ರಾಜ್ಯ

News Headlines 30-06-25 | KRS ಜಲಾಶಯಕ್ಕೆ ಸಿಎಂ, ಡಿಸಿಎಂ ಬಾಗಿನ; 5 ವರ್ಷ ಬಂಡೆ ರೀತಿ ಸರ್ಕಾರ ಸುಭದ್ರ- Siddaramaiah; ಹು-ಧಾ ಪಾಲಿಕೆ ಮತ್ತೆ BJP ತೆಕ್ಕೆಗೆ!

News Headlines 30-06-25 | KRS ಜಲಾಶಯಕ್ಕೆ ಸಿಎಂ, ಡಿಸಿಎಂ ಬಾಗಿನ; 5 ವರ್ಷ ಬಂಡೆ ರೀತಿ ಸರ್ಕಾರ ಸುಭದ್ರ- Siddaramaiah; ಹು-ಧಾ ಪಾಲಿಕೆ ಮತ್ತೆ BJP ತೆಕ್ಕೆಗೆ!
Published On :

1. KRS ಜಲಾಶಯಕ್ಕೆ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಬಾಗಿನ ಅರ್ಪಣೆ

ಕರ್ನಾಟಕದ ಜೀವನಾಡಿ KRS ಜಲಾಶಯ 92 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಜೂನ್ ತಿಂಗಳ ಅವಧಿಯಲ್ಲೇ ಭರ್ತಿಯಾಗಿದ್ದು ಸಿಎಂ ಸಿದ್ದರಾಮಯ್ಯ ಡಿಸಿಎಂ ಡಿಕೆ ಶಿವಕುಮಾರ್ ಕಾವೇರಿಗೆ ಬಾಗಿನ ಸಮರ್ಪಿಸಿದರು. ಜೂನ್ ನಲ್ಲಿ ಕಾವೇರಿಗೆ ಬಾಗಿನ ಅರ್ಪಿಸಿದ ಮೊದಲ ಮುಖ್ಯಮಂತ್ರಿ ಎಂಬ ಹೆಗ್ಗಳಿಗೆ ಸಿದ್ದರಾಮಯ್ಯ ಭಾಜನರಾಗಿದ್ದಾರೆ. ಈ ವೇಳೆ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ಕಾವೇರಿ ಜಲಾನಯನ ಪ್ರದೇಶಕ್ಕೆ 2 ಸಾವಿರ ಕೋಟಿಗೂ ಹೆಚ್ಚು ಅನುದಾನ ನೀಡಲಾಗಿದೆ. ಪ್ರತಿ ಕ್ಷೇತ್ರವನ್ನೂ ಗಮದಲ್ಲಿಟ್ಟುಕೊಂಡು ಕೆಲಸ‌ ಮಾಡಲಾಗುತ್ತಿದೆ. ಮಂಡ್ಯ ಜಿಲ್ಲೆ ಒಂದಕ್ಕೆ 1 ಸಾವಿರ ಕೋಟಿಗೂ ಹೆಚ್ಚು ಅನುದಾನಕ್ಕೆ ಅನುಮೋದನೆ ನೀಡಲಾಗಿದೆ ಎಂದರು. ಬಾಗಿನ ಕಾರ್ಯಕ್ರಮಕ್ಕೂ ಮುನ್ನ ಮೈಸೂರು ವಿಮಾನ ನಿಲ್ದಾಣದಲ್ಲಿ ಸಿಎಂ ಸಿದ್ದರಾಮಯ್ಯ ಮಾತನಾಡಿ, ನಾನು ಡಿಕೆ ಶಿವಕುಮಾರ್ ಚೆನ್ನಾಗಿಯೇ ಇದ್ದೇವೆ. ನಮ್ಮ ಸರ್ಕಾರ 5 ವರ್ಷ ಬಂಡೆಯ ರೀತಿ ಭದ್ರವಾಗಿ ಇರುತ್ತದೆ ಎಂದು ಡಿಕೆಶಿ ಕೈಹಿಡಿದು ಘೋಷಿಸಿದರು.

