ರಾಜ್ಯ

ತುಂಗಭದ್ರಾ ಜಲಾಶಯ: ಆಯಸ್ಸು ಮುಗಿದ ಕ್ರೆಸ್ಟ್​ಗೇಟ್​ ಬದಲಾವಣೆಗೆ ಸರ್ಕಾರ ಮುಂದು, ಟೆಂಡರ್'ಗೆ ಆಹ್ವಾನ

ಅಧಿಕಾರಿಗಳ ನಡೆ ರೈತರು ನಿರಾಳಗೊಳ್ಳುವಂತೆ ಮಾಡಿದ್ದು, ಕ್ರೆಸ್ಟ್​ಗೇಟ್ ಮರುಸ್ಥಾಪಿಸುವ ಕಾರ್ಯ ತಿಂಗಳೊಳಗೆ ಪ್ರಾರಂಭವಾಗುವ ನಿರೀಕ್ಷೆಗಳಿವೆ.

ತುಂಗಭದ್ರಾ ಜಲಾಶಯ: ಆಯಸ್ಸು ಮುಗಿದ ಕ್ರೆಸ್ಟ್​ಗೇಟ್​ ಬದಲಾವಣೆಗೆ ಸರ್ಕಾರ ಮುಂದು, ಟೆಂಡರ್'ಗೆ ಆಹ್ವಾನ
ತುಂಗಭದ್ರಾ ಜಲಾಶಯ
Published On :

ಹೊಸಪೇಟೆ: ತುಂಗಭದ್ರಾ ಜಲಾಶಯದ 19ನೇ ಕ್ರೆಸ್ಟ್​ಗೇಟ್ ಕೊಚ್ಚಿಕೊಂಡು ಹೋಗಿ ಅಪಾರ ಪ್ರಮಾಣದ ನೀರು ವ್ಯರ್ಥವಾದ ಘಟನೆ ಬಳಿಕ ಎಚ್ಚೆತ್ತ ರಾಜ್ಯ ಸರ್ಕಾರ, ಇದೀಗ ಆಯಸ್ಸು ಮುಗಿದಿರುವ ಕ್ರೆಸ್ಟ್​ಗೇಟ್'ಗಳ ಬದಲಾವಣೆಗೆ ಮುಂದಾಗಿದೆ.

ತಜ್ಞರ ತಂಡವು ಅಣೆಕಟ್ಟಿನ ಎಲ್ಲಾ ಕ್ರೆಸ್ಟ್ ಗೇಟ್‌ಗಳನ್ನು ಬದಲಾಯಿಸಲು ಶಿಫಾರಸು ಮಾಡಿದ ಹಿನ್ನೆಲೆಯಲ್ಲಿ ಜಲಾಶಯದ ಮಂಡಳಿಯು ಇದೀಗ ಕ್ರೆಸ್ಟ್ ಗೇಟ್‌ ಬದಲಾವಣೆಗೆ ಟೆಂಡರ್'ಗೆ ಆಹ್ವಾನಿಸಿದೆ. ಅಧಿಕಾರಿಗಳ ನಡೆ ರೈತರು ನಿರಾಳಗೊಳ್ಳುವಂತೆ ಮಾಡಿದ್ದು, ಕ್ರೆಸ್ಟ್​ಗೇಟ್ ಮರುಸ್ಥಾಪಿಸುವ ಕಾರ್ಯ ತಿಂಗಳೊಳಗೆ ಪ್ರಾರಂಭವಾಗುವ ನಿರೀಕ್ಷೆಗಳಿವೆ.

