ಬೆಂಗಳೂರು: ಸಚಿವ ಜಮೀರ್ ಅಹ್ಮದ್ ಖಾನ್ ಸರ್ಕಾರಿ ನಿವಾಸಕ್ಕೆ ಮುತ್ತಿಗೆಗೆ ಯತ್ನ; ರೂಪೇಶ್ ರಾಜಣ್ಣ ಪೊಲೀಸರ ವಶಕ್ಕೆ!
ಕನ್ನಡ ಪರ ಹೋರಾಟಗಾರ ರೂಪೇಶ್ ರಾಜಣ್ಣ ಕನ್ನಡ ಸಂಘಟನೆ ಹೆಸರಲ್ಲಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪ

ಬೆಂಗಳೂರು: ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರ ಗಾಲ್ಫ್ ಮೈದಾನದ ರಸ್ತೆಯಲ್ಲಿರುವ ಸರ್ಕಾರಿ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಕನ್ನಡ ಪರ ಹೋರಾಟಗಾರ ಹಾಗೂ ಬಿಗ್ ಬಾಸ್ ರಿಯಾಲಿಟಿ ಶೋ ಮಾಜಿ ಸ್ಪರ್ಧಿ ರೂಪೇಶ್ ರಾಜಣ್ಣ ಅವರನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ಮಂಗಳವಾರ ನಡೆದಿದೆ.
ವಸತಿ ಇಲಾಖೆಯಲ್ಲಿ ನಡೆಯುತ್ತಿದ್ದ ಅಕ್ರಮಗಳ ಬಗ್ಗೆ ರಾಜ್ಯ ನೀತಿ ಆಯೋಗದ ಉಪಾಧ್ಯಕ್ಷ ಬಿ ಆರ್ ಪಾಟೀಲ್ ಅವರ ಆಡಿಯೋ ವೈರಲ್ ಆಗಿತ್ತು. ಇದರಲ್ಲಿ ಜಮೀರ್ ಅಹ್ಮದ್ ಖಾನ್ ಅವರ ಆಪ್ತ ಕಾರ್ಯದರ್ಶಿ ಸರ್ಫರಾಜ್ ಖಾನ್ ವಿರುದ್ಧ ಆರೋಪ ಮಾಡಿದ್ದರು. ಇದನ್ನು ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಅವರು ತಿಳಿಸಿದ್ದರು. ಇದರ ಬೆನ್ನಲ್ಲೇ ಅವರ ವಿರುದ್ದವೂ ಅಕ್ರಮ ರೆಸಾರ್ಟ್ ನಿರ್ಮಾಣ ಮಾಡಿದ ಆರೋಪ ಕೇಳಿ ಬಂದಿತ್ತು.
ಈ ಬಗ್ಗೆ ವಿಡಿಯೋದಲ್ಲಿ ಸ್ಪಷ್ಟನೆ ನೀಡಿದ ಸರ್ಫರಾಜ್ ಖಾನ್ ನನ್ನ ವ್ಯವಹಾರದ ವಿಚಾರದಲ್ಲಿ ಸಚಿವರ ಹೆಸರನ್ನು ತರಬೇಡಿ ಎಂದಿದ್ದರು. ಅಲ್ಲದೇ ಕನ್ನಡ ಪರ ಹೋರಾಟಗಾರ ರೂಪೇಶ್ ರಾಜಣ್ಣ ಕನ್ನಡ ಸಂಘಟನೆ ಹೆಸರಲ್ಲಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದರು.
ಹೀಗಾಗಿ ರೂಪೇಶ್ ರಾಜಣ್ಣ ಅವರು ಸರ್ಫರಾಜ್ ಖಾನ್ ಆರೋಪಕ್ಕೆ ದಾಖಲೆ ಕೇಳಲು ಇಂದು ಜಮೀರ್ ನಿವಾಸಕ್ಕೆ ಬಂದಿದ್ದರು. ಈ ವೇಳೆ ಪೊಲೀಸರು ಹಾಗೂ ರೂಪೇಶ್ ರಾಜಣ್ಣ ಅವರ ನಡುವೆ ಕೆಲಕಾಲ ವಾಗ್ವಾದ ನಡೆಯಿತು. ಬಳಿಕ ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಇದಕ್ಕೂ ಮುನ್ನಾ ತಮ್ಮ ಫೇಸ್ ಬುಕ್ ಖಾತೆಯನ್ನು ಬರೆದುಕೊಂಡಿದ್ದ ರೂಪೇಶ್ ರಾಜಣ್ಣ, ಸರ್ಫರಾಜ್ ಖಾನ್ ಅವರು ನನ್ನ ಮೇಲಿನ ಸುಳ್ಳು ಆರೋಪ ಮಾಡಿರೋ ತಮ್ಮ ವಿಡಿಯೋ ನೋಡಿದೆ. ಯಾವುದೇ ಕಾರಣಕ್ಕೂ ಸತ್ಯ ತಿಳಿಸದೆ ನಾ ಹಿಂದೆ ಸರಿಯೋಲ್ಲ. ದಯವಿಟ್ಟು ನನ್ನ ಖಾತೆ ಬ್ಲಾಕ್ ತೆಗೆಯಿರಿ . ಹಾಗೂ ನೀವು ಹೇಳಿರೋದು ಸತ್ಯ ಅಂತ ದಾಖಲೆ ಸಮೇತ ನಿರೂಪಿಸಿ. ನಾನು ಸಿದ್ದ. ತಮ್ಮ ಕಚೇರಿಗೆ ಬರುತ್ತಿರುವೆ ದಯವಿಟ್ಟು ಅಲ್ಲಿಯೇ ಇರಿ” ಎಂದು ಸವಾಲು ಹಾಕಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



