ಸಿಡಿಲು ಮಳೆಗೆ 25ಕ್ಕೂ ಹೆಚ್ಚು ಮರಗಳು ಧರೆಗೆ; ನಗರದ ಬಹುತೇಕ ರಸ್ತೆಗಳು ಜಲಾವೃತ, ವಾಹನ ಸವಾರರು ಹೈರಾಣ
ಮೈಸೂರು ರಸ್ತೆ, ನಾಗವಾರ, ಮಾರತಹಳ್ಳಿ, ತುಬರಹಳ್ಳಿ, ಕಸ್ತೂರಿ ನಗರ, ಬಾಲಗೆರೆ ಟಿ ಜಂಕ್ಷನ್, ಸ್ಪೈಸ್ ಗಾರ್ಡನ್ ಮತ್ತು ಇತರ ಪ್ರದೇಶಗಳಲ್ಲಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು.

ಬೆಂಗಳೂರು: ಮಂಗಳವಾರ ಸಂಜೆ 6 ರಿಂದ 7 ಗಂಟೆಯವರೆಗೆ ನಗರದಲ್ಲಿ 30.2 ಮಿ.ಮೀ ಮಳೆಯಾಗಿದ್ದು, ಇದರಿಂದಾಗಿ ನಗರದ ಬಹುತೇಕ ರಸ್ತೆಗಳು ಜಲಾವೃತಗೊಂಡು ಭಾರೀ ಸಂಚಾರ ದಟ್ಟಣೆ ಉಂಟಾಗಿತ್ತು.
ಮೈಸೂರು ರಸ್ತೆ, ನಾಗವಾರ, ಮಾರತಹಳ್ಳಿ, ತುಬರಹಳ್ಳಿ, ಕಸ್ತೂರಿ ನಗರ, ಬಾಲಗೆರೆ ಟಿ ಜಂಕ್ಷನ್, ಸ್ಪೈಸ್ ಗಾರ್ಡನ್ ಮತ್ತು ಇತರ ಪ್ರದೇಶಗಳಲ್ಲಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು.
ಭಾರತೀಯ ಹವಾಮಾನ ಇಲಾಖೆ ನೀಡಿರುವ ಮಾಹಿತಿ ಪ್ರಕಾರ, ಎಚ್‌ಎಎಲ್ ಹಳೆಯ ವಿಮಾನ ನಿಲ್ದಾಣ ಪ್ರದೇಶದಲ್ಲಿ 22.8 ಮಿ.ಮೀ ಮಳೆಯಾಗಿದ್ದು, ಬೆಂಗಳೂರು ನಗರದಲ್ಲಿ 29.5 ಮಿ.ಮೀ ಮಳೆಯಾಗಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನಿಯಂತ್ರಣ ಕೊಠಡಿಗೂ ಮಳೆಯಿಂದಾಗಿ ರಸ್ತೆಗಳು ಜಲಾವೃತಗೊಂಡಿರುವುದು ಮತ್ತು ಮರ ಉರುಳಿದ ಬಗ್ಗೆ ಕರೆಗಳು ಬಂದಿವೆ.
ಭಾರೀ ಮಳೆಯ ನಂತರ ನಗರದಲ್ಲಿ 27 ಮರಗಳು, ಕೆಲವು ಭಾಗಗಳಲ್ಲಿ 94 ಕೊಂಬೆಗಳು ಧರೆಗುರುಳಿವೆ ಎಂದು ಬಿಬಿಎಂಪಿ ಅರಣ್ಯ ವಿಭಾಗ ಮಾಹಿತಿ ನೀಡಿದೆ.
ಯಲಚನಹಳ್ಳಿಯಲ್ಲಿ ನಿಲ್ಲಿಸಿದ್ದ ನಾಲ್ಕು ಚಕ್ರದ ವಾಹನದ ಮೇಲೆ ಬೃಹತ್ ಮರವೊಂದು ಉರುಳಿ ಬಿದ್ದಿದ್ದು, ಅದೃಷ್ಟವಶಾತ್ ಯಾವುದೇ ಸಾವು-ನೋವು ವರದಿಯಾಗಿಲ್ಲ.
ಘಟನೆ ಬಳಿಕ ಅಧಿಕಾರಿಗಳು ಮರ, ಕೊಂಬೆಗಳನ್ನು ತೆರವುಗೊಳಿಸಿದರು ಮತ್ತು ರಸ್ತೆ ಬದಿಯ ಚರಂಡಿಗಳಲ್ಲಿನ ಹೂಳನ್ನು ತೆಗೆದು ನಿಂತ ನೀರನ್ನು ಚರಂಡಿಗಳಿಗೆ ತಿರುಗಿಸಿದರು.
ಎಲ್ಲೆಲ್ಲಿ ಎಷ್ಟು ಮಳೆ?
ನಗರದಲ್ಲಿ ಮಂಗಳವಾರ ರಾತ್ರಿ 10 ಗಂಟೆಯ ವೇಳೆಗೆ ಸರಾಸರಿ 29.5 ಮಿ.ಮೀ ಮಳೆಯಾಗಿದೆ. ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ ಅತಿ ಹೆಚ್ಚು 4.7 ಸೆಂ.ಮೀ ಮಳೆಯಾಗಿದೆ. ಉಳಿದಂತೆ ಬಾಣಸವಾಡಿಯಲ್ಲಿ 3.8, ಕೊಡಿಗೇಹಳ್ಳಿ 2.9, ಮಾರತ್ ಹಳ್ಳಿ 2.6, ಕಾಟನ್ ಪೇಟೆ 2.5, ಕುಶಾಲ್ ನಗರ 2.4, ಹಂಪಿನಗರ 2.3, ಚಾಮರಾಜಪೇಟೆ ಹಾಗೂ ಹೊರಮಾವಿನಲ್ಲಿ ತಲಾ 2.2, ಚೌಡೇಶ್ವರಿ 1.9, ಸಂಪಂಗಿರಾಮನಗರ, ಪುಲಕೇಶಿನಗರ ಹಾಗೂ ವಿಶ್ವೇಶ್ವರಪುರ 1.7 ಸೆಂ.ಮೀ ಮಳೆಯಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



