ಶಾಲಾ ವಿದ್ಯಾರ್ಥಿಗಳಿಗೆ ವಾರದಲ್ಲಿ ಒಂದು ದಿನ ನೈತಿಕ ಶಿಕ್ಷಣ: ಸರ್ಕಾರ ಒಪ್ಪಿಗೆ
ವಿಧಾನ ಪರಿಷತ್ತಿನಲ್ಲಿ ಶೂನ್ಯ ವೇಳೆ ವಿಷಯ ಪ್ರಸ್ತಾಪಿಸಿದ ಬಿಜೆಪಿಯ ಭಾರತಿ ಶೆಟ್ಟಿ ಅವರು, ಹದಿಹರೆಯದ ಮಕ್ಕಳ ಸಮಸ್ಯೆಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟರು.

ಬೆಂಗಳೂರು: ಪ್ರಾಥಮಿಕ ಮತ್ತು ಪ್ರೌಢಶಾಲಾ ಹಂತದಲ್ಲಿ ಮಕ್ಕಳಿಗೆ ನೈತಿಕ ಶಿಕ್ಷಣ ಪಾಠಕ್ಕೆ ಅವಕಾಶ ಮಾಡಿಕೊಡುವ ಕುರಿತು ಚಿಂತನೆ ನಡೆಸಲಾಗುತ್ತಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಹೇಳಿದ್ದಾರೆ.
ವಿಧಾನ ಪರಿಷತ್ತಿನಲ್ಲಿ ಶೂನ್ಯ ವೇಳೆ ವಿಷಯ ಪ್ರಸ್ತಾಪಿಸಿದ ಬಿಜೆಪಿಯ ಭಾರತಿ ಶೆಟ್ಟಿ ಅವರು, ಹದಿಹರೆಯದ ಮಕ್ಕಳ ಸಮಸ್ಯೆಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟರು.
14 ರಿಂದ 17ನೇ ವಯಸ್ಸಿನ ಮಕ್ಕಳ ಮನಸ್ಸು ಚಂಚಲತೆಯಿಂದ ಕೂಡಿರುತ್ತದೆ. ಈ ವಯಸ್ಸಿನ ಮಕ್ಕಳ ಮೇಲೆ ಸೂಕ್ಷ್ಮ ನಿಗಾ ಇರಿಸಬೇಕು. ಶಾಲೆಯಲ್ಲಿ ಪಾಠದ ಒತ್ತಡ, ಮನೆಯಲ್ಲಿ ಮೊಬೈಲ್‌ನಲ್ಲಿ ಆಟ ಎಂಬಂತಾಗಿ ಹದಿಹರೆಯದ ಮಕ್ಕಳು ದೈಹಿಕ ಮತ್ತು ಬೌದ್ಧಿಕವಾಗಿ ದುರ್ಬಲರಾಗುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಿಂದ ಅನೇಕ ಮಕ್ಕಳ ದಾರಿ ತಪ್ಪುತ್ತಿದ್ದಾರೆ ಎಂದುು ಹೇಳಿದರು.
ಅಪ್ರಾಪ್ತ ವಯಸ್ಸಿನ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಹೆಚ್ಚುತ್ತಿದೆ. ಬಾಂಬೆ ರೆಡ್ ಲೈಟ್ ಏರಿಯಾದಲ್ಲಿನ ಶೇ.99 ರಷ್ಟು ಮಹಿಳೆಯರು ಅಪ್ರಾಪ್ತ ವಯಸ್ಸಿನಲ್ಲಿ ಮನೆ ಬಿಟ್ಟು ಓಡಿ ಹೋದವರಾಗಿದ್ದಾರೆ. ಇಂದಿನ ಹದಿಹರೆಯದ ಮಕ್ಕಳಿಗೆ ಲೈಂಗಿಕ ಶಿಕ್ಷಣ, ನೈತಿಕ ಶಿಕ್ಷಣ ಸಿಗುತ್ತಿಲ್ಲ. ಕಳೆದ ಎರಡು ವರ್ಷಗಳಲ್ಲಿ ರಾಜ್ಯದಲ್ಲಿ 33,000 ಕ್ಕೂ ಹೆಚ್ಚು ಹದಿಹರೆಯದ ಗರ್ಭಧಾರಣೆಯ ಪ್ರಕರಣಗಳು ವರದಿಯಾಗಿವೆ. ಇವು ನೋಂದಾಯಿತ ಪ್ರಕರಣಗಳಾಗಿದ್ದು, ನೋಂದಾಯಿಸದ ಪ್ರಕರಣಗಳನ್ನು ಸೇರಿಸಿದರೆ ಈ ಸಂಖ್ಯೆ ಇನ್ನೂ ಹೆಚ್ಚಾಗಬಹುದು. ಇದನ್ನು ಗಂಭೀರವಾಗಿ ಪರಿಗಣಿಸಬೇಕಿದೆ ಎಂದು ತಿಳಿಸಿದರು.
