ಬೆಂಗಳೂರು 2ನೇ ವಿಮಾನ ನಿಲ್ದಾಣ ಸ್ಥಳ ಫೈನಲ್: ರಾಮಮೋಹನ್ ನಾಯ್ಡು ಜತೆ ಎಂ.ಬಿ ಪಾಟೀಲ್ ಮಾತುಕತೆ!
ಹಲವು ಬೇಡಿಕೆಗಳೊಂದಿಗೆ ಬೃಹತ್ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ದೆಹಲಿಗೆ ತೆರಳಿದ್ದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಕೆ.ರಾಮಮೋಹನ್ ನಾಯ್ಡು ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.

ನವದೆಹಲಿ: ಬೆಂಗಳೂರಿನಲ್ಲಿ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸ್ಥಳ ಅಂತಿಮಗೊಳಿಸಲು ಒತ್ತಾಯ, ಹುಬ್ಬಳ್ಳಿ ಮತ್ತು ಬೆಳಗಾವಿ ವಿಮಾನ ನಿಲ್ದಾಣಗಳನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಏರಿಸುವುದು, ವಿಜಯಪುರ ವಿಮಾನ ನಿಲ್ದಾಣ ಲೋಕಾರ್ಪಣೆಗೆ ಒಪ್ಪಿಗೆ ಸೇರಿದಂತೆ ಹಲವು ಬೇಡಿಕೆಗಳೊಂದಿಗೆ ಬೃಹತ್ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ದೆಹಲಿಗೆ ತೆರಳಿದ್ದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಕೆ.ರಾಮಮೋಹನ್ ನಾಯ್ಡು ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.
ಬೆಂಗಳೂರಿನ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸ್ಥಳವನ್ನು ತ್ವರಿತವಾಗಿ ಅಂತಿಮಗೊಳಿಸಲು ಮತ್ತು ವಿಜಯಪುರ ವಿಮಾನ ನಿಲ್ದಾಣವನ್ನು ಕಾರ್ಯರೂಪಕ್ಕೆ ತರಲು ಶೀಘ್ರ ಅನುಮತಿ ನೀಡಲು ಒತ್ತಾಯಿಸಲಾಯಿತು. ಎರಡೂ ರಾಜ್ಯದ ದೀರ್ಘಕಾಲೀನ ಸಂಪರ್ಕ ಮತ್ತು ಸಾಮರ್ಥ್ಯವನ್ನು ಹೆಚ್ಚಿಸಲು ನಿರ್ಣಾಯಕವಾಗಿದೆ ಎಂದು ಎಂಬಿ ಪಾಟೀಲ್ ಕೇಂದ್ರ ಸಚಿವರಿಗೆ ಮನವರಿಕೆ ಮಾಡಿಸಿದರು.
ಹುಬ್ಬಳ್ಳಿ ಮತ್ತು ಬೆಳಗಾವಿ ವಿಮಾನ ನಿಲ್ದಾಣಗಳನ್ನು ಅಂತರರಾಷ್ಟ್ರೀಯ ಸ್ಥಾನಮಾನ ದರ್ಜೆಗೇರಿಸಬೇಕು. ಇದು ಉತ್ತರ ಕರ್ನಾಟಕ, ದಕ್ಷಿಣ ಮಹಾರಾಷ್ಟ್ರ ಮತ್ತು ಗೋವಾ ಈ ಭಾಗಗಳಿಗೆ ವಿಮಾನ ಸಂಪರ್ಕ ಸುಧಾರಣೆಯ ಅಗತ್ಯಗಳನ್ನು ಪರಿಗಣಿಸುವಂತೆ ತಿಳಿಸಲಾಗಿದೆ. ಎರಡೂ ವಿಮಾನ ನಿಲ್ದಾಣಗಳಲ್ಲಿ ಗಂಟೆಗೆ 2,400 ಪ್ರಯಾಣಿಕರನ್ನು ನಿರ್ವಹಿಸಬಲ್ಲ ಹೊಸ ಟರ್ಮಿನಲ್ ನಿರ್ಮಿಸಲಾಗುತ್ತಿದೆ. ಎ321 ದರ್ಜೆಯ ವಿಮಾನಗಳ ಕಾರ್ಯಾಚರಣೆ ಸಾಧ್ಯವಾಗುವಂತೆ 12 ಪಾರ್ಕಿಂಗ್ ಬೇ ಅಭಿವೃದ್ಧಿಪಡಿಸಲಾಗುತ್ತಿದ್ದು, ರಾತ್ರಿ ವೇಳೆಯಲ್ಲೂ ಲ್ಯಾಂಡಿಂಗ್ ಆಗುವಂತೆ ಕ್ರಮ ವಹಿಸಲಾಗಿದೆ ಎಂದರು.
ಮೈಸೂರು, ಶಿವಮೊಗ್ಗ, ಹಾಸನ, ಕಾರವಾರ ಮತ್ತು ರಾಯಚೂರುಗಳಲ್ಲಿ ವಿಮಾನ ನಿಲ್ದಾಣಗಳನ್ನು ಅಭಿವೃದ್ಧಿಪಡಿಸಲು ಮತ್ತು ಮೇಲ್ದರ್ಜೆಗೇರಿಸಲು ನೆರವು ನೀಡುವಂತೆ ಕೋರಲಾಗಿದೆ. ಈ ವಿಮಾನ ನಿಲ್ದಾಣಗಳಿಗೆ ಅಂತರರಾಷ್ಟ್ರೀಯ ಸ್ಥಾನಮಾನವು ಹೂಡಿಕೆಯನ್ನು ವೇಗಗೊಳಿಸುತ್ತದೆ. ಇ-ಕಾಮರ್ಸ್ ಮತ್ತು ಲಾಜಿಸ್ಟಿಕ್ಸ್ ಅನ್ನು ಹೆಚ್ಚಿಸುತ್ತದೆ ಮತ್ತು ಬೆಂಗಳೂರಿನಾಚೆಗೆ ಆರ್ಥಿಕ ಬೆಳವಣಿಗೆಯನ್ನು ವಿಕೇಂದ್ರೀಕರಿಸುತ್ತದೆ ಎಂದು ಎಂಬಿ ಪಾಟೀಲ್ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



