ಆಲಮಟ್ಟಿ ಜಲಾಶಯದ ಎತ್ತರ ಹೆಚ್ಚಿಸಲು ಕ್ರಮ ಕೈಗೊಳ್ಳಿ: ರಾಜ್ಯ ಸರ್ಕಾರಕ್ಕೆ ಸಚಿವರ ಆಗ್ರಹ
ಅಣೆಕಟ್ಟಿನ ಎತ್ತರವನ್ನು ಹೆಚ್ಚಿಸಲು ಯಾವುದೇ ಕಾನೂನು ಅಡೆತಡೆಗಳಿಲ್ಲ ಎಂದು ಕಾನೂನು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಬೆಂಗಳೂರು: ಆಲಮಟ್ಟಿ ಜಲಾಶಯದ ಎತ್ತರ ಹೆಚ್ಚಿಸಲು ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಸಚಿವರು ಶನಿವಾರ ಒತ್ತಾಯಿಸಿದ್ದಾರೆ.
ಬೆಂಗಳೂರಿನಲ್ಲಿ ಮುಖ್ಯಮಂತ್ರಿ, ಡಿಸಿಎಂ ಡಿ.ಕೆ. ಶಿವಕುಮಾರ್ ಮತ್ತು ಇತರ ಸಚಿವರೊಂದಿಗಿನ ಸಭೆಯ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವ ಹೆಚ್.ಕೆ. ಪಾಟೀಲ್ ಅವರು, ಅಣೆಕಟ್ಟಿನ ಎತ್ತರವನ್ನು ಹೆಚ್ಚಿಸಲು ಯಾವುದೇ ಕಾನೂನು ಅಡೆತಡೆಗಳಿಲ್ಲ ಎಂದು ಕಾನೂನು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಹೊಸ ಗೇಟ್ ಅಳವಡಿಸಲು ಯಾವುದೇ ತೊಡಕು ಇಲ್ಲವೆಂದು ಕಾವೇರಿ ಐತೀರ್ಪು ಮತ್ತು ಮಹದಾಯಿ ಐತೀರ್ಪುಗಳು ಗೆಜೆಟ್ ಅಧಿಸೂಚನೆ ಹೊರಡಿಸಿದಂತೆ ಕೃಷ್ಣಾ ಜಲವಿವಾದ ನ್ಯಾಯಾಧೀಕರಣ-2 ಬ್ರಿಜೇಶ್ ಕುಮಾರ ಆಯೋಗದ ಐತೀರ್ಪನ್ನು ಸಹ ಗೆಜೆಟ್ ಪ್ರಕಟಣೆ ಮಾಡಬೇಕೆಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಲು ಸಭೆಯಲ್ಲಿ ಒಮ್ಮತದ ಅಭಿಪ್ರಾಯ ವ್ಯಕ್ತವಾಯಿತು ಎಂದು ಹೇಳಿದರು.
ಕೃಷ್ಣಾ ಜಲವಿವಾದ ನ್ಯಾಯಾಧೀಕರಣ-2ರ ಐತೀರ್ಪು ಪ್ರಕಟವಾಗಿ 15 ವರ್ಷಗಳು ಗತಿಸಿವೆ. ಐತೀರ್ಪಿನ ಅವಧಿ 40 ವರ್ಷದ್ದಾಗಿದೆ. ಹೀಗೆಯೇ ಇನ್ನೈದು ವರ್ಷ ಕಳೆದರೆ ಐತೀರ್ಪು ಅನುಷ್ಠಾನದ ಅರ್ಧ ಅವಧಿ ಪೂರ್ಣಗೊಳ್ಳುತ್ತದೆ. ಬಾಕಿ ಉಳಿದ ಅವಧಿಯಲ್ಲಿ ಕರ್ನಾಟಕ ತನ್ನ ಹಕ್ಕಿನ ನೀರನ್ನು ಬಳಸಿಕೊಳ್ಳುವಲ್ಲಿ ಯಾವುದೇ ರೀತಿಯಲ್ಲಿ ನ್ಯಾಯ ದೊರಕಿಸಿದಂತಾಗುವುದಿಲ್ಲ.
ರೈತರ ಹೊಲಗಳಿಗೆ ಹರಿಯಬೇಕಾದ ನೀರು ಸಮುದ್ರಕ್ಕೆ ಹರಿದು ವ್ಯರ್ಥವಾಗುತ್ತಿದೆ. 16 ಸಾವಿರ ಕೋಟಿ ರೂಪಾಯಿಯ ಬಂಡವಾಳ ಹೂಡಿ ಕೃಷ್ಣಾ ಮೇಲ್ದಂಡೆ ಯೋಜನೆ-3 ಅಡಿಯಲ್ಲಿ ಕಾಲುವೆ ಜಾಲ ನಿರ್ಮಾಣ ಮಾಡಲಾಗಿದೆ. ಆದರೆ, ಈ ಕಾಲುವೆಯ ಜಾಲ ವ್ಯರ್ಥವಾಗುತ್ತಿದೆ ಎಂದು ತಿಳಿಸಿದರು. ಕರ್ನಾಟಕದ ನ್ಯಾಯಯುತ ಹಕ್ಕಿಗೆ ಕೇಂದ್ರ ಸರ್ಕಾರ ಕೊಡಲಿಪೆಟ್ಟು ಹಾಕಿ ರಾಜ್ಯದ ಹಕ್ಕನ್ನು ನಿರಾಕರಿಸಿ ಕೆಳದಂಡೆ ರಾಜ್ಯಗಳಾದ ಆಂಧ್ರ ಮತ್ತು ತೆಲಂಗಾಣ ರಾಜ್ಯಗಳು ಕರ್ನಾಟಕದ ಪಾಲಿನ ನೀರನ್ನು ಬಳಕೆ ಮಾಡಿಕೊಳ್ಳುವುದಕ್ಕೆ ಅವಕಾಶ ಕಲ್ಪಿಸುತ್ತಿದೆ ಎಂದು ಆರೋಪಿಸಿದರು.
ಪ್ರವಾಹ ಪರಿಸ್ಥಿತಿಯು ಸಹ ನಮ್ಮನ್ನು ಬಾಧಿಸುತ್ತಿದ್ದು, ಕಳೆದ 5 ವರ್ಷಗಳಲ್ಲಿ ಐದೂ ವರ್ಷವು ಪ್ರವಾಹದಿಂದ ಕೃಷ್ಣಾ ನದಿ ಪಾತ್ರದ ಬಹುತೇಕ ಭಾಗ ಪ್ರವಾಹಪೀಡಿತವಾಗಿ ಜನತೆ ಸಂಕಷ್ಟಕ್ಕೀಡಾಗಿದ್ದಾರೆ. ಪ್ರವಾಹ ನಿರ್ವಹಣೆಗಾಗಿ ನಾವು ಈ ನೀರನ್ನು ಕಾಲುವೆಗೆ ಹರಿಸಿಕೊಳ್ಳಬಹುದು ಎಂಬ ರಚನಾತ್ಮಕ ಸಲಹೆಯನ್ನು ಸಭೆಯಲ್ಲಿ ನೀಡಿರುವುದಾಗಿ ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