2. Congress ಅಸಮಾಧಾನಿತ ಶಾಸಕರ ಜೊತೆ ಸುರ್ಜೇವಾಲಾ ಮಾತುಕತೆ

ಕಾಂಗ್ರೆಸ್‌‍ನಲ್ಲಿ ಸೃಷ್ಟಿಯಾಗಿರುವ ರಾಜಕೀಯ ಕ್ರಾಂತಿಯ ಚರ್ಚೆಗೆ ಬ್ರೇಕ್‌ ಹಾಕುವ ನಿಟ್ಟಿನಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸಿಂಗ್‌ ಸುರ್ಜೇವಾಲ ಇಂದು ಮಹತ್ವದ ಸಭೆ ನಡೆಸಿದ್ದಾರೆ. ಕಾಂಗ್ರೆಸ್‌ ಕಚೇರಿಯಲ್ಲಿ ಅತೃಪ್ತ ಹಾಗೂ ಅಸಮಾಧಾನಿತ ಶಾಸಕರ ಜೊತೆ ಪ್ರತ್ಯೇಕವಾಗಿ ಮಾತನಾಡಿದ ಸುರ್ಜೇವಾಲಾ ಶಾಸಕರ ಅಹವಾಲನ್ನು ಆಲಿಸಿ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರದಿಂದ ಏನೆಲ್ಲಾ ನೆರವು ಬೋಕೋ ಅದನ್ನೆಲ್ಲಾ ಕೊಡಿಸುವ ಭರವಸೆ ನೀಡಿದರು. ಸರ್ಕಾರದ ಕಾರ್ಯವೈಖರಿ ಬಗ್ಗೆ ನಿಮಗೆ ಅಸಮಾಧಾನವಿದ್ದರೇ ಬಹಿರಂಗವಾಗಿ ಮಾತನಾಡದಂತೆ ಎಚ್ಚರಿಸಿದರು. ಈ ಮಧ್ಯೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ಮುಖ್ಯಮಂತ್ರಿ ಬದಲಾವಣೆಯಂತಹ ವಿಚಾರಗಳ ಬಗ್ಗೆ ಪಕ್ಷದ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳುತ್ತದೆ. ಈ ಬಗ್ಗೆ ಅನಗತ್ಯ ಸಮಸ್ಯೆಯನ್ನು ಸೃಷ್ಟಿಸಬಾರದು ಎಂದು ಹೇಳಿದರು.

3. ಹುಬ್ಬಳ್ಳಿ-ಧಾರವಾಡ ಪಾಲಿಕೆ ಮತ್ತೆ BJP ತೆಕ್ಕೆಗೆ

ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯ ಮೇಯರ್ ಆಗಿ 19ನೇ ವಾರ್ಡ್ ಸದಸ್ಯೆ ಜ್ಯೋತಿ ಪಾಟೀಲ್ ಹಾಗೂ 49ನೇ ವಾರ್ಡ್ ಸದಸ್ಯ ಸಂತೋಷ ಚವ್ಹಾಣ್ ಉಪಮೇಯರ್ ಆಗಿ ಆಯ್ಕೆಯಾಗಿದ್ದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಲ್ಲಿ ಮತ್ತೊಮ್ಮೆ ಬಿಜೆಪಿ ಗದ್ದುಗೆ ಹಿಡಿಯುವಲ್ಲಿ ಯಶಸ್ವಿಯಾಗಿದೆ. ಪಾಲಿಕೆ ಸದಸ್ಯರು, ಲೋಕಸಭಾ ಸದಸ್ಯರು, ಶಾಸಕರು ಮತ್ತು ವಿಧಾನ ಪರಿಷತ್ತು ಸದಸ್ಯರು ಸೇರಿ ಒಟ್ಟು 90 ಜನ ಮತದಾರರು ಇದ್ದು, ಇಂದಿನ ಮೇಯರ್ ಹಾಗೂ ಉಪಮೇಯರ್ ಚುನಾವಣೆಯಲ್ಲಿ 87 ಜನರು ಪಾಲ್ಗೊಂಡಿದ್ದರು. ಈ ಪೈಕಿ ಕಾಂಗ್ರೆಸ್​ ನ ಸುವರ್ಣಾ ಕಲಕುಂಟ್ಲಾ ವಿರುದ್ಧ ಬಿಜೆಪಿಯ ಜ್ಯೋತಿ ಪಾಟೀಲ್ ಅವರು 47 ಮತಗಳನ್ನು ಪಡೆದಿದ್ದರೆ ಸಂತೋಷ ಚವ್ಹಾಣ್ ಸಹ 47 ಮತಗಳನ್ನು ಪಡೆದಿದ್ದಾರೆ.

