390 ಕೋಟಿ ರೂ ಹೂಡಿಕೆಯ IBC ಗಿಗಾ ಫ್ಯಾಕ್ಟರಿಗೆ ಶಂಕುಸ್ಥಾಪನೆ: 9 ತಿಂಗಳಲ್ಲಿ ಬ್ಯಾಟರಿ ಉತ್ಪಾದನೆ ಆರಂಭ
ದೇವನಹಳ್ಳಿಯ ಕೆಐಎಡಿಬಿ ಐಟಿಐಆರ್ ಕೈಗಾರಿಕಾ ಪ್ರದೇಶದಲ್ಲಿ ಅಸ್ತಿತ್ವಕ್ಕೆ ಬರಲಿರುವ ಈ ಉತ್ಪಾದನಾ ಘಟಕಕ್ಕೆ ಕಂಪನಿಯು ಮೊದಲ ಹಂತದಲ್ಲಿ 390 ಕೋಟಿ ರೂ. ಹೂಡಿಕೆ ಮಾಡಲಿದೆ.

ಬೆಂಗಳೂರು: ವಿದ್ಯುತ್ ಚಾಲಿತ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳಿಗೆ ಬೇಕಾಗುವ ಲೀಥಿಯಂ-ಅಯಾನ್ ಬ್ಯಾಟರಿಗಳನ್ನು ತಯಾರಿಸುವ ಇಂಟರ್ ನ್ಯಾಷನಲ್ ಬ್ಯಾಟರಿ ಕಂಪನಿಯ (ಐಬಿಸಿ) ಗಿಗಾ ಫ್ಯಾಕ್ಟರಿಯ ಸ್ಥಳೀಯ ಘಟಕಕ್ಕೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ್ ಅವರು ಬುಧವಾರ ಶಂಕುಸ್ಥಾಪನೆ ನೆರವೇರಿಸಿದರು.
ದೇವನಹಳ್ಳಿಯ ಕೆಐಎಡಿಬಿ ಐಟಿಐಆರ್ ಕೈಗಾರಿಕಾ ಪ್ರದೇಶದಲ್ಲಿ ಅಸ್ತಿತ್ವಕ್ಕೆ ಬರಲಿರುವ ಈ ಉತ್ಪಾದನಾ ಘಟಕಕ್ಕೆ ಕಂಪನಿಯು ಮೊದಲ ಹಂತದಲ್ಲಿ 390 ಕೋಟಿ ರೂ. ಹೂಡಿಕೆ ಮಾಡಲಿದೆ. ಇದರಿಂದ 300 ನೇರ ಉದ್ಯೋಗಗಳು ಸೃಷ್ಟಿಯಾಗಲಿವೆ. ಇಲ್ಲಿ ಉತ್ಪಾದಿಸಲಾಗುವ ಬ್ಯಾಟರಿಗಳ ಪೈಕಿ ಶೇಕಡಾ 20ರಷ್ಟನ್ನು ಅಮೆರಿಕ ಮತ್ತು ಯೂರೋಪಿನ ದೇಶಗಳಿಗೆ ರಫ್ತು ಮಾಡಲಾಗುವುದು ಎಂದು ಸಚಿವರು ಮಾಹಿತಿ ನೀಡಿದರು.
ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಐಬಿಸಿ ಘಟಕಕ್ಕೆ 10 ಎಕರೆ ಜಾಗ ಕೊಟ್ಟಿದ್ದು, ಫಾಕ್ಸ್-ಕಾನ್ ಸಂಸ್ಥೆಯ ಸಮೀಪದಲ್ಲೇ ಇದು ಅಸ್ತಿತ್ವಕ್ಕೆ ಬರಲಿದೆ. ಮುಂದಿನ 98 ತಿಂಗಳಲ್ಲಿ ಈ ಘಟಕವು ಕಾರ್ಯಾಚರಣೆ ಆರಂಭಿಸಲಿದ್ದು, ಇಲ್ಲೇ ಬ್ಯಾಟರಿಗಳನ್ನು ತಯಾರಿಸಿ, ಇಲ್ಲಿಂದಲೇ ದೇಶ-ವಿದೇಶಗಳಿಗೂ ಕಳಿಸಿ ಕೊಡಲಿದೆ ಎಂದು ಹೇಳಿದರು.
ಸದ್ಯಕ್ಕೆ ಐಬಿಸಿ ಕಂಪನಿಯು ದಕ್ಷಿಣ ಕೊರಿಯಾದಲ್ಲಿ ಸೆಲ್ಸ್ ಉತ್ಪಾದಿಸಿ, ಅವುಗಳನ್ನು ಇಲ್ಲಿಗೆ ತಂದು ಪೂರ್ಣ ಪ್ರಮಾಣದ ಬ್ಯಾಟರಿಗಳನ್ನು ತಯಾರಿಸುತ್ತಿದೆ. ಈ ಘಟಕ ಕಾರ್ಯಾರಂಭ ಆದ ನಂತರ ಬೆಂಗಳೂರಿನಲ್ಲೇ ಸೆಲ್ ಗಳ ಉತ್ಪಾದನೆ ಕೂಡಾ ಆಗಲಿದೆ. ಇದು ದೇಶದಲ್ಲೇ ಮೊದಲ ಸೆಲ್ ಉತ್ಪಾದನಾ ಘಟಕವಾಗಲಿದೆ. ಬರುವ ದಿನಗಳಲ್ಲಿ ದ್ವಿಚಕ್ರ, ತ್ರಿಚಕ್ರ ವಾಹನಗಳ ಜತೆಗೆ ಉಳಿದ ವಾಹನಗಳಿಗೂ ಇದು ಬ್ಯಾಟರಿ ಪೂರೈಸಲಿದೆ ಎಂದು ವಿವರಿಸಿದರು.
ಭಾರತದಲ್ಲಿ ಶಿಕ್ಷಣ ಹಾಗೂ ಅಮೆರಿಕದ ಸಿಲಿಕಾನ್ ವ್ಯಾಲಿಯಲ್ಲಿ ತರಬೇತಿ ಪಡೆದ ಯುವ ಉದ್ಯಮಿಗಳು ಐಬಿಸಿ ಕಂಪನಿ ಸ್ಥಾಪಿಸಿ, ಬ್ಯಾಟರಿಗಳ ವಿನ್ಯಾಸ, ಉತ್ಪಾದನೆಗೆ ಆದ್ಯತೆ ಕೊಟ್ಟಿದ್ದಾರೆ. ಹಾಗೆಯೇ ಭಾರತದ ಅಗತ್ಯಕ್ಕೆ ಹೊಂದುವ ಹಾಗೆ ವಿನ್ಯಾಸ ಮಾಡಿರುವುದು ಮೆಚ್ಚುವಂತಹದ್ದು. ಇದು ಭಾರತದಲ್ಲಿ ಇಂತಹ ಪ್ರಪ್ರಥಮ ಯೋಜನೆಯಾಗಿದೆ. ಇಲ್ಲಿ ರೆಟ್ರೋಫಿಟ್ ಬ್ಯಾಟರಿಗಳನ್ನು ತಯಾರಿಸಲಾಗುವುದು. ಇದರಿಂದ ರಾಜ್ಯದ ಆರ್ಥಿಕತೆಗೆ ಹೊಸ ಬಲ ಬರಲಿದ್ದು, ಚೀನಾದ ಮೇಲಿನ ಅವಲಂಬನೆ ಕಡಿಮೆಯಾಗಲಿದೆ ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



