ಮುಂಬೈ ಪೊಲೀಸರ ಹೆಸರಿನಲ್ಲಿ ಕರೆಮಾಡಿ ಬಂಧನ ಬೆದರಿಕೆ; ₹56 ಲಕ್ಷ ಕಳೆದುಕೊಂಡ ನಿವೃತ್ತ ಸೇನಾ ಕರ್ನಲ್!
ಈ ಸಂಬಂಧ ನವೆಂಬರ್ 18 ರಂದು ಕೇಂದ್ರ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರು: ಮುಂಬೈ ಪೊಲೀಸ್ ಅಧಿಕಾರಿಗಳ ಹೆಸರಿನಲ್ಲಿ ಕರೆ ಮಾಡಿದ ವಂಚಕರು ಬಂಧಿಸುವ ಬೆದರಿಕೆ ಹಾಕಿದ್ದರಿಂದ ಭಯಭೀತರಾದ 83 ವರ್ಷದ ನಿವೃತ್ತ ಸೇನಾ ಕರ್ನಲ್ ಒಬ್ಬರು ₹56.05 ಲಕ್ಷ ಕಳೆದುಕೊಂಡಿದ್ದಾರೆ.
ಈ ಸಂಬಂಧ ನವೆಂಬರ್ 18 ರಂದು ಕೇಂದ್ರ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎಫ್‌ಐಆರ್ ಪ್ರಕಾರ, ಅಕ್ಟೋಬರ್ 27 ರಂದು ಕರೆ ಮಾಡಿದ ವ್ಯಕ್ತಿಯೊಬ್ಬ ಸಂತ್ರಸ್ತರಿಗೆ ತಾನು ಮುಂಬೈ ಪೊಲೀಸ್ ಇನ್ಸ್‌ಪೆಕ್ಟರ್ ಸಂಜಯ್ ಪಿಶೆ ಎಂದು ಹೇಳಿಕೊಂಡಿದ್ದಾನೆ. ದೂರುದಾರರ ಹೆಸರಿನಲ್ಲಿರುವ ಸಿಮ್ ಕಾರ್ಡ್ ಅನ್ನು ಸಾರ್ವಜನಿಕರನ್ನು ನಿಂದಿಸಲು ಬಳಸಲಾಗಿದೆ ಎಂದು ಹೇಳಿದ್ದಾನೆ.
ಈ ಸಂಬಂಧ ವಿಚಾರಣೆಗಾಗಿ ಮುಂಬೈಗೆ ಪ್ರಯಾಣಿಸುವಂತೆ ಸೂಚಿಸಿದ್ದಾನೆ. ಆಗ ಸಂತ್ರಸ್ತ ತಾನು ಪ್ರಯಾಣ ಬೆಳೆಸಲು ಸಾಧ್ಯವಿಲ್ಲ ಎಂದಾಗ, ವಿಡಿಯೋ ಕರೆ ಮೂಲಕ ಹಿರಿಯ ಅಧಿಕಾರಿ ಕವಿತಾ ಪೊಮನೆ ಎಂದು ಗುರುತಿಸಿಕೊಂಡ ಮಹಿಳೆ ಮತ್ತು ಉನ್ನತ ಅಧಿಕಾರಿ ಎಂದು ಹೇಳಿಕೊಂಡ ವಿಶ್ವಾಸ್ ಎಂಬ ಇನ್ನೊಬ್ಬ ವ್ಯಕ್ತಿ ಮಾತನಾಡಿದ್ದಾರೆ.
ಕರೆ ಮಾಡಿದವರು ವಿಚಾರಣೆಯನ್ನು ಆನ್‌ಲೈನ್ ಮೂಲಕವೇ ನಡೆಸಲಾಗುವುದು ಎಂದು ಹೇಳಿ ಅವರ ವೈಯಕ್ತಿಕ, ಕುಟುಂಬ ಮತ್ತು ಬ್ಯಾಂಕ್ ಖಾತೆಯ ವಿವರಗಳನ್ನು ಪಡೆದುಕೊಂಡಿದ್ದಾರೆ ಮತ್ತು ಯಾರಿಗಾದರೂ ಬಹಿರಂಗಪಡಿಸಿದರೆ ಬಂಧಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.
ಪ್ರತಿ ಮೂರು ಗಂಟೆಗಳಿಗೊಮ್ಮೆ ಅವರ ಲೈವ್ ಲೊಕೇಶನ್ ಅನ್ನು ಕಳಿಸುವಂತೆ ಕೇಳಿದ್ದಾರೆ. ಆರ್‌ಬಿಐ ಪರಿಶೀಲನೆಗಾಗಿ ಅವರ ಬ್ಯಾಂಕ್ ವಿವರಗಳನ್ನು ವಾಟ್ಸಾಪ್‌ನಲ್ಲಿ ಹಂಚಿಕೊಳ್ಳಲು ಸೂಚಿಸಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ತಿಳಿಸಲಾಗಿದೆ.
ಅವರನ್ನು ನಂಬಿದ ದೂರುದಾರರು ವಂಚಕರೊಂದಿಗೆ ನಾಲ್ಕು ಬ್ಯಾಂಕ್ ಖಾತೆಗಳ ವಿವರಗಳನ್ನು ಹಂಚಿಕೊಂಡಿದ್ದಾರೆ ಮತ್ತು ಅವರ ಸೂಚನೆಯ ಮೇರೆಗೆ, ವಂಚಕರು ತಿಳಿಸಿದ ಮತ್ತೊಂದು ಖಾತೆಗೆ 6 ಲಕ್ಷ ರೂ. ಮತ್ತು 5 ಲಕ್ಷ ರೂ.ಗಳನ್ನು ವರ್ಗಾಯಿಸಿದ್ದಾರೆ.
ನಂತರ, ಅವರ ಮ್ಯೂಚುವಲ್ ಫಂಡ್‌ಗಳು ಮತ್ತು ಇತರ ಹೂಡಿಕೆಗಳನ್ನು ಸಹ ಲಿಕ್ವಿಡೇಟ್ ಮಾಡಲು ಸೂಚಿಸಲಾಗಿದೆ. ನಂತರ ಅವರು ತನ್ನ ಬ್ಯಾಂಕ್ ಖಾತೆಗಳಿಂದ ಮತ್ತೆ 35.05 ಲಕ್ಷ ರೂ.ಗಳನ್ನು ಮತ್ತು 10 ಲಕ್ಷ ರೂ.ಗಳನ್ನು ವಂಚಕರು ಹೇಳಿದ್ದ ಅದೇ ಬ್ಯಾಂಕ್ ಖಾತೆಗೆ ವರ್ಗಾಯಿಸಿದ್ದಾರೆ.
ಇದರ ಮರುಪಾವತಿಯನ್ನು ಕೋರಿದಾಗ, ವಂಚಕರು ಆರ್‌ಬಿಐ ಹಣವನ್ನು ಪರಿಶೀಲಿಸುತ್ತಿದೆ ಮತ್ತು ಮೂರು ದಿನಗಳಲ್ಲಿ ಹಣವನ್ನು ಹಿಂದಿರುಗಿಸುವುದಾಗಿ ಹೇಳಿದ್ದಾರೆ.
ಸಂತ್ರಸ್ತರ ದೂರಿನ ಆಧಾರದ ಮೇಲೆ, ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸಂಬಂಧಿತ ವಿಭಾಗಗಳು ಮತ್ತು ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 318(4) (ವಂಚನೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