ಕಳೆದ ವರ್ಷ ಆಗಸ್ಟ್‌ನಲ್ಲಿ, ಭಾರೀ ಮಳೆಯ ನಡುವೆ ನೀರಿನ ಒಳಹರಿವು ಹೆಚ್ಚಾಗಿದ್ದ ಪರಿಣಾಮ ಕ್ರೆಸ್ಟ್ ಗೇಟ್ ಸಂಖ್ಯೆ 19 ಕೊಚ್ಚಿಕೊಂಜು ಹೋಗಿತ್ತು. ಈ ವೇಳೆ ಅಪಾರ ಪ್ರಮಾಣದ ನೀರು ವ್ಯರ್ಥವಾಗಿತ್ತು. ಬಳಿಕ ಹೈಡ್ರೊ ಮೆಕ್ಯಾನಿಕಲ್ ಎಂಜಿನಿಯರಿಂಗ್‌ ತಜ್ಞ ಕನ್ನಯ್ಯ ನಾಯ್ಡು ನೇತೃತ್ವದ ತಂಡವು ತಾತ್ಕಾಲಿಕ ಗೇಟ್ ಅಳವಡಿಸಿ 50 ಟಿಎಂಸಿ ನೀರನ್ನು ಉಳಿಸಿತ್ತು.

ನಂತರ 33 ಕ್ರೆಸ್ಟ್ ಗೇಟ್‌ಗಳನ್ನು ಹೊಂದಿರುವ ಈ ಜಲಾಶಯದ ಕುರಿತು ಅಧ್ಯಯನ ಮಾಡಲು ರಾಜ್ಯ ಸರ್ಕಾರ ಕೇಂದ್ರ ಜಲ ಮಂಡಳಿಯ (ಸಿಡಬ್ಲ್ಯೂಸಿ) ಅಡಿಯಲ್ಲಿ ಸಮಿತಿಯನ್ನು ರಚಿಸಿತ್ತು. ಈ ಸಮಿತಿಯು ಇತ್ತೀಚೆಗೆ ತನ್ನ ವರದಿಯನ್ನು ಸಲ್ಲಿಸಿದ್ದು, ಎಲ್ಲಾ ಕ್ರೆಸ್ಟ್ ಗೇಟ್‌ಗಳನ್ನು ಬದಲಾಯಿಸಬೇಕು, ಹೊಸ ತಂತ್ರಜ್ಞಾನವನ್ನು ಪರಿಚಯಿಸಬೇಕು ಎಂದು ಶಿಫಾರಸು ಮಾಡಿತ್ತು.

ತುಂಗಭದ್ರಾ ಅಣೆಕಟ್ಟು ಮಂಡಳಿಯ ಹಿರಿಯ ಅಧಿಕಾರಿಯೊಬ್ಬರು ಮಾತನಾಡಿ, ಏಪ್ರಿಲ್ 11 ರಂದು ಹೊಸ ಕ್ರೆಸ್ಟ್ ಗೇಟ್ ಅಳವಡಿಕೆಗೆ ಮಂಡಳಿಯು ಟೆಂಡರ್ ಆಹ್ವಾನಿಸಿದ್ದು, ಈ ಕಾರ್ಯಕ್ಕೆ ರೂ.2 ಕೋಟಿ ವೆಚ್ಚವಾಗಲಿದೆ ಎಂದು ಹೇಳಿದ್ದಾರೆ.

ಪ್ರಸ್ತುತ, ಅಣೆಕಟ್ಟಿನಲ್ಲಿ 105 ಟಿಎಂಸಿ ನೀರು ಸಂಗ್ರಹವಾಗಿದ್ದು, ಒಪ್ಪಂದದ ಪ್ರಕಾರ, ನಾವು ಇತರ ಎರಡು ರಾಜ್ಯಗಳಿಗೆ ನೀರನ್ನು ಬಿಡುಗಡೆ ಮಾಡುತ್ತಿದ್ದೇವೆ. ಪ್ರಸ್ತುತ ಹಾನಿಗೊಳಗಾಗಿರುವ ಕ್ರೆಸ್ಟ್ ಗೇಟ್ ಬದಲಾಯಿಸುತ್ತಿದ್ದು, ಭವಿಷ್ಯದಲ್ಲಿ, ಎಲ್ಲಾ ಕ್ರೆಸ್ಟ್ ಗೇಟ್‌ಗಳನ್ನು ಹಂತ ಹಂತವಾಗಿ ಬದಲಾಯಿಸಲಾಗುವುದು. ಹೊಸ ತಂತ್ರಜ್ಞಾನಗಳನ್ನು ಅಳವಡಿಸಲಾಗುವುದು ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.