ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆ: HD ಕುಮಾರಸ್ವಾಮಿ ಮಧ್ಯಸ್ಥಿಕೆ; ಕೇಂದ್ರ ಸಚಿವೆ ಅನ್ನಪೂರ್ಣದೇವಿ ಜೊತೆ ಮಾತುಕತೆ
ಎಫ್ ಆರ್ ಎಸ್ ನೀತಿಯಲ್ಲಿ ಸುಧಾರಣೆ, ಅಂಗನವಾಡಿ ಕಾರ್ಯಕರ್ತೆಯರನ್ನು ಚುನಾವಣೆ ಕೆಲಸಗಳಿಂದ ಮುಕ್ತಿಗೊಳಿಸುವುದು, ವಿಮಾ ಸೌಲಭ್ಯ, ಎಲ್ಲಾ ನೌಕರರ ವೇತನ ಹೆಚ್ಚಳ ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಚರ್ಚಿಸಿದರು.

ನವದೆಹಲಿ: ಅಂಗನವಾಡಿ, ಅಕ್ಷರ ದಾಸೋಹ ಹಾಗೂ ಆಶಾ ಕಾರ್ಯಕರ್ತೆಯರ ಸಮಸ್ಯೆಗಳ ಬಗ್ಗೆ ಕೇಂದ್ರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವರಾದ ಅನ್ನಪೂರ್ಣ ದೇವಿ ಮತ್ತು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರೊಂದಿಗೆ ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು ಮಹತ್ವದ ಮಾತುಕತೆ ನಡೆಸಿದರು.
ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನಾ ಚಳವಳಿ ನಡೆಸುತ್ತಿದ್ದ ಕರ್ನಾಟಕ ಅಂಗನವಾಡಿ, ಅಕ್ಷರ ದಾಸೋಹಿ, ಆಶಾ ನೌಕರರ ಪ್ರಮುಖರನ್ನು ಬುಧವಾರ ನವದೆಹಲಿಗೆ ಕರೆಸಿಕೊಂಡ ಸಚಿವ ಕುಮಾರಸ್ವಾಮಿ ಅವರು, ಈ ಎಲ್ಲಾ ಪ್ರಮುಖರ ಜತೆ ಸಂಜೆ ನವದೆಹಲಿಯ ಶಾಸ್ತ್ರೀ ಭವನದಲ್ಲಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯದ ಕಚೇರಿಯಲ್ಲಿ ಸಚಿವರಾದ ಅನ್ನಪೂರ್ಣದೇವಿ ಅವರನ್ನು ಭೇಟಿಯಾದರು.
ಈ ಸಂದರ್ಭದಲ್ಲಿ ನೌಕರರ ಪರವಾಗಿ ಸಚಿವರಿಗೆ ಅವರ ಸಮಸ್ಯೆಗಳು, ಬೇಡಿಕೆಗಳ ಬಗ್ಗೆ ಕುಮಾರಸ್ವಾಮಿ ಅವರು ಮಾಹಿತಿ ನೀಡಿದರು. ಇಬ್ಬರು ಸಚಿವರು ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯದ ಉನ್ನತ ಅಧಿಕಾರಿಗಳು ಹಾಜರಿದ್ದ ಈ ಸಭೆಯಲ್ಲಿ ಕರ್ನಾಟಕದಿಂದ ಬಂದಿದ್ದ ಹನ್ನೆರಡು ಮಂದಿ ನೌಕರರ ಪ್ರಮುಖರು ಭಾಗಿಯಾಗಿದ್ದರು.
ಎಫ್ ಆರ್ ಎಸ್ ನೀತಿಯಲ್ಲಿ ಸುಧಾರಣೆ, ಅಂಗನವಾಡಿ ಕಾರ್ಯಕರ್ತೆಯರನ್ನು ಚುನಾವಣೆ ಕೆಲಸಗಳಿಂದ ಮುಕ್ತಿಗೊಳಿಸುವುದು, ವಿಮಾ ಸೌಲಭ್ಯ, ಎಲ್ಲಾ ನೌಕರರ ವೇತನ ಹೆಚ್ಚಳ ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಚರ್ಚಿಸಿದರು.
ಅಂಗನವಾಡಿ ಕಾರ್ಯಕರ್ತೆಯರನ್ನು ಚುನಾವಣೆ ಕೆಲಸಗಳಿಗೆ ನಿಯೋಜಿಸದಿರುವ ಬಗ್ಗೆ ಚುನಾವಣೆ ಆಯೋಗದ ಜತೆ ಚರ್ಚೆ ನಡೆಸಲಾಗುವುದು ಹಾಗೂ ಎಲ್ಲಾ ನೌಕರರಿಗೂ ಕೆಲಸದ ಒತ್ತಡ ಕಡಿಮೆ ಮಾಡುವ ಬಗ್ಗೆ ಕ್ರಮ ವಹಿಸಲಾಗುವುದು ಎಂದು ಸಚಿವೆ ಅನ್ನಪೂರ್ಣದೇವಿ ಅವರು ಭರವಸೆ ನೀಡಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯದ ವ್ಯಾಪ್ತಿಗೆ ಬರುವ ಎಲ್ಲಾ ಬೇಡಿಕೆಗಳ ಈಡೇರಿಕೆಗೆ ಕ್ರಮ ವಹಿಸಲಾಗುವುದು. ನಿಮ್ಮ ಮೇಲಿನ ಕಾಳಜಿ ಹಾಗೂ ಮಾನವೀಯ ನೆಲೆಗಟ್ಟಿನ ಮೇರೆಗೆ ಬೇಡಿಕೆಗಳ ಈಡೇರಿಕೆಗೆ ಪರಿಶೀಲನೆ ನಡೆಸಲಾಗುವುದು ಎಂದು ಅನ್ನಪೂರ್ಣದೇವಿ ಅವರು ಭರವಸೆ ನೀಡಿದರು.
ಟಿಎನ್‌ಐಇ ಜೊತೆ ಮಾತನಾಡಿದ ಕರ್ನಾಟಕದ ಸಿಐಟಿಯು ನಾಯಕಿ ವರಲಕ್ಷ್ಮಿ, "ನಾವು ಇಲ್ಲಿ ಕಾರ್ಮಿಕರ ಬೇಡಿಕೆಗಳನ್ನು ಮಂಡಿಸಿದ್ದೇವೆ. ಬೇಡಿಕೆಗಳನ್ನು ಪ್ರಧಾನಿ ನರೇಂದ್ರ ಮೋದಿಯವರ ಮುಂದೆ ಇಡಲಾಗುವುದು. ಮಧ್ಯಾಹ್ನದ ಊಟ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತರ ಕಲ್ಯಾಣಕ್ಕಾಗಿ ಈ ವರ್ಷದ ಬಜೆಟ್‌ನಲ್ಲಿ ಹಣವನ್ನು ಒದಗಿಸಲು ಕರೆ ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



