ಪದೇ ಪದೇ ಜಗಳ: ಪತಿಯ ವರ್ತನೆಗೆ ಬೇಸತ್ತು ಮಗು ಕೊಂದು, ತಾಯಿ ಆತ್ಮಹತ್ಯೆಗೆ ಯತ್ನ
ತಿಗಳರಪಾಳ್ಯದ ಒಂದು ವರ್ಷ ಎಂಟು ತಿಂಗಳ ಪುತ್ರಿ ಚಾರ್ವಿ ಮೃತ ದುರ್ದೈವಿ. ವಿಷ ಸೇವಿಸಿದ್ದ ಚಂದ್ರಿಕಾ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

ಬೆಂಗಳೂರು: ಹಣಕಾಸು, ಕೌಟುಂಬಿಕ ವಿಷಯಕ್ಕೆ ಪದೇ ಪದೇ ಪತಿ ಜಗಳ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಬೇಸತ್ತ ಪತ್ನಿಯೊಬ್ಬಳು ಮಗು ಕೊಂದು, ತಾನೂ ಆತ್ಮಹತ್ಯೆಗೆ ಯತ್ನಿಸಿರುವ ಘಟನೆಯೊಂದು ತಿಗಳರಪಾಳ್ಯದ ಬಾಲಾಜಿನಗರದಲ್ಲಿ ಮಂಗಳವಾರ ನಡೆದಿದೆ.
ತಿಗಳರಪಾಳ್ಯದ ಒಂದು ವರ್ಷ ಎಂಟು ತಿಂಗಳ ಪುತ್ರಿ ಚಾರ್ವಿ ಮೃತ ದುರ್ದೈವಿ. ವಿಷ ಸೇವಿಸಿದ್ದ ಚಂದ್ರಿಕಾ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಮನೆಯಲ್ಲಿ ಪತಿ ಕೆಲಸಕ್ಕೆ ತೆರಳಿದ ಬಳಿಕ ಮಗುವಿಗೆ ಕೀಟನಾಶಕ ಬೆರೆಸಿದ ಚಹಾ ಕುಡಿಸಿ ಬಳಿಕ ತಾನೂ ಸಹ ಸೇವಿಸಿದ್ದಾಳೆ. ನಂತರ ತನ್ನ ಗಂಡನಿಗೆ ಆತ್ಮಹತ್ಯೆ ವಿಷಯವನ್ನು ಚಂದ್ರಿಕಾ ತಿಳಿಸಿದ್ದಾಳೆ.
ತಕ್ಷಣ ಆತಂಕದಿಂದ ಮನೆಗೆ ಧಾವಿಸಿದ ಮಹಿಳೆಯ ಪತಿ, ವಿಷ ಸೇವಿಸಿದ್ದ ಪತ್ನಿ ಹಾಗೂ ಮಗುವನ್ನು ಮಲ್ಲೇಶ್ವರ ಕೆ.ಸಿ. ಜನರಲ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಮಗುವನ್ನು ವಾಣಿ ವಿಲಾಸ ಆಸ್ಪತ್ರೆಗೆ ಹಾಗೂ ಚಂದ್ರಿಕಾಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸ್ಥಳಾಂತರಿಸಿದರು. ಆದರೆ, ಚಿಕಿತ್ಸೆ ಫಲಿಸದೆ ಮಗು ಸಾವನ್ನಪ್ಪಿದೆ. ಚಂದ್ರಿಕಾ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.
ತುಮಕೂರು ಜಿಲ್ಲೆಯ ಕೊರಟೆಗೆರೆ ತಾಲೂಕಿನ ತೋವಿನಿ ಕೆರೆಯ ಚಿಕ್ಕನಹಳ್ಳಿಯ ಚಂದ್ರಿಕಾ ಹಾಗೂ ಲೋಕೇಶ್ ವಿವಾಹವಾಗಿದ್ದು, ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ನಗರದಲ್ಲಿ ಗಾರ್ಮೆಂಟ್ಸ್ ಕೆಲಸ ಮಾಡುತ್ತಿದ್ದ ಲೋಕೇಶ್, ತಿಗಳರಪಾಳ್ಯದಲ್ಲಿ ತನ್ನ ಕುಟುಂಬದ ಜೊತೆ ವಾಸವಾಗಿದ್ದಾರೆ. ತನ್ನ ಇಬ್ಬರು ಮಕ್ಕಳ ಪೈಕಿ ಮಗನನ್ನು ತವರು ಮನೆಯಲ್ಲೇ ಚಂದ್ರಿಕಾ ಬಿಟ್ಟಿದ್ದಳು.
ಇತ್ತೀಚೆಗೆ ಹಣಕಾಸು ಹಾಗೂ ಕೌಟುಂಬಿಕ ವಿಷಯವಾಗಿ ದಂಪತಿ ಮಧ್ಯೆ ಮನಸ್ತಾಪವಾಗಿತ್ತು. ಇದೇ ವಿಚಾರವಾಗಿ ಆಗಾಗ್ಗೆ ಮನೆಯಲ್ಲಿ ಸತಿ-ಪತಿ ಜಗಳವಾಡುತ್ತಿದ್ದರು. ಅಂತೆಯೇ ಸೋಮವಾರ ರಾತ್ರಿ ಜಗಳವಾಗಿದೆ. ಇದರಿಂದ ಬೇಸತ್ತ ಚಂದ್ರಿಕಾ, ಮರುದಿನ ತನ್ನ ಪತಿ ಕೆಲಸಕ್ಕೆ ತೆರಳಿದ ಮೇಲೆ ಮಗಳಿಗೆ ಚಹಾದಲ್ಲಿ ಕೀಟನಾಶಕ ಮಿಶ್ರಣ ಮಾಡಿ ಕುಡಿಸಿ ಬಳಿಕ ಚಂದ್ರಿಕಾ ಸೇವಿಸಿದ್ದಾಳೆ.
ಪತಿಯ ದೂರಿನ ಮೇರೆಗೆ ಬ್ಯಾಡರಹಳ್ಳಿ ಪೊಲೀಸರು ಚಂದ್ರಿಕಾ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ್ದಾರೆ. ಮಹಿಳೆ ವಿರುದ್ಧ ಬಿಎನ್ಎಸ್ ಸೆಕ್ಷನ್ 103(1) ರ ಅಡಿಯಲ್ಲಿ ಕೊಲೆ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



