ಇದು ಜಾತಿಗಣತಿಯಲ್ಲ, ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆ; ಯಾರಿಗೂ ಅನ್ಯಾಯವಾಗಲು ಬಿಡಲ್ಲ: ಸಿಎಂ ಸಿದ್ದರಾಮಯ್ಯ
ಸಚಿವ ಸಂಪುಟ ಸಭೆಯಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಸಚಿವರಿಗೆ ಅವಕಾಶ ನೀಡಲಾಗುವುದು. ಇದು ಜನಗಣತಿ ಅಲ್ಲ. ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಅಷ್ಟೇ. ಆದರೂ, ಯಾರಿಗೂ ಅನ್ಯಾಯವಾಗಲು ಅವಕಾಶ ನೀಡುವುದಿಲ್ಲ.

ಕಲಬುರಗಿ: ಇದು ಜಾತಿಗಣತಿ ಅಲ್ಲ, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ. ಇದರಿಂದ ಯಾರಿಗೂ ಅನ್ಯಾಯವಾಗಲು ಅವಕಾಶ ನೀಡುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಹೇಳಿದ್ದಾರೆ.
ವಿಭಾಗ ಮಟ್ಟದ ಉದ್ಯೋಗ ಮೇಳದ ಉದ್ಘಾಟನೆ ಸಮಾರಂಭದಲ್ಲಿ ಪಾಲ್ಗೊಳ್ಳಲು ನಗರಕ್ಕೆ ಬಂದ ಸಂದರ್ಭದಲ್ಲಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರರೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟ ಸಭೆಯಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಸಚಿವರಿಗೆ ಅವಕಾಶ ನೀಡಲಾಗುವುದು. ಇದು ಜನಗಣತಿ ಅಲ್ಲ. ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಅಷ್ಟೇ. ಆದರೂ, ಯಾರಿಗೂ ಅನ್ಯಾಯವಾಗಲು ಅವಕಾಶ ನೀಡುವುದಿಲ್ಲ. ಒಕ್ಕಲಿಗ ಸಮುದಾಯದ ಸಚಿವರು, ಶಾಸಕರ ಅಭಿಪ್ರಾಯಗಳನ್ನೂ ಆಲಿಸಲಾಗುವುದು ಎಂದು ಹೇಳಿದರು.
ಉದ್ಯೋಗ ಮೇಳಗಳನ್ನು ಏರ್ಪಡಿಸುವ ಮೂಲಕ ಯುವಜನತೆಗೆ ಉದ್ಯೋಗ ನೀಡುವುದು ನಮ್ಮ ಸರ್ಕಾರದ ಬದ್ಧತೆ. ವಿಭಾಗೀಯ ಮಟ್ಟದ ಉದ್ಯೋಗ ಮೇಳವನ್ನು ಕಲಬುರ್ಗಿಯಲ್ಲಿ ಇಂದು ಏರ್ಪಡಿಸಲಾಗಿದೆ. ಮೈಸೂರು ಹಾಗೂ ಹುಬ್ಬಳ್ಳಿ, ಧಾರವಾಡದಲ್ಲಿಯೂ ಉದ್ಯೋಗ ಮೇಳವನ್ನು ಏರ್ಪಡಿಸಲಾಗುತ್ತಿದೆ. ಯುವನಿಧಿ ಯೋಜನೆಯನ್ನು ಜಾರಿ ಮಾಡಿದ್ದು, ನಮಗೆ ನಿರುದ್ಯೋಗದ ಸಮಸ್ಯೆ ನಿವಾರಣೆಯ ಉದ್ದೇಶವಿದೆ. ಉದ್ಯೋಗವನ್ನು ಕೊಡುವ ಕೆಲಸವನ್ನು ಸರ್ಕಾರ ಮಾಡುತ್ತಿದೆ ಎಂದು ತಿಳಿಸಿದರು.
ನಾಳೆ ಸಾಮಾಜಿಕ, ಆರ್ಥಿಕ ಸಮೀಕ್ಷೆಯ ಕುರಿತು ಪ್ರತ್ಯೇಕವಾಗಿ ಸಚಿವ ಸಂಪುಟ ಸಭೆಯನ್ನು ಕರೆಯಲಾಗಿದ್ದು, ಈ ಬಗ್ಗೆ ಚರ್ಚೆ ಮಾಡಲಾಗುವುದು. ಶಾಸಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನಾಳೆ ಅಂತಿಮವಾಗಿ ತೀರ್ಮಾನ ಮಾಡಲಾಗುವುದು. ಸಾಮಾಜಿಕ, ಆರ್ಥಿಕ ಸಮೀಕ್ಷೆ ಇದಾಗಿದ್ದು, ಯಾವ ಸಮುದಾಯದವರಿಗೂ ಅನ್ಯಾಯವಾಗಲು ನಾವು ಬಿಡುವುದಿಲ್ಲ.
ದಾವಣಗೆರೆಯಲ್ಲಿ ಅನೈತಿಕ ಸಂಬಂಧದ ಆರೋಪದ ಮೇಲೆ ನಡುರಸ್ತೆಯಲ್ಲಿ ಮಹಿಳೆಯ ಮೇಲೆ ಹಲ್ಲೆ ನಡೆಸಿರುವುದು ಅಮಾನವೀಯ, ಅಪರಾಧ. ಯಾರೇ ತಪ್ಪು ಮಾಡಿದರೂ ಕೂಡ ಕ್ರಮ ಖಚಿತ, ಕಾನೂನು ಉಲ್ಲಂಘಿಸಿದರೆ ಯಾರು ಎಷ್ಟೇ ಪ್ರಬಲವಾಗಿದ್ದರೂ, ಬಲಿ ಹಾಕುತ್ತೇವೆ ಎಂದರು.
ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ನಮ್ಮ ನಾಯಕಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಯವರ ಮೇಲೆ ಚಾರ್ಜ್ ಶೀಟ್ ಹಾಕಿದ್ದಾರೆ. ಬಿಜೆಪಿಯವರು ರಾಜಕೀಯ ಉದ್ದೇಶದಿಂದ ಇದನ್ನು ಮಾಡುತ್ತಿದ್ದಾರೆ. ನ್ಯಾಷನಲ್ ಹೆರಾಲ್ಡ್ ಪತ್ರಿಕೆ ನಿನ್ನೆ ಮೊನ್ನೆ ಪ್ರಾರಂಭವಾಗಿಲ್ಲ. ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯವರ ಆಸ್ತಿ ಮುಟ್ಟುಗೋಲು ಹಾಕುವುದು, ಚಾರ್ಚ್ ಶೀಟ್ ಹಾಕುವುದು ರಾಜಕೀಯ ದ್ವೇಷದಿಂದ ಮಾಡುತ್ತಿದ್ದಾರೆ ಅಷ್ಟೆ ಎಂದು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