4. BBMP ಕಸದ ಲಾರಿಯಲ್ಲಿ ಮಹಿಳೆ ಶವ ಪತ್ತೆ: ಪ್ರಿಯಕರನಿಂದ ಹತ್ಯೆ

ಬಿಬಿಎಂಪಿ ಕಸದ ಲಾರಿಯಲ್ಲಿ ಮಹಿಳೆ ಶವ ಪತ್ತೆ ಪ್ರಕರಣಕ್ಕೆ ರೋಚಕ ತಿರುವು ಸಿಕ್ಕಿದೆ. ಲಿವಿಂಗ್ ಟುಗೆದರ್ ನಲ್ಲಿದ್ದ ಮುಸ್ಲಿಂ ವ್ಯಕ್ತಿ ಹತ್ಯೆ ಮಾಡಿರುವುದು ಪೊಲೀಸರ ತನಿಖೆಯಿಂದ ಬಯಲಾಗಿದೆ. ಮಹಿಳೆಯನ್ನು ಆಶಾ ಎಂದು ಗುರುತಿಸಲಾಗಿದ್ದು ಆಕೆಯನ್ನು ಪ್ರಿಯಕರ ಮೊಹಮ್ಮದ್ ಸಂಶುದ್ದೀನ್ ಹತ್ಯೆ ಮಾಡಿದ್ದಾನೆ. ಬೆಂಗಳೂರಿನ ಚನ್ನಮ್ಮನಕೆರೆ ಠಾಣಾ ವ್ಯಾಪ್ತಿಯ ಸ್ಕೇಟಿಂಗ್ ಗ್ರೌಂಡ್ ಬಳಿ ಶನಿವಾರ ತಡರಾತ್ರಿ ನಿಲ್ಲಿಸಿದ್ದ ಕಸದ ಲಾರಿಯಲ್ಲಿ ಶವ ಪತ್ತೆಯಾಗಿತ್ತು. ಪ್ರಕರಣದ ಕುರಿತಂತೆ ತನಿಖೆ ಕೈಗೊಂಡ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಹಂತಕನ ಗುರುತು ಪತ್ತೆಯಾಗಿತ್ತು. ಇದೀಗ ಪೊಲೀಸರು ಮೊಹಮ್ಮದ್ ಸಂಶುದ್ದೀನ್ ನನ್ನು ಬಂಧಿಸಿ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

5. ಅಪಘಾತದಲ್ಲಿ ಗಾಯಗೊಂಡಿದ್ದ ಪಿಎಸ್ಐ ಸಾವು

ಗಾಂಜಾ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಸ್ಥಳ ಮಹಜರುಗಾಗಿ ಕರೆದೊಯ್ಯುತ್ತಿದ್ದ ವೇಳೆ ಸಂಭವಿಸಿದ ಭೀಕರ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ತಲಘಟ್ಟಪುರ ಪೊಲೀಸ್‌ ಠಾಣೆ ಪಿಎಸ್‌ಐ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ವಿಜಯಪುರ ಮೂಲದ 40 ವರ್ಷದ ಮೆಹಬೂಬ್ ಗುಡ್ಡಹಳ್ಳಿ ಕಳೆದ 1 ವರ್ಷದಿಂದ ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಆರೋಪಿಗಳನ್ನು ಕರೆದೊಯ್ಯುತ್ತಿದ್ದಾಗ ಸೂರ್ಯನಗರ ಸಮೀಪದ ಕಾರು ಕೆಟ್ಟು ನಿಂತಿದೆ. ಈ ವೇಳೆ ಕೆಳಗೆ ಇಳಿದು ಕಾರನ್ನು ಪರಿಶೀಲಿಸುವಾಗ ಹಿಂದಿನಿಂದ ವೇಗವಾಗಿ ಬಂದ ಟ್ರಕ್ ಏಕಾಏಕಿ ಮೆಹಬೂಬ್‌ಗೆ ಡಿಕ್ಕಿ ಹೊಡೆದಿತ್ತು. ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.