ರಾಜ್ಯ ಸರ್ಕಾರವು ಲೈಂಗಿಕ ಶಿಕ್ಷಣವನ್ನು ನೀಡುತ್ತಿದೆ ಮತ್ತು ಸೆಮಿನಾರ್‌ಗಳನ್ನು ನಡೆಸುತ್ತಿದೆ ಎಂದು ಹೇಳಿಕೊಳ್ಳುತ್ತದೆ. ನಾನು ಅನೇಕ ಶಾಲೆಗಳಿಗೆ ಭೇಟಿ ನೀಡಿದ್ದೇನೆ. ಅಲ್ಲಿ ಲೈಂಗಿಕ ಶಿಕ್ಷಣವನ್ನು ನೀಡಲಾಗಿಲ್ಲ. ಹುಡುಗರು ಮತ್ತು ಹುಡುಗಿಯರಿಗೆ ಇದರ ಬಗ್ಗೆ ತಿಳಿದೇ ಇರುವುದಿಲ್ಲ. ಈ ಹಿಂದೆ ಶಾಲೆಗಳಲ್ಲಿ ಕಡ್ಡಾಯ ನೈತಿಕ ಶಿಕ್ಷಣ ಮತ್ತು ಪರೀಕ್ಷೆಗಳಿದ್ದವು. ಅದರಿಂದ ನಾವು ಸಾಕಷ್ಟು ಕಲಿಯುತ್ತಿದ್ದೆವು. ಆದರೆ, ಈಗ ಅದು ಇಲ್ಲ ಎಂದರು.
ಈ ವೇಳೆ ಮಧ್ಯ ಪ್ರವೇಶಿಸಿದ ಸಭಾಪತಿ ಬಸವರಾಜ ಹೊರಟ್ಟಿ ಅವರು, 8-10 ನೇ ತರಗತಿ ವಿದ್ಯಾರ್ಥಿಗಳಿಗೆ ಪ್ರತಿ ವಾರ ನೈತಿಕ ಶಿಕ್ಷಣ ಅವಧಿ ಇರುತ್ತಿತ್ತು. ಭಾರತಿ ಹೇಳುವುದು ನಿಜ ಮತ್ತು ನೈತಿಕ ವಿಜ್ಞಾನ ತರಗತಿಗಳು ಪ್ರಸ್ತುತ ಕಾಲದಲ್ಲಿ ಬಹಳ ಅವಶ್ಯಕ. 8 ರಿಂದ 10ನೇ ತರಗತಿ ಮಕ್ಕಳಿಗೆ ವಾರಕ್ಕೆ ಒಂದು ಗಂಟೆ ನೈತಿಕ ಶಿಕ್ಷಣ ನೀಡಬೇಕು. ಅದಕ್ಕೇ ಒಬ್ಬರೇ ಶಿಕ್ಷಕರು ಆಗಬೇಕೆಂದೇನೂ ಇಲ್ಲ. ಎಲ್ಲ ಶಿಕ್ಷಕರೂ ವಾರಕ್ಕೆ ಒಂದು ಬಾರಿ ನೈತಿಕ ಪಾಠ ಮಾಡಿದರೆ ಸಾಕು ಎಂದು ಸಲಹೆ ನೀಡಿದರು.
ಇದಕ್ಕೆ ಉತ್ತರಿಸಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು, ನೈತಿಕ ಶಿಕ್ಷಣ ನೀಡುವ ವಿಚಾರವು ಚರ್ಚೆಯಲ್ಲಿದೆ. ಪರಿಸರ, ಸಂಚಾರ ಪ್ರಜ್ಞೆ ಸೇರಿ ವಾರದಲ್ಲಿ ಒಂದು ನೈತಿಕ ಶಿಕ್ಷಣ ತರಗತಿ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗುವುದು. ಶೀಘ್ರದಲ್ಲೇ ಈ ಬಗ್ಗೆ ನಭೆ ನಡೆಸಲಾಗುವುದು ಎಂದು ಹೇಳಿದರು. ಈ ವೇಳೆ ಭಾರತಿಯವರು ಈ ವಿಷಯಗಳಿಗೆ ಪರೀಕ್ಷೆಗಳನ್ನೂ ಕೂಡ ನಡೆಸಬೇಕೆಂದು ಒತ್ತಾಯಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



