ್ಣಯಿಸಲಾಗಿದೆ.

ಬೆಂಗಳೂರು: ಬೆಂಗಳೂರಲ್ಲಿ ನೀರಿನ ಬಿಲ್ ಕಟ್ಟದೇ ಬಾಕಿ ಉಳಿಸಿಕೊಂಡ ಗ್ರಾಹಕರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿಯೊಂದನ್ನು ನೀಡಿದೆ. ನೀರಿನ ಬಿಲ್ ಬಾಕಿ ಉಳಿಸಿಕೊಂಡ ಗ್ರಾಹಕರಿಗೆ ಒನ್ ಟೈಂ ಪಾವತಿಗೆ ಅವಕಾಶವನ್ನು ಸರ್ಕಾರ ಕಲ್ಪಿಸಿದ್ದು, ಬಡ್ಡಿ ದಂಡ, ಇತರೆ ಶುಲ್ಕ ಶೇ.100 ರಷ್ಟು ಮನ್ನಾ ಮಾಡುವುದಾಗಿ ತಿಳಿಸಿದೆ.
ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಗ್ರಾಹಕರು ನೀರಿನ ಬಾಕಿ ಅಸಲು ಮೊತ್ತವನ್ನು ಏಕಕಾಲದಲ್ಲಿ ಪಾವತಿಸಿದರೆ ಬಡ್ಡಿ, ದಂಡ ಮತ್ತು ಇತರೆ ಶುಲ್ಕಗಳನ್ನು ಶೇ.100ರಷ್ಟು ಮನ್ನಾ ಮಾಡುವ ಏಕಕಾಲಿಕ ತೀರುವಳಿ ಯೋಜನೆ(OTS)ಗೆ ಅನುಮೋದನೆ ನೀಡಲಾಗಿದೆ.
3 ತಿಂಗಳ ಅವಧಿಗೆ ಏಕಕಾಲಿಕ ತೀರುವಳಿ ಯೋಜನೆ ಜಾರಿ ಮಾಡಲು ತೀರ್ಮಾನ ಮಾಡಲಾಗಿದೆ. Bengaluru Water Supply Regulations, 1965ರ ನಿಯಮಾವಳಿಗಳನ್ನು ಸಡಿಲಿಸಿ, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಗ್ರಾಹಕರು ಪಾವತಿಸಲು ಬಾಕಿಯಿರುವ ನೀರಿನ ಬಿಲ್ಲಿನ ಸಂಬಂಧ ಏಕಕಾಲಿಕ ಸೆಟಲ್‌ಮೆಂಟ್ (One Time Settlement) ಯೋಜನೆಯನ್ನು ಅನುಷ್ಠಾನಗೊಳಿಸಲು ತೀರ್ಮಾನಿಸಲಾಗಿದೆ ಎಂದು ಕಾನೂನು ಸಚಿವ ಹೆಚ್.ಕೆ.ಪಾಟೀಲ್ ಅವರು ಮಾಹಿತಿ ನೀಡಿದ್ದಾರೆ.
ಸರ್ಕಾರದ ವಿವಿಧ ಇಲಾಖೆಗಳಲ್ಲಿ ಬಾಕಿಯಿರುವ ಮೊತ್ತಗಳನ್ನು ಲೆಕ್ಕ ಪತ್ರದಲ್ಲಿ ಸಮನ್ವಯಗೊಳಿಸಲು ಸಚಿವ ಸಂಪುಟ ನಿರ್ಣಯಿಸಲಾಗಿದೆ.
ಫೆಬ್ರವರಿ 2025ರ ವರೆಗೆ ಗ್ರಾಹಕರು ಉಳಿಸಿಕೊಂಡಿರುವ ನೀರಿನ ಬಾಕಿ ಮೊತ್ತವು ಒಟ್ಟು 701.71 ಕೋಟಿ ರೂ.ಗಳಿದ್ದು, ಈ ಮೊತ್ತದಲ್ಲಿ ಅಸಲು ಮೊತ್ತವು 439.03 ಕೋಟಿ ರೂ.ಗಳು ಹಾಗೂ ಬಾಕಿಯಿರುವ ಬಡ್ಡಿ ಮೊತ್ತವು 262.68 ಕೋಟಿ ರೂ.ಗಳಾಗಿದೆ.
ಈ ಯೋಜನೆಗೆ 3 ತಿಂಗಳ ಕಾಲಮಿತಿ ನಿಗದಿಗೊಳಿಸಿ. ಏಕಕಾಲಿಕ ಸೆಟಲ್‌ಮೆಂಟ್ (One Time Settlement-OTS) ಯೋಜನೆಯನ್ನು ಕಾರ್ಯಗತಗೊಳಿಸಿದಲ್ಲಿ ಗ್ರಾಹಕರಿಂದ ಬಾಕಿಯಿರುವ ನೀರಿನ ಅಸಲು ಬಿಲ್ಲಿನ ಮೊತ್ತವನ್ನು ಪಾವತಿಸಿಕೊಳ್ಳುವುದರಿಂದ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ ಆರ್ಥಿಕ ಸಂಪನ್ಮೂಲ ಕ್ರೋಢಿಕರಿಸಬಹುದಾಗಿದ್ದು, ಸಾರ್ವಜನಿಕರಿಗೂ ಸಹ ಅಸಲು ಮೊತ್ತದ ಮೇಲಿನ ಬಡ್ಡಿ ಕಟ್ಟುವುದರಿಂದ ವಿನಾಯಿತಿ ದೊರಕಲಿದೆ.
ಇದೇ ವೇಳೆ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಲಿಮಿಟೆಡ್ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಅಂದಾಜು 100 ಕೋಟಿ ರೂ.ಗಳ ವೆಚ್ಚದಲ್ಲಿ ‘ಭೂಭರ್ತಿ ತಾಣಗಳ ಕಾರ್ಯಾಚರಣೆ ಮತ್ತು ನಿರ್ವಹಣೆ’ ಪ್ಯಾಕೇಜ್ ಕಾಮಗಾರಿಗಳನ್ನುಕೈಗೆತ್ತಿಕೊಳ್ಳಲು ಸಂಪುಟ ಅನುಮೋದನೆ ನೀಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



